ಜಿಲ್ಲೆ

15 ದಿನದಲ್ಲಿ ಪಕ್ಷದ ಎಲ್ಲ ಗೊಂದಲ ಬಗೆಹರಿಯಲಿದೆ: ವಿಧಾನಸಭಾ ವಿಪಕ್ಷ ನಾಯಕ ಆರ್. ಅಶೋಕ್ ವಿಶ್ವಾಸ

ಹಾಸನ: ಪಕ್ಷದ ಹೈಕಮಾಂಡ್ ಮುಖಂಡರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಅಧ್ಯಕ್ಷರಾದ ಜೆ.ಪಿ. ನಡ್ಡಾ ಅವರು ಬಂದಾಗ ಕರ್ನಾಟಕದ ಸ್ಥಿತಿ-ಗತಿಗಳನ್ನು ಹೇಳಿದ್ದೇನೆ. ನಾನು ಕೂಡ ದೆಹಲಿ ನಾಯಕರ ಜತೆ ಸಂಪರ್ಕದಲ್ಲಿದ್ದೇನೆ. ಹದಿನೈದು-ಇಪ್ಪತ್ತು ದಿನದೊಳಗೆ ಕರ್ನಾಟಕದಲ್ಲಿ ಸ್ಪಷ್ಟವಾದ ತೀರ್ಮಾನವನ್ನು ತೆಗೆದುಕೊಳ್ಳುತ್ತಾರೆ. ಹದಿನೈದು ದಿನದಲ್ಲಿ ಹಡೆರ್ಂಡ್ ಪರ್ಸೆಂಟ್ ಪಕ್ಷದ ಗೊಂದಲ ಬಗೆಹರಿಯುತ್ತದೆ ಎಂದು ವಿಧಾನಸಭಾ ವಿಪಕ್ಷ ನಾಯಕ ಆರ್. ಅಶೋಕ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಆಂತರಿಕ ವಿಚಾರ ಇಷ್ಟು ದೊಡ್ಡಮಟ್ಟಕ್ಕೆ ಹೋಗಲು ಬಿಡಬಾರದಿತ್ತು. ನಾನು ಪಕ್ಷದ ಶಿಸ್ತಿನ ಸಿಪಾಯಿ. ಮನೆಯೊಳಗೆ ಏನು ಮಾತನಾಡಬೇಕು ಅಲ್ಲಿ ಮಾತನಾಡುತ್ತೇನೆ. ಹೊರಗೆ ಏನು ಮಾತನಾಡಬೇಕು ಅದನ್ನು ಮಾತನಾಡಿದ್ದೇನೆ. ಇತಿಹಾಸದಲ್ಲಿ ನಾನು ಪಕ್ಷದ ವಿಚಾರವನ್ನು ಹೊರಗಡೆ ಮಾತನಾಡಿಲ್ಲ, ಮಾತನಾಡುವುದೂ ಇಲ್ಲ ಎಂದ ಅವರು, ಬಿಜೆಪಿ ಪಕ್ಷ ತಾಯಿ ಇದ್ದಂತೆ. ಬಿಜೆಪಿ ಬಿಟ್ಟು ಹೋದವರು ಯಾರೂ ಉದ್ಧಾರ ಆಗಿಲ್ಲ. ಬಿಜೆಪಿ ನನ್ನ ಶಕ್ತಿ, ಆಮೇಲೆ ಅಶೋಕ್. ಆಚೆ ಹೋದರೆ ನನ್ನ ಶಕ್ತಿ ಜಿರೋ. ಅದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಅಶೋಕ್

