ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಕರವೇ ಜಿಲ್ಲಾಧ್ಯಕ್ಷ ಬಸವರಾಜ ಧರ್ಮಂತಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಯುವ ಘಟಕದ ಜಿಲ್ಲಾಧ್ಯಕ್ಷ ಆತ್ಮಾರಾಮ ನೀಲನಾಯಕ, ಸಂಘಟನಾ ಕಾರ್ಯದರ್ಶಿ ಮಲ್ಲು ಕಟ್ಟಿಮನಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಭಾಗ್ಯಾ ಬೆಟಗೇರಿ, ನಗರ ಅಧ್ಯಕ್ಷ ಬಸವರಾಜ ಅಂಬಿಗೇರ ಉಪಸ್ಥಿತರಿದ್ದರು. 
ಜಿಲ್ಲೆ

ಬೇನಾಮಿ ಕಂಪನಿಗೆ ಭೂಮಿ ಹಸ್ತಾಂತರ ಆರೋಪ : ತೃತೀಯ ಸಂಸ್ಥೆಯಿಂದ ತನಿಖೆಗೆ ಕರವೇ ಆಗ್ರಹ

ಬಾಗಲಕೋಟೆ: ನವನಗರದಲ್ಲಿ ಗ್ರೀನ್ ಫುಡ್ ಪಾರ್ಕ್ ಲಿಮಿಟೆಡ್ ಕಂಪನಿಗೆ ಹಂಚಿಕೆಯಾಗಿದ್ದ 100 ಎಕರೆ ಪೈಕಿ ಹಿಂಪಡೆದ 53 ಎಕರೆ 25 ಗುಂಟೆ ಭೂಮಿಯನ್ನು ಕಾನೂನುಬಾಹಿರವಾಗಿ ಬೆಳಗಾವಿಯ ಗುರುದತ್ತ ಇಂಟಿಗ್ರೇಟೆಡ್ ಟೆಕ್ಸ್ ಟೈಲ್ಸ್ ಪಾರ್ಕ್‌ಗೆ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಸಚಿವರು, ಅಧಿಕಾರಿಗಳ ಕೈವಾಡ ಅಡಗಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಬಸವರಾಜ ಧರ್ಮಂತಿ ಆರೊಪಿಸಿದರು.

ಬೆಳಗಾವಿ ಮೂಲದ ಗುರುದತ್ತ ಕಂಪನಿ ಸಚಿವರ ಬೇನಾಮಿ ಕಂಪನಿಯಾಗಿದೆ ಎಂಬ ಸಂಶಯವಿದೆ. 53.25 ಎಕರೆ ಭೂಮಿಯನ್ನು ತರಾತುರಿ ಹಂಚಿಕೆಯಲ್ಲಿ ಕೈಗಾರಿಕೆ ಸಚಿವರ, ಕೆಐಎಡಿಬಿ ಅಧಿಕಾರಿಗಳ ಹಿತಾಸಕ್ತಿ ಅಡಗಿದೆ. ಬಾಗಲಕೋಟೆ ಶಾಸಕರು ಈ ಬಗ್ಗೆ ಗಮನಹರಿಸದೆ ಇರುವುದು ದುರಂತ ಸಂಗತಿ. ಇದರಲ್ಲಿರುವ ಸತ್ಯಾಂಶ ತಿಳಿಸಲು ತೃತೀಯ ಸಂಸ್ಥೆಗಳ ಮೂಲಕ ತನಿಖೆ ನಡೆಸಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಗ್ರೀನ್ ಫುಡ್ ಪಾರ್ಕ್ ಕಂಪನಿಯಿಂದ ಹಿಂಪಡೆದ 53.22 ಎಕರೆ ಭೂಮಿಯನ್ನು ಹಂಚಿಕೆ ಮಾಡಲು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರಾ ? ಗುರುದತ್ತ ಇಂಟಿಗ್ರೇಟೆಡ್ ಟೆಕ್ಸ್‌ಟೈಲ್ಸ್ ಪಾರ್ಕ್ ಕಂಪನಿ ಬೆಳಗಾವಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆಯೇ ಅಥವಾ ಬೇನಾಮಿ ಕಂಪನಿಯೇ ? ಹಿಂಪಡೆದ 53.22 ಎಕರೆ ಪೈಕಿ 53.25 ಎಕರೆ ಭೂಮಿಯನ್ನು ಹಂಚಿಕೆ ಮಾಡಿದ್ದಿರಲ್ಲ ಹೆಚ್ಚುವರಿ 3 ಗುಂಟೆ ಹೈಟೆಕ್ ಹಾಲಿನ ಡೇರಿ ಕಟ್ಟಡವೇ ? ಎಂದು ಪ್ರಶ್ನಿಸಿದರು.

