ಜಿಲ್ಲೆ

ಹೇಮೆ ಎಕ್ಸ್​ಪ್ರೆಸ್​ ಲಿಂಕ್​ ಕೆನಾಲ್​ ಸ್ಥಗಿತಕ್ಕೆ ಮಠಾಧೀಶರ ಪಟ್ಟು

ತುಮಕೂರು: ಹೇಮಾವತಿ ಎಕ್ಸ್​ಪ್ರೆಸ್​ ಲಿಂಕ್​ ಕೆನಾಲ್​ ಹೋರಾಟ ತೀವ್ರಗೊಂಡಿದೆ. ಜಿಲ್ಲೆಯ ಜನತೆ, ರೈತರ ಹಿತದೃಷ್ಟಿಯಿಂದ ಯೋಜನೆ ರದ್ದಾಗುವವರೆಗು ಯಾವುದೇ ಹೋರಾಟಕ್ಕು ಸಿದ್ಧ ಎಂದು ವಿವಿಧ ಮಠಾಧೀಶರು ತುಮಕೂರಿನಲ್ಲಿ ಒಕ್ಕೊರಲಿನ ಎಚ್ಚರಿಕೆ ಸಂದೇಶವನ್ನು ರಾಜ್ಯ ಸರ್ಕಾರಕ್ಕೆ ರವಾನಿಸಿದರು.

ನಗರದ ಮುರಘಾ ಸಭಾಭವನದಲ್ಲಿ ಶನಿವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿವಿಧ ಮಠಾಧೀಶರು, ಜಿಲ್ಲೆಯ ಕೊರಟಗೆರೆ, ಮಧುಗಿರಿ ತಾಲೂಕುಗಳಿಗೆ ಇಂದಿಗೂ ಹೇಮಾವತಿ ನೀರು ಕೊಡಲು ಸಾಧ್ಯವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಎಕ್ಸ್​ಪ್ರೆಸ್​ ಕೆನಾಲ್​ ಮೂಲಕ ಕುಣಿಗಲ್​ ಹರಿಸುವ ನೆಪದಲ್ಲಿ ರಾಮನಗರ ಜಿಲ್ಲೆ ಮಾಗಡಿಗೆ ಕೊಂಡೊಯ್ಯುವ ಹುನ್ನಾರ ಅಡಗಿದ್ದು ಇದರಿಂದ ಜಿಲ್ಲೆಗೆ ತೀವ್ರ ಕುಡಿಯುವ ನೀರಿನ ಅಭಾವ ಉಂಟಾಗಲಿದೆ. ಹಾಗಾಗಿ ಏಕ್ಸ್​ಪ್ರೆಸ್​ ಕೆನಾಲ್​ ವಿರೋಧಿ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಎಲ್ಲಾ ರೀತಿಯ ಹೋರಾಟಕ್ಕೂ ನಾವು ಕೈಜೋಡಿಸಲಿದ್ದೇವೆ. ನೆಲ,ಜಲ ರಕ್ಷಣೆಗೆ ಬೀದಿಗಿಳಿಯಲು ಸಿದ್ಧ ಎಂದು ಎಚ್ಚರಿಸಿದರು.

ಸರ್ಕಾರ ಹೇಮಾವತಿ ನಾಲಾವಲಯದ ತುಮಕೂರು ಶಾಖಾ ನಾಲೆಯನ್ನು ಸುಮಾರು 795 ಕೋಟಿ ರೂ., ವೆಚ್ಚದಲ್ಲಿ ಅಧುನೀಕರಣಗೊಳಿಸಿದ್ದು,ಈ ನಾಲೆಯ ಮೂಲಕವೇ ಕುಣಿಗಲ್​ ಮತ್ತು ಮಾಗಡಿ ತಾಲೂಕಿಗೆ ನಿಗಧಿಯಾಗಿರುವ ನೀರು ತೆಗೆದುಕೊಂಡು ಹೋಗಬಹುದಾಗಿದೆ.ಆದರೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಕೈಗಾರಿಕೆಗಳು,ಉದ್ಯಮಿಗಳ ಒತ್ತಡಕ್ಕೆ ಮಣಿದು ಎಕ್ಸ್​ಪ್ರೆಸ್​ ಕೆನಾಲ್​ ಪೈಪ್​ಲೈನ್​ ಯೋಜನೆಗೆ ಒತ್ತು ನೀಡಿದೆ. ಇದರಿಂದ ಜಿಲ್ಲೆಯ ರೈತರಿಗೆ ಅನ್ಯಾಯವಾಗಲಿದ್ದು ಇದರ ವಿರುದ್ಧ ಹೋರಾಟಕ್ಕೆ ನಮ್ಮ ಬೆಂಬಲ ಇದೆ ಎಂದು ಚಿಕ್ಕತೊಟ್ಲುಕೆರೆ ಶ್ರೀ ಅಟವೀ ಶಿವಲಿಂಗ ಸ್ವಾಮೀಜಿ ಹೇಳಿದರು.