ಸಿದ್ದರಾಮಯ್ಯ ಅವರು ನ.15 ಅಥವಾ ನ.16 ರಂದು ಖಾಲಿ ಮಾಡುತ್ತಾರೆ. ಅಷ್ಟರಲ್ಲಿ ಗುಡಿಸಿ ಗುಂಡಾಂತರ ಮಾಡಿ ಹೋಗುತ್ತಾರೆ. ಆಮೇಲೆ ಡಿಕೆ ಬರುತ್ತಾರೋ, ಪರಮೇಶ್ವರ್ ಬರುತ್ತಾರೋ, ಜಾರಕಿಹೋಳಿ ಬರ್ತಾರೋ. ಯಾವ ಹುಲಿ ಬಂದರೂ ಏನು ಸಿಗಲ್ಲ ಎಲ್ಲ ಖಾಲಿ ಮಾಡಿ ಹೋಗಿರ್ತಾರೆ. ಇಂತಹ ದರಿದ್ರ ಸರ್ಕಾರ, ಪಾಪರ್ ಆಗಿರುವ ಸರ್ಕಾರ ಕರ್ನಾಟಕದಲ್ಲಿ ಬಂದಿರಲಿಲ್ಲ. ಎಲ್ಲದರ ಮೇಲೂ ಟ್ಯಾಕ್ಸ್ ಹಾಕುತ್ತಿದ್ದಾರೆ. ಗಾಳಿ ಒಂದನ್ನು ಬಿಟ್ಟಿದ್ದಾರೆ ಅಷ್ಟೇ. ಅಧಿಕಾರಿ, ಕಂಟ್ರಾಕ್ಟರ್‌ಗಳು ಕೆಲಸಕ್ಕೆ ಹೋದರೆ ವಾಪಸ್ ಬರುವ ಗ್ಯಾರೆಂಟಿ ಇಲ್ಲ. ಮನೆಹಾಳು ಸರ್ಕಾರ ಇದು, ಇಂತಹ ಮನೆ ಹಾಳು ಸರ್ಕಾರ ಇತಿಹಾಸದಲ್ಲಿ ಬಂದಿರಲಿಲ್ಲ. ಪೊಲೀಸರು ದುಡ್ಡು ಕೊಟ್ಟು ವರ್ಗಾವಣೆ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಗುಡುಗಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಬಂದ ಮೇಲೆ ಕರ್ನಾಟಕ ರಾಜ್ಯ ಸೂತಕದ ಮನೆಯಾಗಿ ಹೋಗಿದೆ. ಬಾಣಂತಿಯರು ಸಾಯುತ್ತಿದ್ದರೂ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಸರ್ಕಾರದ ಬಳಿ ಹಣ ಇಲ್ಲ. ನಿಷ್ಠಾವಂತ ಅಧಿಕಾರಿಗಳು ಶೇ.60 ಲಂಚದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಗುತ್ತಿಗೆದಾರರು ಬಿಲ್ ನೀಡಿಲ್ಲ ಎಂದು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಈ ಸರ್ಕಾರ ಇದೆಯೋ ಇಲ್ಲವೋ ಅನ್ನುವ ಸ್ಥಿತಿ ರಾಜ್ಯದಲ್ಲಿದೆ. ಪ್ರತಿನಿತ್ಯ ಕೊಲೆ, ಸುಲಿಗೆ, ಅತ್ಯಾಚಾರಗಳು ನಡೆಯುತ್ತಲೇ ಇವೆ. ಹುಬ್ಬಳಿಯಿಂದ ಹಿಡಿದು ಮಂಡ್ಯದವರೆಗೂ, ಅತ್ಯಾಚಾರಗಳು ಆಗುತ್ತಿವೆ. ಗೃಹಸಚಿವರು, ಮುಖ್ಯಮಂತ್ರಿ, ಸರ್ಕಾರ ಇದೆಯಾ? ಹಾಡಹಗಲೇ ಬ್ಯಾಂಕ್‌ಗಳಿಂದ ಹಣ ಕಳ್ಳತನ ಮಾಡಿಕೊಂಡು ಹೋಗುತ್ತಿದ್ದಾರೆ ಎಂದು ಎಂದು ಕಾಂಗ್ರೆಸ್ ಸರ್ಕಾರ ವಿರುದ್ಧ ಹರಿಹಾಯ್ದರು.

ಮೈಕ್ರೋ ಫೈನಾನ್ಸ್ ವಿರುದ್ಧ ಸರ್ಕಾರದ ಕ್ರಮವೇನು?

