ಜಿಲ್ಲೆ

ಆ.8ರಂದು ನಗರದಲ್ಲಿ ಧರಣಿ ಸತ್ಯಾಗ್ರಹ: ಶನಿಮಠದ ಧರ್ಮದರ್ಶಿ ಡಾ.ಕೆ.ಎನ್.ರಾಜು ಮಾಹಿತಿ

ಮಂಡ್ಯ: ಶ್ರೀರಂಗಪಟ್ಟಣ ತಾಲೂಕು ಬೆಳಗೊಳ ಹೋಬಳಿಯ ಹೊಂಗಳ್ಳಿ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನು ಒತ್ತುವರಿ ಮಾಡಿ ಅಕ್ರಮವಾಗಿ ಬಡಾವಣೆ ನಿರ್ಮಿಸಿ ನಿವೇಶನ ಹಂಚುತ್ತಿದ್ದರೂ ಅಧಿಕಾರಿಗಳು ಮತ್ತು ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ವಿರೋಧಿಸಿ ಆ.8ರಂದು ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಶೀ ಕ್ಷೇತ್ರ ಶನಿಮಠದ ಧರ್ಮದರ್ಶಿ ಡಾ.ಕೆ.ಎನ್.ರಾಜು ತಿಳಿಸಿದರು.

ಹೊಂಗಳ್ಳಿ ಸರ್ವೆ ನಂ.291ರ ಪೈಕಿ ಪಿ 43ರಲ್ಲಿನ 3.28 ಎಕರೆ ಕಂದಾಯ ಭೂಮಿಯ ಜತೆಗೆ ಸರ್ಕಾರಿ ಭೂಮಿಯನ್ನು ಮೈಸೂರಿನ ಸೂರ್ಯನಾರಾಯಣ ಎಂಬುವರು ಒತ್ತುವರಿ ಮಾಡಿಕೊಂಡು ಕಾನೂನು ಬಾಹಿರ ಮತ್ತು ಅಕ್ರಮವಾಗಿ ಬಡಾವಣೆ ನಿರ್ಮಾಣ ಮಾಡಿ ನಿವೇಶನ ಹಂಚಿಕೆ ಮಾಡುತ್ತಿದ್ದಾರೆ. ಜತೆಗೆ ಪಕ್ಕದಲ್ಲಿರುವ ನಮ್ಮ ಜಾಗವನ್ನೂ ತೆರವುಗೊಳಿಸಲು ಮುಂದಾಗಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ, ಶ್ರೀರಂಗಪಟ್ಟಣ ತಹಸೀಲ್ದಾರ್, ಹುಲಿಕೆರೆ ಗ್ರಾಪಂ ಪಿಡಿಒ, ತಾಲೂಕು ಪಂಚಾಯಿತಿ ಇಒ ಸೇರಿದಂತೆ ಹಲವರಿಗೆ 20220ರಿಂದಲೂ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಕೂಡಲೇ ಅಕ್ರಮ ಜಮೀನು ಒತ್ತುವರಿಯನ್ನು ತೆರವುಗೊಳಿಸಿ ಸರ್ಕಾರಿ ಜಮೀನನ್ನು ರಕ್ಷಿಸಬೇಕು. ಶ್ರೀ ಕ್ಷೇತ್ರ ಶನಿಮಠದ ಸ್ವತ್ತಿಗೆ ರಕ್ಷಣೆ ನೀಡಬೇಕೆಂದು ಒತ್ತಾಯಿಸಿ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರಿಗೆ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಹೇಳಿದರು.

ಮಠಾಧೀಶ ರುದ್ರೇಶ್, ಪದಾಧಿಕಾರಿಗಳಾದ ಚಂದ್ರಕಲಾ, ರವೀಂದ್ರ, ಎನ್.ಸಾವಿತ್ರಿ, ಲೋಕೇಶ, ರಕ್ಷಿತ್, ಜ್ಞಾನಪ್ರಕಾಶ್ ಇತರರಿದ್ದರು.