ಜಿಲ್ಲೆ

ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ; ಎಸ್​​ಐಟಿ ತನಿಖೆಗೆ ಸಿಎಂ ಆದೇಶ, ವಿದೇಶಕ್ಕೆ ಹಾರಿದ್ರಾ ಹಾಸನ ಸಂಸದ?

ಬೆಂಗಳೂರು: ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್​ಐಟಿ) ರಚಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಪ್ರಜ್ವಲ್ ರೇವಣ್ಣ ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಲೈಂಗಿಕ ದೌರ್ಜನ್ಯ ನಡೆಸಿರುವ ವಿಡಿಯೋ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್​ ಆಗುತ್ತಿವೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಒತ್ತಾಯ ಕೇಳಿ ಬಂದಿತ್ತು. ಈ ಪ್ರಕರಣ ಕುರಿತು ತನಿಖೆ ನಡೆಸುವುದಾಗಿ ಅವರು ಹೇಳಿದ್ದಾರೆ. ಈ ಕುರಿತು ಸಿಎಂ ಶನಿವಾರ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದಾರೆ.

ಪ್ರಜ್ವಲ್ ವಿಡಿಯೋ ತನಿಖೆ ಹೊಣೆ ವಿಶೇಷ ತಂಡಕ್ಕೆ: ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳುವಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಜೌಧರಿ ಸಿಎಂ ಸಿದ್ದರಾಮಯ್ಯ ಹಾಗೂ ಗೃಹಸಚಿವ ಡಾ. ಜಿ. ಪರಮೇಶ್ವರ್‌ಗೆ ಪತ್ರ ಬರೆದಿದ್ದರು. ಇದೀಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಇದರ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಿದೆ.

ವಿದೇಶಕ್ಕೆ ಹೋದರಾ ಪ್ರಜ್ವಲ್ ?: ಇನ್ನು ಒಂದೆಡೆ ವಿಡಿಯೋ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತಂಡ ರಚಿಸುತ್ತಿದ್ದಂತೆ, ಅತ್ತ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಿದ್ದಾರೆ ಹೇಳಲಾಗುತ್ತಿದೆ. ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನದಿಂದ ಜರ್ಮನಿಯ ಫ್ರಾಂಕ್‌ಫರ್ಟ್‌ಗೆ ಹೋಗಿದ್ದಾರೆ ಎಂದು ವರದಿಯಾಗಿದೆ. ಆದರೆ ಅವರು ಪೂರ್ವ ನಿಯೋಜಿತ ಕಾರ್ಯಕ್ರಮದ ನಿಮಿತ್ತ ವಿದೇಶಕ್ಕೆ ಹೋದರಾ? ಅಥವಾ ತನಿಖೆಗೆ ವಿಶೇಷ ತಂಡ ರಚನೆ ಆಗುತ್ತಿದೆ ಅಂತ ತಿಳಿದು ಹೋದರಾ ಎನ್ನುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಸಿಎಂ ಸಿದ್ದರಾಮಯ್ಯ ಪೋಸ್ಟ್​ನಲ್ಲಿ ಏನಿದೆ ?

ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ರಚಿಸಲು ಸರ್ಕಾರ ತೀರ್ಮಾನಿಸಿದೆ. ಹಾಸನ ಜಿಲ್ಲೆಯಲ್ಲಿ ಅಶ್ಲೀಲ ವೀಡಿಯೋ ತುಣುಕುಗಳು ಹರಿದಾಡುತ್ತಿದ್ದು, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಈ ಹಿನ್ನೆಲೆಯಲ್ಲಿ ಎಸ್ಐಟಿ ತನಿಖೆ ನಡೆಸುವಂತೆ ಮಹಿಳಾ ಆಯೋಗದ ಅಧ್ಯಕ್ಷರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಅವರ ಮನವಿಗೆ ಸ್ಪಂದಿಸಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಬರೆದುಕೊಂಡಿದ್ದಾರೆ.