ಜಿಲ್ಲೆ

ಖ್ಯಾತನಾಮರ ನಾಮಫಲಕವನ್ನು ಸರಿಯಾಗಿ ವಿಲೇವಾರಿ ಮಾಡದಿರುವ ಆರೋಪ: ಕಸೇಪ ಯಿಂದ ಪ್ರತಿಭಟನೆ

ಮೈಸೂರು: ದಸರಾ ವಸ್ತುಪ್ರದರ್ಶನ ಮೈದಾನದಿಂದ ತೆರವುಗೊಳಿಸಿದ ನಾಡಿನ ಖ್ಯಾತ ನಾಮರ ನಾಮಫಲಕವನ್ನು ಸರಿಯಾಗಿ ವಿಲೇವಾರಿ ಮಾಡಲ್ಲ ಎಂದು ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ.
ದಸರಾ ವಸ್ತುಪ್ರದರ್ಶನ ಆಚರಣದಲ್ಲಿ ನಾಡಿನ ಹಲವು ಸಾಹಿತಿಗಳ ಹೆಸರನ್ನು ರಸ್ತೆಗಳಿಗೆ ಇಟ್ಟು, ಆ ರಸ್ತೆಗಳಿಗೆ ನಾಮಫಲಕಗಳನ್ನು ಅಳವಡಿಸಲಾಗಿತ್ತು. ಇತ್ತೀಚೆಗೆ ಹಳೆಯ ನಾಮಫಲಕಗಳನ್ನು ತೆರವುಗೊಳಿಸಿ ನೂತನವಾಗಿ ಪಾರಂಪರಿಕ ಶೈಲಿಯ ನಾಮಫಲಕಗಳನ್ನು ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಹೀಗೆ ತೆರವುಗೊಳಿಸಿದ ಹಳೆ ನಾಮಫಲಕಗಳನ್ನು ಕಸದಂತೆ ಬಿಸಾಡಿರುವುದು ಕನ್ನಡ ಸಾಹಿತ್ಯ ಪ್ರೇಮಿಗಳ ಮನನೋಯಿಸಿದೆ. ಈ ಬಗ್ಗೆ ಆಕ್ಷೇಪವ್ಯಕ್ತಪಡಿಸಿದ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು, ದಸರಾ ವಸ್ತುಪ್ರದರ್ಶನದ ಮುಂಭಾಗ ಪ್ರತಿಭಟನೆ ನಡೆಸಿದರು.
ಪುರಂದರದಾಸರು, ಕನಕದಾಸರು, ದ.ರಾ ಬೇಂದ್ರೆ, ಕುವೆಂಪು, ಡಾ.ರಾಜ್ ಕುಮಾರ್, ವಿ.ಕೃ ಗೋಕಾಕ್, ಟಿ.ಎನ್. ಬಾಲಕೃಷ್ಣ, ಸಂಗೀತ ದಿಗ್ಗಜರಾದ ವಾಸುದೇವಾಚಾರ್ಯ, ಪಿಟೀಲು ಚೌಡಯ್ಯ ಸೇರಿದಂತೆ ಅನೇಕ ಮಹನೀಯರ ನಾಮಫಲಕಗಳನ್ನು ಅಳವಡಿಸಿ ವಸ್ತುಪ್ರದರ್ಶನಕ್ಕೆ ಬರುವವರಿಗೆ ಅವರನ್ನು ಸ್ಮರಿಸಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿತ್ತು. ಆದರೆ, ಅವುಗಳನ್ನು ತೆರವುಗೊಳಿಸಿ ಕಸದಂತೆ ಬಿಸಾಡುವುದು ಮಹನೀಯರಿಗೆ ಮಾಡಿದ ಅಪಮಾನ ಎಂದು ಟೀಕಿಸಿದರು.
ಮಾಜಿ ಮೇಯರ್ ಅಯೂಬ್ ಖಾನ್, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಿಸಿದ್ದು, ಪರಂಪರೆಯನ್ನು ಬಿಂಬಿಸುವ ದಸರೆಯ ಆರಂಭದ ದಿನವೇ ನಮ್ಮ ಪರಂಪರೆ, ಸಂಸ್ಕೃತಿ ಹಾಗೂ ಸಾಹಿತ್ಯಕ್ಕೆ ಮಹಾನ್ ಕೊಡುಗೆ ಕೊಟ್ಟ ಮಹಾನ್ ಸಾಧಕ ಮಹನೀಯರನ್ನು ಸ್ಮರಿಸುವ ಫಲಕಗಳನ್ನೆಲ್ಲ ಕಿತ್ತೆಸೆದು ವಿಕೃತಿ ಮೆರೆಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಕೂಡಲೇ ರಾಜ್ಯ ಸರ್ಕಾರ ನಾಡಿನ ಜನತೆಯ ಕ್ಷಮೆ ಯಾಚಿಸಬೇಕು. ಸ್ವತಃ ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ಅವರ ನೆರಳಿನಲ್ಲೇ ನಡೆದಿರುವ ದುಷ್ಕೃತ್ಯದ ಹೊಣೆ ಹೊರಬೇಕು. ಜನರ ಕ್ಷಮೆಯಾಚಿಸಬೇಕು ಎಂದು ನಮ್ಮ ಕರ್ನಾಟಕ ಸೇನಾ ಪಡೆ ಆಗ್ರಹಿಸಿದೆ.

