ಮಾಂಜರಿ: ಕೃಷ್ಣಾ ತೀರದ ಮಾಂಜರಿ, ಯಡೂರ, ಚಂದೂರ, ಇಂಗಳಿ, ಅಂಕಲಿ ಮುಂತಾದ ಗ್ರಾಮಗಳಲ್ಲಿ ಹೋಳಿ ಹಬ್ಬದ ನಿಮಿತ್ತ ರಂಗಪಂಚಮಿ ಸಂಭ್ರಮ ಮನೆ ಮಾಡಿತ್ತು.
ಗ್ರಾಮಗಳ ವಿವಿಧ ಬಡಾವಣೆಗಳಲ್ಲಿ ಯುವಕರು, ಮಕ್ಕಳು ಸಾಮೂಹಿಕವಾಗಿ ಬಣ್ಣದಾಟದಲ್ಲಿ ತೊಡಗಿದ್ದರು. ಯುವಕರು ಹಲಗೆ ಬಾರಿಸುತ್ತ ಕೂಗುತ್ತ ರಂಗಿನಾಟವನ್ನು ವಿಶಿಷ್ಟವಾಗಿ ಆಚರಿಸಿದರು.
ಮುಖಕ್ಕೆ ತರಹೇವಾರಿ ಬಣ್ಣ ಹಚ್ಚಿಕೊಂಡು ಬೈಕ್‌ನಲ್ಲಿ ಕುಳಿತು ಜೋರಾಗಿ ಶಬ್ಧ ಮಾಡುತ್ತ ಯುವಕರು ಗುಂಪು ಗುಂಪಾಗಿ ಅರಚುತ್ತಾ ಸಾಗಿ ಸಂಭ್ರಮದಿಂದ ಹೋಳಿ ಹಬ್ಬ ಆಚರಿಸಿದರು.
ಬೆಳಗ್ಗೆಯಿಂದ ಮಾರುಕಟ್ಟೆಯಲ್ಲಿ ರಂಗು ರಂಗಿನ ಬಣ್ಣಗಳ ಮಾರಾಟವೂ ಭರ್ಜರಿಯಾಗಿಯೇ ಇತ್ತು. ಬರದ ನಾಡಿನಲ್ಲಿ ಸುಡುಬಿಸಿಲಿನ ತಾಪಮಾನವನ್ನೂ ಲೆಕ್ಕಿಸದೆ ಮಕ್ಕಳು ಬಣ್ಣದಾಟದಲ್ಲಿ ಪಾಲ್ಗೊಂಡಿದ್ದರು.