ಮೈಕ್ರೋ ಫೈನಾನ್ಸ್ ವಿಚಾರವಾಗಿ ಸರ್ಕಾರದ ಮೇಲೆ ರೇಗಿದ ಆರ್. ಅಶೋಕ್, ಮೈಕ್ರೋ ಫೈನಾನ್ಸ್ ಹಾವಳಿಯಿಂದ ಸಾವುಗಳಾಗುತ್ತಿವೆ, ಅದನ್ನು ಕೇಳುವವರೆ ಇಲ್ಲ. ಇದುವರೆಗೂ 24ರಿಂದ 25 ಜನರು ಮೈಕ್ರೊ ಫೈನಾನ್ಸ್ ಹಾವಳಿಯಿಂದ ಸತ್ತಿದ್ದಾರೆ. ಅರಕಲಗೂಡಿನಲ್ಲೂ ಸೋಮವಾರ ಮೈಕ್ರೋ ಫೈನಾನ್ಸ್ ಕಿರುಕುಳದಿಂದ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜನರು ಕಣ್ಣೀರು ಹಾಕುವ ಸ್ಥಿತಿಗೆ ಈ ಸರ್ಕಾರ ತಂದಿದೆ. ಸಿಎಂ, ಮಂತ್ರಿಗಳು ಸಭೆ ಮೇಲೆ ಸಭೆ ಮಾಡುತ್ತಿದ್ದಾರೆ. ಕಳೆದ ಹತ್ತು ದಿನಗಳಿಂದ ಕಠಿಣ ಕ್ರಮ ಎಂದು ಭಜನೆ ಮಾಡುತ್ತಿದ್ದಾರೆ. ಆದರೂ ಇನ್ನೂ ಮೈಕ್ರೋಫೈನಾನ್ಸ್ ಹಾವಳಿ ನಿಂತಿಲ್ಲ. ಒಂದು ತಿಂಗಳಿನಿಂದ ಘಟನೆಗಳು ನಡೆಯುತ್ತಿವೆ. ಯಾವ ಮೈಕ್ರೋ ಫೈನಾನ್ಸ್ ಮೇಲೆ ಕ್ರಮ ತೆಗೆದುಕೊಂಡಿದ್ದೀರಾ? ಯಾವ ಮೈಕ್ರೋಫೈನಾನ್ಸ್ ಮ್ಯಾನೆಜರ್ ಅರೆಸ್ಟ್ ಮಾಡಿದ್ದೀರಾ? ಕಾಟಾಚಾರಕ್ಕೆ ಸುಗ್ರೀವಾಜ್ಞೆ ಅಂತಿರಾ. ಮೈಕ್ರೋಫೈನಾನ್ಸ್‌ನವರು ಕೇರ್ ಮಾಡ್ತಿಲ್ಲ, ಸರ್ಕಾರದ ಮೇಲೆ ಭಯನೇ ಇಲ್ಲ. ಆದರೆ ಇವರು ದಿನನಿತ್ಯ ಭಜನೆ ಮಾಡುತ್ತಿದ್ದಾರೆ. ಅಧಿಕಾರಿಗಳಿಗೆ ಟೋಲ್ ನಂಬರ್ ಕೊಟ್ಟಿದ್ದೆ ಕೊಟ್ಟಿದ್ದು. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗುಡುಗಿದರೆ ಎಲ್ಲ ರೌಡಿಗಳು ಉತ್ತರಪ್ರದೇಶ ಇರಲಿ ದೇಶವನ್ನೇ ಬಿಟ್ಟು ಓಡಿ ಹೋಗುತ್ತಾರೆ. ಇಲ್ಲಿ ಸಿದ್ದರಾಮಯ್ಯ ಗುಡುಗಿದ್ದು ಆಯ್ತು, ಮಿಂಚು, ಮಳೆ ಬಂದಿದ್ದು ಆಯ್ತು. ಮೂರು ಪೈಸದ್ದು ಉಪಯೋಗವಿಲ್ಲ, ಕ್ರಮವಿಲ್ಲ. ಕುಂಭಮೇಳದಲ್ಲಿ ಮೂವತ್ತು ಜನ ಸತ್ತಿದ್ದಕ್ಕೆ ಕಾಂಗ್ರೆಸ್‌ನವರು ಪಾರ್ಲಿಮೆಂಟ್‌ನಲ್ಲಿ ಬಾಯಿ ಬಡ್ಕೊತ್ತಿದ್ದಾರೆ. ಖರ್ಗೆಯವರಿಗೆ ಜ್ಞಾನ ಬೇಡವಾ? ಇಲ್ಲಿ ಮೈಕ್ರೋ ಫೈನಾನ್ಸ್‌ನಿಂದ ಜನರು ಸಾಯುತ್ತಿದ್ದಾರೆ. ಆದರೆ ಅದರ ಬಗ್ಗೆ ಮಾತನಾಡಲ್ಲ. ನೀವು ಮಾಡಿದ ಪಾಪದಿಂದ ಇಲ್ಲಿ ಜನ ಸಾಯುತ್ತಿದ್ದಾರೆ ಎಂದು ಕುಟುಕಿದರು.