ಅಕ್ಕಿಆಲೂರ: ಸ್ಥಳೀಯ ಗ್ರಾಪಂನ ತೆರಿಗೆ ವರ್ಗ 1ರ ಅನುದಾನದಲ್ಲಿ ಅಕ್ರಮವಾಗಿ ಹೆಚ್ಚುವರಿ ಹಣ ಖರ್ಚು ಮಾಡಲಾಗಿದೆ. ಈ ಕುರಿತು ತಾಪಂ ಮತ್ತು ಜಿಪಂ ಹಿರಿಯ ಅಧಿಕಾರಿಗಳಿಗೆ ದಾಖಲೆ ನೀಡಲಾಗುವುದು ಎಂದು ಗ್ರಾಪಂ ಸದಸ್ಯ ಪವನ ಜಾಬೀನ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಮತದಾನ ನಡೆಯುವ ಹಿಂದಿನ ದಿನ ಮತಗಟ್ಟೆಗಳಲ್ಲಿರುವ ಶೌಚಗೃಹದ ಸ್ವಚ್ಛತೆಗೆ ಗ್ರಾಪಂನ ಒಬ್ಬ ಕಾರ್ಮಿಕನನ್ನು ನಿಯೋಜನೆ ಮಾಡಿ, ಒಂದು ದಿನಕ್ಕೆ 13,150 ರೂಪಾಯಿ ಬಿಲ್ ತೆಗೆಯಲಾಗಿದೆ. ಕಾರ್ಮಿಕನಿಗೆ ಕೇವಲ 1 ಸಾವಿರ ರೂಪಾಯಿ ಸಂದಾಯ ಮಾಡಲಾಗಿದೆ. ನರೇಗಾ ಯೋಜನೆಯಲ್ಲಿ ಕೆಲಸ ಮಾಡುವ ಕಾರ್ಮಿಕ ದಂಪತಿ ಮಕ್ಕಳ ಆರೈಕೆಗಾಗಿ ಗ್ರಾಪಂ ಕಾರ್ಯಾಲಯದಲ್ಲಿ ಸ್ಥಾಪಿಸಿರುವ 10*10 ಅಳತೆಯ ಕೂಸಿನ ಮನೆ ಕೇಂದ್ರಕ್ಕೆ 34 ಟೈಲ್ಸ್ ಬಾಕ್ಸ್ ಬಳಿಸಿದ್ದೇವೆ ಎಂದು 28,886 ರೂಪಾಯಿ ಗ್ರಾಪಂನಿಂದ ತೆಗೆಯಲಾಗಿದೆ. 25 ಟೈಲ್ಸ್ ಬಾಕ್ಸ್ ಮಾತ್ರ ಉಪಯೋಗಿಸಿ, 9 ಬಾಕ್ಸ್ ಹಣ ಅಕ್ರಮವಾಗಿ ತೆಗೆದುಕೊಂಡಿದ್ದಾರೆ. ಕೇವಲ ಮೂರು ಕಿಟಕಿಗೆ ಗಾಜು ಅಳವಡಿಸಲು 17,865 ರೂಪಾಯಿ ಲೆಕ್ಕ ತೋರಿಸಲಾಗಿದೆ ಎಂದು ದೂರಿದರು.
ಗ್ರಾಪಂ ಬಳಕೆಗಾಗಿ ಎರಡು ಕಂಪ್ಯೂಟರ್, ಒಂದು ಪ್ರಿಂಟರ್ ಹಾಗೂ ಒಂದು ಮೊಬೈಲ್ ಖರೀದಿಗೆ 2.30 ಲಕ್ಷ ರೂ. ಬಿಲ್ ಹಾಕಲಾಗಿದೆ. ಸರ್ಕಾರದ ಮಾನ್ಯತೆ ಪಡೆದಿರುವ ಕಂಪ್ಯೂಟರ್ ಕೇಂದ್ರದಲ್ಲಿ ಲೆಕ್ಕ ಮಾಡಿಸಿದರೆ 1.10 ಲಕ್ಷ ರೂಪಾಯಿ ಖರೀದಿಯಲ್ಲಿ ಹಣ ವ್ಯತ್ಯಾಸವಾಗುತ್ತಿದೆ. ಗ್ರಾಪಂ ಬಳಕೆಗಾಗಿ ಇರುವ ಟ್ರ್ಯಾಕ್ಟರ್ ಟ್ರೈಲರ್ ದುರಸ್ತಿಗೆ, 1.29 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ ಇದಕ್ಕಾಗಿ ಟ್ರೈಲರ್ ದುರಸ್ತಿ ಮಾಡದೆ ಇರುವ ಸಂಸ್ಥೆಯಿಂದ ಕೊಟೇಷನ್ ಪಡೆಯಲಾಗಿದೆ ಎಂದರು.
ತಿಂಗಳ ವೇತನ ಪಡೆಯುವ ಸಿಬ್ಬಂದಿ ಹೆಸರಿನಲ್ಲಿ ಮೂರು ಬಾರಿ ವೇತನ ನೀಡಲಾಗಿದೆ ಎಂದು ಖರ್ಚು ಮಾಡಿ ಅಧಿಕ ಪ್ರಮಾಣದಲ್ಲಿ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ. ದೀಪ ಬೆಳಗದೆ ಇರುವ ಹೈಮಾಸ್ಟ್ ವಿದ್ಯುತ್ ಕಂಬದ ದುರಸ್ತಿಗೆ 1.63 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಹಾವೇರಿ ಜಿಲ್ಲೆಯ ದೊಡ್ಡ ಗ್ರಾಪಂ ಆಗಿರುವ ಅಕ್ಕಿಆಲೂರಿನಲ್ಲಿ ಹೆಚ್ಚು ವ್ಯಾಪಾರ-ವಹಿವಾಟು ನಡೆದು ಅಧಿಕ ತೆರಿಗೆ ಸಂಗ್ರಹವಾಗುತ್ತದೆ. ಸಂಗ್ರಹವಾಗಿರುವ ತೆರಿಗೆಯ ವರ್ಗ 1ರ ಹಣದ ಲೆಕ್ಕ ನೀಡದೆ ಇದ್ದರೆ ಗ್ರಾಪಂ ಕಾರ್ಯಲಯಕ್ಕೆ ಬೀಗ ಜಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಗ್ರಾಪಂ ಸದಸ್ಯರಾದ ರವಿ ಕಲಾಲ, ಅಲ್ತಾಫ್ ಪಾಟೀಲ ಉಪಸ್ಥಿತರಿದ್ದರು.