ಕಾರವಾರ: ಸರ್ಕಾರದ ಮಾರ್ಗಸೂಚಿಯಂತೆ ಶನಿವಾರ ಜಾರಿ ಮಾಡಿದ ವೀಕೆಂಡ್ ಕರ್ಫ್ಯೂ ಕಾರವಾರ ನಗರದಲ್ಲಿ ಯಶಸ್ವಿಯಾಯಿತು. ಬೆಳಗ್ಗೆ 10 ಗಂಟೆಯವರೆಗೆ ಮಾತ್ರ ತರಕಾರಿ, ಹಣ್ಣು, ಮೀನು, ಮಾಂಸ ಹಾಗೂ ಇತರ ಕೆಲ ದಿನಬಳಕೆ ವಸ್ತುಗಳನ್ನು ಖರೀದಿಸಲು ಅವಕಾಶ ನೀಡಲಾಗಿತ್ತು. ನಂತರ ಎಲ್ಲ ಅಂಗಡಿಗಳನ್ನು ಪೊಲೀಸ್, ನಗರಸಭೆ ಅಧಿಕಾರಿಗಳ ಸೂಚನೆಯಂತೆ ಮುಚ್ಚಲಾಯಿತು. ಔಷಧ ಅಂಗಡಿಗಳು ಮಾತ್ರ ಇಡೀ ದಿನ ತೆರೆದಿತ್ತು. ನಗರದ ಎಲ್ಲ ಬೀದಿಗಳಲ್ಲಿ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಅಲ್ಲಲ್ಲಿ ಕೆಲವರು ಓಡಾಟ ನಡೆಸಿದ್ದರು. ಕಳೆದ ವರ್ಷ ಮಾರ್ಚ್ನಲ್ಲಿ ನಡೆದ ಜನತಾ ಕರ್ಫ್ಯೂ ಹಾಗೂ ನಂತರದ ಲಾಕ್ಡೌನ್ ಪರಿಸ್ಥಿತಿಯನ್ನು ನೆನಪಿಸುವಂತಿತ್ತು. ಬೆಳಗ್ಗೆ ಹಣ್ಣು, ಹೂವು, ತರಕಾರಿಗಾಗಿ ಜನ ಮುಗಿಬಿದ್ದರು.
ಬಸ್ ಇದ್ದರೂ ಜನವಿಲ್ಲ: ಕಳೆದ ವಾರ ಬಸ್ಗಾಗಿ ಜನ ಕಾದು ನಿಲ್ಲುತ್ತಿದ್ದರು. ಶನಿವಾರ ಸಾರಿಗೆ ಸಂಸ್ಥೆ ಸಿಬ್ಬಂದಿ ಪ್ರಯಾಣಿಕರಿಗಾಗಿ ಕಾಯುವ ಪರಿಸ್ಥಿತಿ ಎದುರಾಯಿತು. ಶನಿವಾರ ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಪ್ರಯಾಣಿಕರು ಬಸ್ ಹತ್ತಲು ಬರಲೇ ಇಲ್ಲ. ಬೆಳಗ್ಗೆ 6 ಗಂಟೆಯಿಂದ ಜಿಲ್ಲೆಯ 5 ಡಿಪೋಗಳಿಂದ 30 ಬಸ್ಗಳು ಮಾತ್ರ ಓಡಾಡಿದವು. ಬಿಸಿಲೇರುತ್ತಿದ್ದಂತೆ ಜನರ ಸಂಖ್ಯೆ ಕಡಿಮೆಯಾಯಿತು. ನಂತರ ಬಸ್ಗಳಿಗೆ ಬೋರ್ಡ್ ಜಾಕಿ ನಿಲ್ಲಿಸಿದ್ದರೂ ಪ್ರಯಾಣಿಕರು ಬಾರದ ಕಾರಣ ಸಾರಿಗೆ ಸಿಬ್ಬಂದಿ ಕಾಯುತ್ತ ಕುಳಿತುಕೊಳ್ಳುವಂತಾಯಿತು. ಭಾನುವಾರವೂ ಪ್ರಯಾಣಿಕರು ಇಲ್ಲದಿದ್ದಲ್ಲಿ ಬಸ್ ಓಡುವುದಿಲ್ಲ ಎಂದು ಎನ್ಡಬ್ಲ್ಯುಕೆಆರ್ಟಿಸಿ ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜಕುಮಾರ್ ತಿಳಿಸಿದ್ದಾರೆ.
10 ದಿನದಲ್ಲಿ 96 ಮದುವೆ!!