ಇನ್ನು ಮೀಸಲಾತಿ ಅನುಸಾರ ಭೂಮಿ ಹಂಚಿಕೆ ಮಾಡಬೇಕಿತ್ತು. ಏಕೆ ಮಾಡಿಲ್ಲ? ಕೋಟ್ಯಂತರ ರೂ. ಮೌಲ್ಯದ ಭೂಮಿ ಒಂದೇ ಕಂಪನಿಗೆ ನೀಡಿರುವ ಉದ್ದೇಶದಲ್ಲಿ ಕೇಂದ್ರ, ರಾಜ್ಯ ಸರ್ಕಾರ ಯೋಜನೆಗಳ ದುರ್ಬಳಕೆ ಮಾಡಿಕೊಳ್ಳಲು ಮಾಡಿದ ಪಿತೂರಿನಾ? ಎಂದು ಪ್ರಶ್ನೆಗಳ ಸುರಿ ಮಳೆಗೈದರು.

ನವನಗರದಲ್ಲಿ ಜನರಿಗೆ ಉದ್ಯೋಗ ನೀಡಲು ಕೈಗಾರಿಕೆ ಸ್ಥಾಪಿಸಲು ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ 300 ಎಕರೆ ಜಮೀನು ಕೆಐಡಿಬಿಗೆ ಹಸ್ತಾಂತರ ಮಾಡಿತ್ತು. 2005 ರಲ್ಲಿ ಆಹಾರ ಉತ್ಪನ್ನಗಳ ತಯಾರಿಕೆ ಮತ್ತು ಸಂಗ್ರಹಾಗಾರಗಳ ನಿರ್ಮಾಣಕ್ಕಾಗಿ ಉದ್ಯಮಗಳನ್ನು ಸ್ಥಾಪಿಸಲು ರಸ್ತೆ, ವಿದ್ಯುತ್, ನೀರು, ಚರಂಡಿ ಹಾಗೂ ಇತರೆ ಸೌಲಭ್ಯಗಳನ್ನು ಕಲ್ಪಿಸಲು 5 ವರ್ಷಗಳ ಕಾಲಮಿತಿಯೊಳಗೆ ಆಂಧ್ರ ಮೂಲದ ಗ್ರೀನ್ ಫುಡ್ ಪಾರ್ಕ್ ಲಿಮಿಟೆಡ್ ಜಂಟಿ ಸಹಭಾಗಿತ್ವ ಕಂಪನಿಗೆ ಎಕರೆಗೆ 1 ಲಕ್ಷ ರೂ.ಗಳಂತೆ 100 ಎಕರೆ ಭೂಮಿಯನ್ನು ಗುತ್ತಿಗೆ ನೀಡಲಾಗಿತ್ತು. 16 ವರ್ಷವಾದರೂ ಅಭಿವೃದ್ಧಿ ಮಾಡಲಿಲ್ಲ. ಒಂದು ಉದ್ಯೋಗ ಸೃಷ್ಟಿ ಮಾಡಲಿಲ್ಲ. ಈ ಬಗ್ಗೆ ಕರವೇ ಹೋರಾಟ ನಡೆಸಿದ ಪರಿಣಾಮ 100 ಎಕರೆ ಭೂಮಿ ಪೈಕಿ 2021 ಅಕ್ಟೋಬರ್ 30 ರಂದು ನಡೆದ 375ನೇ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಸಭೆಯಲ್ಲಿ 53 ಎಕರೆ 25 ಗುಂಟೆ ಭೂಮಿ ವಾಪಸ್ ಪಡೆಯಲು ನಿರ್ಣಯಿಸಲಾಗಿದೆ.

2022ಜನವರಿ 14 ರಂದು ನಡೆದ ಸಭೆಯಲ್ಲಿ ಮಂಡಳಿಯು ಭೂಮಿ ವಶಕ್ಕೆ ಪಡೆದುಕೊಂಡಿತು. ಕೇವಲ 15 ದಿನ ಅಂತರದಲ್ಲಿ ಜನವರಿ 29ಲಕ್ಷ್ಮೀಕಾಂತ ದಗಡುಲಾಲ್ ಮರ್ದಾ ಮಾಲೀಕತ್ವದ ಬೆಳಗಾವಿಯ ಗುರುದತ್ತ ಇಂಟಿಗ್ರೇಟೆಡ್ ಟೆಕ್ಸ್‌ಟೈಲ್ಸ್ ಪಾರ್ಕ್ ಕಂಪನಿಗೆ ಉದ್ದಿಮೆ ಸ್ಥಾಪಿಸಲು 80 ಎಕರೆ ಭೂಮಿಯನ್ನು ಹಂಚಿಕೆ ಮಾಡಲು ವಿನಂತಿಸಿದ ಕುರಿತು ಉಲ್ಲೇಖಿಸಿ ಶಿಫಾರಸು ಮಾಡಲಾಗಿತ್ತು. ಒಂದು ದಿನದ ಅಂತರದಲ್ಲಿ 2022 ರ 31ರಂದು ನಡೆದ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಏಕಗವಾಕ್ಷಿ ಭೂ ವಿಲೇವಾರಿ ಸಮಿತಿಯ ಸಭೆಯಲ್ಲಿ ಹಿಂಪಡೆದ 53 ಎಕರೆ 22 ಗುಂಟೆ ಭೂಮಿಯನ್ನು ಗುರುದತ್ತ ಕಂಪನಿಗೆ ನೀಡಲಾಗಿದೆ ಎಂದು ಆರೋಪಿಸಿದರು.