ಮುಖಂಡ ತೇಜೇಶ್ ಲೋಕೇಶ್‌ಗೌಡ, ಕೃಷ್ಣಪ್ಪ, ಸುರೇಶ್(ಗೋಲ್ಡ್), ಪ್ರಭುಶಂಕರ್, ರಘು ಅರಸ್, ರಾಧಾಕೃಷ್ಣ, ಹನುಮಂತಯ್ಯ ಅಕ್ಬರ್, ವಿಜಯೇಂದ್ರ ಇತರರು ಇದ್ದರು.

ನೂತನ ಫಲಕ ಅಳವಡಿಸಲಾಗುತ್ತಿದೆ
ದಸರಾ ವಸ್ತುಪ್ರದರ್ಶನ ಆವರಣದಲ್ಲಿ ನಾಡಿನ ಖ್ಯಾತನಾಮರ ಹೆಸರಿನ ಫಲಕ ಕೆಲವು ಮುರಿದು ಹೋಗಿದ್ದವು. ಹಾಗಾಗಿ ಅರಮನೆಯಲ್ಲಿ ಇರುವ ನಾಮಫಲಕದ ರೀತಿಯಲ್ಲಿ ಪಾರಂಪರಿಕ ನಾಮಫಲಕ ಅಳವಡಿಕೆ ಕಾರ್ಯ ನಡೆದಿದೆ ಎಂದು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ತಿಳಿಸಿದರು.
ರಸ್ತೆಯ ಎರಡು ಬದಿಯಲ್ಲಿ ಹಿಂದಿನಂತೆ ಅದೇ ಹೆಸರಿನ ನೂತನ ನಾಮಫಲಕವನ್ನು ತಕ್ಷಣ ಅಳವಡಿಸಲಾಗುವುದು. ಈ ಕಾಮಗಾರಿ ಗುತ್ತಿಗೆ ನೀಡಿದ್ದು, ಕೆಲಸಗಾರರು, ಹಳೆಯ ಫಲಕವನ್ನು ಸರಿಯಾಗಿ ವಿಲೇವಾರಿ ಮಾಡಿಲ್ಲ. ಕೂಡಲೇ ಅವುಗಳನ್ನು ಸರಿಯಾದ ರೀತಿ ವಿಲೇವಾರಿ ಮಾಡಲು ನಿರ್ದೇಶನ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.