ಜಿಲ್ಲೆ

ಶಿಕ್ಷಕರ ಕಲ್ಯಾಣಕ್ಕಾಗಿ ಭತ್ಯೆಗಳನ್ನು ವಿನಿಯೋಗಿಸುವೆ

ಮದ್ದೂರು: ಶಿಕ್ಷಕರ ಸಮಸ್ಯೆಗಳನ್ನು ಹತ್ತಿರದಿಂದ ಬಲ್ಲವನಾಗಿದ್ದು ಸದನದ ಹೊರಗೆ ಮತ್ತು ಒಳಗೆ ಶಿಕ್ಷಕರ ಧ್ವನಿಯಾಗಿ ನಿರಂತರವಾಗಿ ಕಾರ್ಯನಿರ್ವಹಿಸಲಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ ಹೇಳಿದರು.


ಪಟ್ಟಣದ ಸರ್ಕಾರಿ ನೌಕರರ ಕಚೇರಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಶಿಕ್ಷಕರು ಮತ್ತು ಸರ್ಕಾರಿ ನೌಕರರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ನಾನು ಮಾತನಾಡುವವನಲ್ಲ ಕೆಲಸ ಮಾಡಿ ತೋರಿಸುವವನು. ಮರಿತಿಬ್ಬೇಗೌಡ ಅವರು ಶಿಕ್ಷಕರ ಕ್ಷೇತ್ರದಲ್ಲಿ 24 ವರ್ಷಗಳ ಕಾಲ ಶಾಸಕರಾಗಿದ್ದರೂ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಿಲ್ಲ. ನಾನು 6 ವರ್ಷಗಳಲ್ಲಿ ಶಕ್ತಿಮೀರಿ ಕೆಲಸ ಮಾಡಿ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುತ್ತೇನೆ. ಸರ್ಕಾರ ನನಗೆ ನೀಡುವ ಎಲ್ಲ ರೀತಿಯ ಭತ್ಯೆಗಳನ್ನು ಶಿಕ್ಷಕರ ಕಲ್ಯಾಣಕ್ಕಾಗಿ ವಿನಿಯೋಗಿಸುತ್ತೇನೆ ಎಂದರು.


ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಕೊಪ್ಪ ಶಿವರಾಮು ಮಾತನಾಡಿ, ಶಿಕ್ಷಕರ ಸಮಸ್ಯೆಗಳಿಗೆ ಮತ್ತು ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.


ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಎಸ್.ಬೋರೇಗೌಡ, ಬಿಇಒ ಸಿ.ಎಚ್.ಕಾಳೀರಯ್ಯ, ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಡಿ.ಪಿ.ಸ್ವಾಮಿ, ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಪಿ.ಯೋಗೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ದೇವರಾಜು, ಪ್ರಧಾನ ಕಾರ್ಯದರ್ಶಿ ರವಿಚಂದ್ರ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಬೈರೇಗೌಡ, ಮಹೇಶ್, ರವಿಶಂಕರೇಗೌಡ, ಮಲ್ಲಿಕಾರ್ಜುನ, ನಾಗೇಂದ್ರ, ಸೋಮಣ್ಣ, ರವಿಕುಮಾರ್, ಕುಮಾರಸ್ವಾಮಿ ಇದ್ದರು.