ಇಲ್ಲಿ ನಿಯಮಗಳ ಪ್ರಕಾರ ಯಾವುದೂ ನಡೆದಿಲ್ಲ. ಪತ್ರಿಕಾ ಪ್ರಕಟಣೆ ನೀಡಿಲ್ಲ. ಮೀಸಲಾತಿ ಅನ್ವಯ ಭೂಮಿ ಹಂಚಿಕೆ ಮಾಡಿಲ್ಲ. ಕೂಡಲೇ 53.25 ಎಕರೆ ಭೂಮಿಯನ್ನು ಮೀಸಲಾತಿ ಅನುಸಾರ ಹಂಚಿಕೆ ಮಾಡಲು ಆದೇಶಿಸಬೇಕು ಹಾಗೂ ಈಗ ಆಗಿರುವ ಹಂಚಿಕೆಯಲ್ಲಿ ನಡೆದಿರುವ ಅವ್ಯವಹಾರ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಕರವೇ ಯುವ ಘಟಕದ ಜಿಲ್ಲಾಧ್ಯಕ್ಷೃ ಆತ್ಮಾರಾಮ ನೀಲನಾಯಕ, ಸಂಘಟನಾ ಕಾರ್ಯದರ್ಶಿ ಮಲ್ಲು ಕಟ್ಟಿಮನಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಭಾಗ್ಯಾ ಬೆಟಗೇರಿ, ನಗರ ಅಧ್ಯಕ್ಷ ಬಸವರಾಜ ಅಂಬಿಗೇರ ಉಪಸ್ಥಿತರಿದ್ದರು.

ಕರವೇ ಮುಖಂಡರು ಮಾಡಿರುವ ಆರೋಪ ಸತ್ಯಕ್ಕೆ ದೂರವಾದ ಆಪಾದನೆ. ನಮ್ಮ ಕೆಐಎಡಿಬಿಗೆ ನವನಗರದ ಪ್ರಕಾರ ಹೂಡಿಕೆಗೆ ಅನುಗುಣವಾಗಿ ಆಯಾ ಸೆಕ್ಟರ್‌ಗೆ ಸಂಬಂಧಿಸಿದಂತೆ 10 ಗುಂಟೆಯಿಂದ 5000 ಎಕರೆ ಭೂಮಿಯನ್ನು ನೀಡಿರುವ ಬಗ್ಗೆ ನಮ್ಮಲ್ಲಿ ಸಾಕಷ್ಟು ಆಧಾರಗಳಿವೆ. ನಾವು ಯಾವುದೇ ಕಂಪನಿಗಳಿಗೆ ಭೂಮಿಯನ್ನು ಕೊಡಬೇಕಾದರೆ ಅವುಗಳಿಗಾಗಿ ಪತ್ರಿಕೆಗಳಲ್ಲಿ ಪ್ರಕಟ ನೀಡುವುದಿಲ್ಲ. ಲ್ಯಾಂಡ್ ಆಡಿಟ್ ಕಂಪನಿ ಮುಖಾಂತರ ಯಾವ ರೀತಿ ಹೂಡಿಕೆ ಮಾಡ್ತಾರೆ. ಯಾವ ರೀತಿ ಭೂಮಿಯನ್ನು ಬಳಕೆ ಮಾಡುತ್ತಾರೆ. ಈ ಹಿಂದೆ ವಿಜಯಪುರದ ಹೇಡ್‌ಕೋನಿಂಗ್ ಕಂಪನಿಗೆ 100 ಎಕರೆ ಭೂಮಿಯನ್ನು ಅಲ್ಲಿ ಟೆಕ್ಸ್‌ಟೈಲ್ ಮಿಲ್ ಮಾಡಲು 10 ವರ್ಷದ ಹಿಂದೆ ಕೊಟ್ಟಿದ್ದೇವೆ. ಈ ರೀತಿಯಾಗಿ ಕೊಡಲು ಅವಕಾಶವಿದೆ. ಕಾನೂನಿನ ಚೌಕಟ್ಟಿನಲ್ಲಿ ನಾವು ಭೂಮಿಯನ್ನು ಕೊಟ್ಟಿದ್ದೇವೆ. ರಾಜ್ಯದಲ್ಲಿ ಎಸ್‌ಸಿ, ಎಸ್ಟಿ ಸೇರಿದಂತೆ ಯಾರೇ ಬಂದರೂ ಅವರಿಗೆ ಪ್ರತಿಯೊಂದು ಜಿಲ್ಲೆಯಲ್ಲಿ ನಾವು ಭೂಮಿಯನ್ನು ಕೊಡಲು ಸಿದ್ಧರಿದ್ದೇವೆ. ಮುರುಗೇಶ ನಿರಾಣಿ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