ಕುಂದಗೋಳ: ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡ್ರ ಅವರು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿರುದ್ಧ ಮಾಡಿರುವ ಆರೋಪ ನಿರಾಧಾರವಾಗಿದೆ ಎಂದು ಶಾಸಕ ಎಂ.ಆರ್. ಪಾಟೀಲ ಹೇಳಿದರು.
ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ ತಾಲೂಕಿನ 5 ಗ್ರಾಮಗಳ ಭೂಸ್ವಾಧೀನದಲ್ಲಿ ಜೋಶಿಯವರ ಪಾತ್ರ ಏನೂ ಇಲ್ಲ. ಈಗ ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಚಿಕ್ಕನಗೌಡ್ರ ಈ ರೀತಿ ಆರೋಪಿಸುತ್ತಿರುವುದು ಸರಿಯಲ್ಲ. ಈ ಭಾಗದಲ್ಲಿ ಅನೇಕ ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದ್ದು, ಕೆಲವರು ಈ ರೀತಿ ಸತ್ಯಕ್ಕೆ ದೂರವಾದ ಸಂಗತಿಗಳನ್ನು ಹರಿಬಿಡುತ್ತಿದ್ದಾರೆ ಎಂದು ಹೇಳಿದರು.
ಈ ಪ್ರಕ್ರಿಯೆ 2022ರಲ್ಲಿಯೇ ನಡೆದಿದೆ ಎಂದಿದ್ದಾರೆ. ಚಿಕ್ಕನಗೌಡ್ರ ಅವರು ಈ ಹಿಂದೆ ಬಿಜೆಪಿಯಲ್ಲಿದ್ದರು. ಈ ಕುರಿತು ಅಂದು ಏಕೆ ಪ್ರಶ್ನಿಸಲಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ನನ್ನ ವಿರುದ್ಧ ಸ್ಪರ್ಧಿಸಿ 3ನೇ ಸ್ಥಾನಕ್ಕೆ ಇಳಿದಿದ್ದು, ಇದೀಗ ಹತಾಶಭಾವದಿಂದ ಈ ರೀತಿ ಆರೋಪಿಸುತ್ತಿದ್ದಾರೆ. ಸಂಸದ ಜೋಶಿಯವರ ವಿರುದ್ಧ ಮಾತನಾಡುವವರು ತೀರಾ ಸಣ್ಣವರಾಗುತ್ತಾರೆ ಎಂದು ಕುಟುಕಿದರು.
ಮಾಜಿ ಶಾಸಕ ಚಿಕ್ಕನಗೌಡ್ರ ಅವರು ರೈತರ ಪರ ಎಂದು ಬೀಗುತ್ತಿದ್ದಾರೆ. ಅವರ ಅಧಿಕಾರವಧಿ ಹಾಗೂ ಇದುವರೆಗೂ ರೈತರ ಪರವಾಗಿ ಯಾವ ಹೋರಾಟ ಮಾಡಿದ್ದಾರೆ ಎಂಬುದನ್ನು ತೋರಿಸಲಿ ಎಂದು ಸವಾಲು ಹಾಕಿದರು.
ಭೂಸ್ವಾಧೀನ ಪ್ರಕ್ರಿಯೆ ನಡೆದಿರುವುದು ಸತ್ಯವೇ ಎಂಬ ಮಾಧ್ಯಮದವರ ಪ್ರಶ್ನೆಗೆ ಈ ಬಗೆಗೆ ನನಗೆ ಮಾಹಿತಿ ಇಲ್ಲ. ಆದರೆ, ಫಲವತ್ತಾದ ಭೂಮಿಯನ್ನು ಭೂ ಸ್ವಾಧೀನಪಡಿಸಿಕೊಳ್ಳುತ್ತಿದ್ದರೆ ಅದಕ್ಕೆ ನಮ್ಮದೂ ವಿರೋಧವಿದೆ ಎಂದರು.
ಜಿಪಂ ಮಾಜಿ ಸದಸ್ಯರಾದ ಎನ್.ಎನ್. ಪಾಟೀಲ, ಭರಮಪ್ಪ ಮುಗಳಿ, ಮುಖಂಡರಾದ ಮಾಲತೇಶ ಶ್ಯಾಗೋಟಿ, ದಾನಪ್ಪ ಗಂಗಾಯಿ, ಶೇಖಣ್ಣ ಬಾಳಿಕಾಯಿ, ಬಸವರಾಜ ಕೊಪ್ಪದ, ಭರಮಗೌಡ ದ್ಯಾವನಗೌಡ್ರ, ಪ್ರಕಾಶ ಕೂಬಿಹಾಳ, ನಾಗರಾಜ ದೇಶಪಾಂಡೆ,ಪಪಂ ಸದಸ್ಯೆ ಗಣೇಶ ಕೋಕಾಟೆ, ಹನುಮಂತ ರಣತೂರ, ಹನುಮಂತಪ್ಪ ಮೇಲಿನಮನಿ, ನಿಂಗಪ್ಪ ನಲವಾಲ, ಬಿ.ಟಿ. ಗಂಗಾಯಿ, ರಾಜು ಶಿವಳ್ಳಿ ಇದ್ದರು.