ತೇರದಾಳ: ಚಾಲುಕ್ಯರ ಶೈಲಿಯಲ್ಲಿ ಅಂದಾಜು 40 ಕೋಟಿ ರೂ. ವೆಚ್ಚದಲ್ಲಿ ವಿಭಿನ್ನ ಕಲಾಕುಸುರಿಗಳುಳ್ಳ 12ನೇ ಶತಮಾನದ ಶೂನ್ಯಸಿಂಹಾಸನಾಧೀಶ್ವರ ಅಲ್ಲಮಪ್ರಭು ದೇವಸ್ಥಾನವು ಪಟ್ಟಣದಲ್ಲಿ ಬಹುತೇಕ ಪೂರ್ಣಗೊಂಡಿದ್ದು, ನ.11 ರಂದು ಅಮೃತಸಿದ್ಧಿಯೋಗದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಅಲ್ಲಮಪ್ರಭು ದೇವಸ್ಥಾನ ಜೀರ್ಣೋದ್ಧಾರ ಕಮಿಟಿ ಅಧ್ಯಕ್ಷ, ಜಮಖಂಡಿ ಶಾಸಕ ಜಗದೀಶ ಗುಡಗುಂಟಿಮಠ ಹೇಳಿದರು.
ಪಟ್ಟಣದ ಅಲ್ಲಮಪ್ರಭು ದೇವಸ್ಥಾನ ಸಭಾಭವನದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶೇಗುಣಸಿಯ ಮಹಾಂತಪ್ರಭು, ಹಂದಿಗುಂದದ ಶಿವಾನಂದ ಸ್ವಾಮೀಜಿ, ಜಮಖಂಡಿ ಓಲಿಮಠದ ಡಾ. ಚನ್ನಬಸವದೇವರು, ಮುತ್ತಿನಕಂತಿಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ, ಹಳಿಂಗಳಿ ಕಮರಿಮಠದ ಶಿವಾನಂದ ಸ್ವಾಮೀಜಿ, ಹುಬ್ಬಳ್ಳಿಯ ಕುರುಹಿನಶೆಟ್ಟಿ ಸಮಾಜ ಜಗದ್ಗುರು ಶಿವಶಂಕರ ಶಿವಾಚಾರ್ಯರು ನೇತೃತ್ವ ವಹಿಸಿ ಮಾತನಾಡಿ, ವಿಶ್ವದ ಅಧ್ಯಾತ್ಮ ಶಕ್ತಿಯ ಅತೀತವಾದ ಮಹಾನ್ ಚೇತನ ಶಕ್ತಿ ಅಲ್ಲಮಪ್ರಭುದೇವರ ಅಭೂತಪೂರ್ವ ಕಾರ್ಯಕ್ರಮ ಇದಾಗಿದೆ. ದೇವಸ್ಥಾನ ನಿರ್ಮಾಣಕ್ಕೆ ಯಾವುದೇ ರಾಜಕೀಯ ಪಕ್ಷ, ಸರ್ಕಾರಗಳಿಂದ ದೇಣಿಗೆ ಪಡೆದುಕೊಳ್ಳದೆ, ಭಕ್ತರ ದೇಣಿಗೆಯಿಂದ ನಿರ್ಮಿಸಲಾಗುತ್ತಿದೆ. ಅ. 14 ರಿಂದ ನ. 14ರ ವರಗೆ ಒಂದು ತಿಂಗಳವರೆಗೆ ಕಾರ್ಯಕ್ರಮ ನಡೆಯಲಿದ್ದು, ಶೇಗುಣಸಿ ಮಹಾಂತಪ್ರಭುಗಳಿಂದ ನಿತ್ಯ ಸಂಜೆ ಬಸವಪುರಾಣ ಪ್ರವಚನ ನಡೆಯಲಿದೆ. ನ.9, 10, 11 ರಂದು ಧಾರ್ಮಿಕ, ಆಧ್ಯಾತ್ಮಿಕ ಪ್ರವಚನ, ಉಪನ್ಯಾಸಗಳು, ಸಂಗೀತ, ಸಾಹಿತ್ಯ, ಕೃಷಿ, ಸೈನಿಕ ಸೇರಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ನಾಡಿನ ಹಾಗೂ ದೇಶದ ಮಹಾನ್ ಸ್ವಾಮೀಜಿಗಳು ಸಾನ್ನಿಧ್ಯ ವಹಿಸುವರು. ವಿಶೇಷವಾಗಿ ಬಳ್ಳಿಗಾವಿಯಿಂದ ಅಲ್ಲಮಪ್ರಭು ಪರಮಜ್ಯೋತಿ ತಂದು, ಚಿಮ್ಮಡದ ಪ್ರಭು ಸ್ವಾಮೀಜಿ ಸಮ್ಮುಖದೊಂದಿಗೆ ಪಾದಯಾತ್ರೆಯಲ್ಲಿ ಪ್ರಭುಜ್ಯೋತಿ ದೇವಸ್ಥಾನಕ್ಕೆ ಆಗಮಿಸಲಿದೆ. ಅಲ್ಲಮಪ್ರಭುಗಳ 160 ಕೋಟಿ ರೂ. ವಚನಗಳ ಪೈಕಿ 1600 ವಚನಗಳು ಮಾತ್ರ ನಮಗೆ ದೊರಕಿವೆ. ಪ್ರಭುವಿನ ವಚನ ಮೆರವಣಿಗೆ ಆರು ಸಾವಿರ ಸದ್ಭಕ್ತರೊಂದಿಗೆ ನಡೆಸುವ ಸಂಕಲ್ಪ ಇದೆ ಎಂದು ತಿಳಿಸಿದರು.
ಇಂತಹ ಅಭೂತಪೂರ್ವ ಕಾರ್ಯಕ್ರಮಕ್ಕೆ ಹಲವು ಸಮಿತಿ ರಚಿಸಿ, ಅವರವರ ಜವಾಬ್ದಾರಿಯನ್ನು ಎಲ್ಲರಿಗೂ ಹಂಚಬೇಕಿದೆ. ಶಾಂತಿ, ಶಿಸ್ತು, ಸ್ವಚ್ಛತೆ ಮೂಲಕ ಪ್ರಭುವಿನ ಕಾರ್ಯಕ್ರಮ ನ ಭೂತೋ ನ ಭವಿಷ್ಯತಿ ಎಂಬಂತಹ ಕಾರ್ಯಕ್ರಮ ಇದಾಗಲಿದೆ. ಅಲ್ಲಮಪ್ರಭು ಸದ್ಭಕ್ತರೆಲ್ಲರೂ ತನು, ಮನ, ಧನಗಳ ಸಹಾಯದೊಂದಿಗೆ ಸೇವೆಗೈದರೇ ಭವರೋಗ ವೈದ್ಯನಾಗಿ ಪ್ರಭು ನಿಮ್ಮ ಕುಟುಂಬವನ್ನು ಕಾಯುತ್ತಾನೆ ಎಂಬ ಅಭಯ ನೀಡಿದರು.
ತೇರದಾಳ ಹಿರೇಮಠದ ಗಂಗಾಧರದೇವರು, ಶ್ರೀಗಳಾಧಿಯಾಗಿ ಕಾರ್ಯಕ್ರಮ ಯಶಸ್ವಿಗೆ ತಾವು ನೀಡಿದ ಜವಾಬ್ದಾರಿ ವಹಿಸಲಾಗುವುದು. ಮನೆಮನೆಗೆ ತೆರಳಿ, ರುದ್ರಾಕ್ಷಿ ಕೊಟ್ಟು ಆಹ್ವಾನಿಸುವ ಸಂಕಲ್ಪ ವ್ಯಕ್ತಪಡಿಸಿದರು.
ಚಿಮ್ಮಡ ವಿರಕ್ತಮಠದ ಪ್ರಭು ಶ್ರೀ, ಬನಹಟ್ಟಿಯ ಹಿರೇಮಠ ಶರಣಬಸವದೇವರು, ಪ್ರವೀಣ ನಾಡಗೌಡ, ದೇವಲ ದೇಸಾಯಿ, ನಾಗಪ್ಪ ಸನದಿ, ದೇವಸ್ಥಾನ ಟ್ರಸ್ಟ್ ಗುಹೇಶ್ವರ ಪುರಾಣಿಕಮಠ, ದೇವಸ್ಥಾನ ಅರ್ಚಕರು ಇದ್ದರು.