ಮಾಗಡಿ: ಸಾಕಷ್ಟು ಕೆರೆಗಳಿಗೆ ಹೇಮಾವತಿ ನೀರು ಬರುತ್ತದೆ ಎನ್ನುತ್ತಿದ್ದವರು ಈಗ ಕಾನೂನು ಹೋರಾಟಬೇಕೆನ್ನುವ ಮೂಲಕ ಜನರಲ್ಲಿ ದ್ವಂದ್ವ ಮೂಡಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಎ. ಮಂಜುನಾಥ್ ವಿರುದ್ಧ ಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆಂಚೇಗೌಡ ಹರಿಹಾಯ್ದರು.
ತಾಲೂಕಿನ ತಿಪ್ಪಸಂದ್ರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೇಮಾವತಿ ನೀರಾವರಿ ಯೋಜನೆ ಮಾಡಿಸಿದ್ದು ನಾನೇ, ಇದಕ್ಕೆ ಹೋರಾಟ ಬೇಕಿಲ.್ಲ ಕಾನೂನು ಹೋರಾಟವಷ್ಟೆ ಸಾಕು ಎಂದು ಇಂಜಿನಿಯರ್ ಹೇಳಿದ್ದಾರೆ ಎನ್ನುವ ಎ.ಮಂಜುನಾಥ್, ಆ ಇಂಜಿನೀಯರ್ ಹೆಸರನ್ನಾದರೂ ಸ್ಪಷ್ಟಪಡಿಸಲಿ ಎಂದರು.
ಕುಣಿಗಲ್ ಶಾಸಕರಿಗೆ ಮಾಗಡಿ ಶಾಸಕರು ಕೆಟ್ಟ ಪದ ಬಳಸಿ ನಿಂದಿಸಿದರು ಎಂದು ಕುಣಿಗಲ್- ಮಾಗಡಿ ಜನರ ಮಧ್ಯ ಬೆಂಕಿ ಹಚ್ಚುತ್ತಿದ್ದಾರೆ ಎಂದು ಆರೋಪಿಸಿದರು.
ಚನ್ನಪಟ್ಟಣ ಉಪಚುನಾವಣೆ ವೇಳೆ ಎ.ಮಂಜುನಾಥ್, ಸಿಪಿ.ಯೋಗೇಶ್ವರ್‌ಗೆ ಕರೆ ಮಾಡಿ ನಿನ್ನ ದಾರಿ ನೀನು ನೋಡಿಕೊ, ಇಲ್ಲಿ ಮೋಸವಾಗಲಿದೆ ಎಂದು ಹೇಳಿದ್ದರು. ಎ.ಮಂಜುನಾಥ್ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿದ್ದಾರೆ. ಗೆದ್ದರೆ ಜಿಲ್ಲಾ ಉಸ್ತುವಾರಿ ಸಚಿವರಾಗುತ್ತಾರೆ ಎಂದು ಖುಷಿ ಇತ್ತು. ಈಗ ನೋಡಿದರೆ ಮುಂಬರುವ ಚುನಾವಣೆಯಲ್ಲಿ ಎ. ಮಂಜುನಾಥ್‌ಗೆ ಟಿಕೆಟ್ ಕೊಡಬೇಡಿ ಎಂದು ಒಂದು ನಿಯೋಗ ಹೇಳುತ್ತಿದೆ ಎಂದು ಬಾಂಬ್ ಸಿಡಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಿಗಳೂರು ಗಂಗಾಧರ್ ಮಾತನಾಡಿ, 1989ರಲ್ಲಿ ಎಚ್.ಎಂ.ರೇವಣ್ಣ ಮಾಗಡಿಗೆ ಹೇಮಾವತಿ ನೀರು ತರಲು ರಸ್ತೆ ತಡೆದು ಹೋರಾಟ ನಡೆಸಿದ್ದರು. ಡಿ.ಕೆ.ಸುರೇಶ್ 63 ಕೆರೆಗಳಿಗೆ ನೀರು ತುಂಬಿಸಲು ಪ್ರಥಮ ಹಂತದಲ್ಲಿ 500 ಕೋಟಿ ರೂ. ಮಂಜೂರು ಮಾಡಿಸಿ ಕೆಲಸ ಪ್ರಾರಂಭಿಸಿದರು. ನಂತರ ತುಮಕೂರು ಜಿಲ್ಲೆಯವರು ಈ ಯೋಜನೆಯನ್ನು ರದ್ದುಗೊಳಿಸಿದರು. ಈ ವೇಳೆ ಡಿ.ಕೆ.ಸುರೇಶ್ ಸರ್ಕಾರಕ್ಕೆ ಮನವಿ ಮಾಡಿ ಸರ್ವೇ ನಡೆಸಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್‌ಗೆ 1 ಸಾವಿರ ಕೋಟಿ ಮಂಜೂರು ಮಾಡಿಸಿ ಕಾಮಗಾರಿಗೆ ಚಾಲನೆ ಕೊಡಿಸಿದ್ದಾರೆ. ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಮುಂದೆ ನಿಂತು ಮಾಗಡಿಗೆ ನೀರು ಹರಿಸುವಂತೆ ಮನವಿ ಮಾಡಿದರು.
ಮುಖಂಡರಾದ ವಿಶ್ವನಾಥ್, ವೆಂಕಟೇಶ್, ಪ್ರದೀಪ್ ಕುಮಾರ್, ರವೀಂದ್ರ, ಮಂಜುನಾಥ್, ರಜನಿಕುಮಾರ್, ಮಲ್ಲಪ್ಪನ ಹಳ್ಳಿ ಪ್ರಕಾಶ್, ಶಿವರುದ್ರಯ್ಯ, ಮಂಡ್ಯ ವೆಂಕಟೇಶ್ ಇದ್ದರು.