ಕೋವಿಡ್ ಕರ್ಫ್ಯೂ ನಿಯಮಾವಳಿ ಜಾರಿಯಾಗಿದ್ದರಿಂದ ಮದುವೆ ನಿಕ್ಕಿ ಮಾಡಿಕೊಂಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದುವರೆಗಿನ ಮಾಹಿತಿಯ ಪ್ರಕಾರ ಕಾರವಾರ ತಾಲೂಕಿನ ತಹಸೀಲ್ದಾರ್ ಕಚೇರಿಯಲ್ಲಿ ಮೇ 4 ರವರೆಗೆ 96 ಮದುವೆ ಸಮಾರಂಭಗಳಿಗೆ ಅನುಮತಿ ನೀಡಲಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ ಇದೇ ಅವಧಿಯಲ್ಲಿ 500 ಕ್ಕೂ ಅಧಿಕ ವಿವಾಹ ಸಮಾರಂಭಗಳು ಪೂರ್ವ ನಿಗದಿಯಾಗಿರಬಹುದು ಎಂದು ಅಂದಾಜಿಸಲಾಗಿದೆ. ತಿಂಗಳುಗಳ ಹಿಂದೆಯೇ ಎಲ್ಲ ತಯಾರಿ ನಡೆಸಿದ್ದವರಿಗೆ ಈಗ ಸರ್ಕಾರದ ಕರ್ಫ್ಯೂ ನಿಯಮಾವಳಿಗಳಿಂದ ದಿಕ್ಕು ತೋಚದಂತಾಗಿದೆ. ಸರ್ಕಾರದ ನಿಯಮಾವಳಿಯಂತೆ 50 ಜನರಿಗೆ ಮಾತ್ರ ಮದುವೆಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಸಮಾರಂಭದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರ ಹೆಸರು ಹಾಗೂ ಮೊಬೈಲ್ ನಂಬರ್ ಹಾಕಿ ತಹಸೀಲ್ದಾರ್ ಕಚೇರಿಯಲ್ಲಿ ಪಾಸ್ ಪಡೆಯಬೇಕಿದೆ. ಈಗಾಗಲೇ ದಿನಾಂಕ ನಿಗದಿ ಮಾಡಿ ಸಾವಿರಾರು ಮಂಗಲ ಪತ್ರ ಹಂಚಿದವರು ಯಾರನ್ನು ಕೈಬಿಡಬೇಕು ಎಂಬ ಗೊಂದಲಕ್ಕೆ ಸಿಲುಕಿದ್ದಾರೆ. ಈ ಇಕ್ಕಟ್ಟಿನ ಪರಿಸ್ಥಿತಿಯಿಂದ ಹಲವರು ಮದುವೆ ಮುಂದೂಡಿದ್ದಾರೆ. ಆಗಿದ್ದಾಗಲಿ ಮದುವೆ ಮಾಡಿ ಮುಗಿಸೋಣ ಎಂದವರಿಗೆ ಸಾಲು, ಸಾಲು ಸವಾಲುಗಳು ಎದುರಾಗುತ್ತಿವೆ. ಇನ್ನು 50 ಜನರಿಗೆ ಸೀಮಿತವಾದ ಮದುವೆ ಇದ್ದರೂ ಅದಕ್ಕೆ ತುರ್ತು ಜವಳಿ ಖರೀದಿಗೆ ಅಂಗಡಿ ತೆರೆಯುತ್ತಿಲ್ಲ. ಪಾತ್ರೆಯ ಅಂಗಡಿಗಳು ಬಂದಾಗಿದ್ದರಿಂದ ಬಳಿವಾರಿ ಸಾಮಗ್ರಿ ಖರೀದಿ ಅಥವಾ ಉಡುಗೊರೆ ಖರೀದಿಗೂ ಹುಡುಕಾಟ ನಡೆಸುವ ಪರಿಸ್ಥಿತಿ ಉಂಟಾಗಿದೆ. ಬಂಗಾರದ ಅಂಗಡಿಗಳೂ ಬಾಗಿಲು ಮುಚ್ಚಿವೆ. ಟೇಲರ್ ಶಾಪ್ಗಳಿಲ್ಲ! ಸಾರಾಗವಾಗಿ ನಡೆಯುವ ಕಾರ್ಯಕ್ಕೆ ಹರಸಾಹಸ ಪಡಬೇಕಾಗಿದೆ.
ಸರ್ಕಾರ ರಾಜಕೀಯಕ್ಕಾಗಿ ಕರ್ಫ್ಯೂ ಮಾಡಿದಂತೆ ಕಾಣುತ್ತಿದೆ. ಚುನಾವಣೆ ರ‍್ಯಾಲಿ ಸಮಾರಂಭಗಳಿದ್ದ ಕಾಲದಲ್ಲಿ ಇಲ್ಲದ ನಿಯಮಾವಳಿ ಈಗೇಕೆ ಜಾರಿಗೆ ಬಂತು ಎಂಬುದೇ ಅರ್ಥವಾಗದು. ಬಂದ್ ಮಾಡುವುದಿದ್ದರೆ ಎಲ್ಲ ಅಂಗಡಿ ಹಾಗೂ ವ್ಯವಹಾರವನ್ನೂ ಬಂದ್ ಮಾಡಿ ಸಂಪೂರ್ಣ ಲಾಕ್ಡೌನ್ ಮಾಡಲಿ. ಕೇವಲ ಬಟ್ಟೆ, ಚಪ್ಪಲಿ, ಮೊಬೈಲ್ ಮುಂತಾದ ಅಂಗಡಿ ಬಂದ್ ಮಾಡಲಾಗಿದೆ. ಈ ತಾರತಮ್ಯ ನೀತಿ ಸರಿಯಲ್ಲ. ನೈಟ್ ಕರ್ಫ್ಯೂ ಮಾಡಿದ್ದರೆ ತೊಂದರೆ ಇರಲಿಲ್ಲ. ನಮಗೆ ಭಾನುವಾರವೇ ಹೆಚ್ಚಿನ ವ್ಯಾಪಾರವಾಗುತ್ತಿತ್ತು ಅಂದೇ ಅಂಗಡಿ ಬಂದ್ ಮಾಡಿದ್ದರಿಂದ ತೀವ್ರ ಸಮಸ್ಯೆಯಾಗಿದೆ.| ಸೈಯದ್ ಅಶ್ರಫ್ ಖಾದ್ರಿಬಟ್ಟೆ ಅಂಗಡಿ ವ್ಯಾಪಾರಸ್ಥ, ಜಿಲ್ಲಾ ಯುವ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಉಪಾಧ್ಯಕ್ಷ