ಅಲ್ಲದೆ ನಾಲಾ ಅಲೈನ್​ಮೆಂಟ್​ಗಿಂತಲೂ 15 ಅಡಿ ಆಳದಲ್ಲಿ 10-12 ಅಡಿ ವ್ಯಾಸದ ಪೈಫ್​ ಮೂಲಕ ನಾಲೆಯಿಂದ ನೀರು ಡ್ರಾ ಮಾಡುವುದರಿಂದ ಮುಂದಿನ ಪ್ರದೇಶಗಳಿಗೆ ಹರಿಯುವ ನೀರಿನ ಪ್ರಮಾಣ ಮತ್ತು ವೇಗ ಕುಗ್ಗಲಿದೆ.ಇದರಿಂದ ತುಮಕೂರು ನಗರ ಸೇರಿದಂತೆ ಗುಬ್ಬಿ, ಕೊರಟಗೆರೆ, ಮಧುಗಿರಿ ತಾಲೂಕುಗಳಿಗೂ ನೀರಾವರಿ ಮತ್ತು ಕುಡಿಯುವ ನೀರಿನ ಅಭಾವ ಉಂಟಾಗಲಿದೆ.ಹಾಗಾಗಿ ಈ ಯೋಜನೆಗೆ ನಮ್ಮ ವಿರೋಧವಿದೆ ಎಂದರು.

ಈ ಬಾರಿ ತೀವ್ರ ಬರಗಾಲವನ್ನು ಎದುರಿಸಿದ್ದ ತುಮಕೂರು ಜಿಲ್ಲೆಯಲ್ಲಿ ಯಾವುದೇ ಕೆರೆಕಟ್ಟೆಗಳಲ್ಲಿ ನೀರಿಲ್ಲದೆ ಜನ ಜಾನುವಾರು ಪ್ರಾಣಿ ಪಕ್ಷಿ ಜಲಚರಗಳು ಕುಡಿಯುವ ನೀರು ಕೂಡ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದವು. ಈ ಸಂದರ್ಭದಲ್ಲಿ ಹೇಮಾವತಿ ನೀರನ್ನು ರಾಮನಗರ ಜಿಲ್ಲೆಗೆ ನೀಡುವುದಕ್ಕೆ ನಮ್ಮ ಬಲವಾದ ವಿರೋಧವಿದೆ. ಈ ಕೂಡಲೇ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಬೇಕು. ಒಂದು ವೇಳೆ ಸರ್ಕಾರ ಇದನ್ನು ರ್ನಿಲಕ್ಷ$್ಯಸಿದರೆ ನಾವು ಕಾಮಗಾರಿ ನಡೆಯುವ ಸ್ಥಳದಲ್ಲಿ ಧರಣಿ ನಡೆಸಬೇಕಾಗುತ್ತದೆ ಎಂದು ಸರಪಳಿಮಠದ ಶ್ರೀ ಜ್ಞಾನಾನಂದಪುರಿ ಸ್ವಾಮೀಜಿ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಕೊರಟಗೆರೆ ಆದಿಜಾಂಬವ ಕುಲಗುರುಗಳಾದ ಶ್ರೀ ಓಂಕಾರ ಮುನಿ ಸ್ವಾಮೀಜಿ, ತಮ್ಮಡಿಹಳ್ಳಿ ವಿರಕ್ತಮಠದ ಡಾ.ಅಭಿನವ ಮಲ್ಲಿಕಾರ್ಜುನ ಸ್ವಾಮೀಜಿ, ಹನುಮಂತಪುರ ಶಕ್ತೀಪಿಠದ ಶ್ರೀ ನಾಗೇಂದ್ರ ಸ್ವಾಮೀಜಿ, ತಿಪಟೂರು ಗುರುಕುಲಾನಂದ ಆಶ್ರಮದ ಶ್ರೀಗಳು, ಗೋಡೆಕೆರೆ ಶ್ರೀಗಳು, ಕುಣಿಗಲ್​ ಅಂಕನಹಳ್ಳಿ ಮಠದ ಶ್ರೀ ಶಿವರುದ್ರ ಸ್ವಾಮೀಜಿ, ಗುಬ್ಬಿ ಗೊಲ್ಲಹಳ್ಳಿ ಮಠದ ಶ್ರೀ ವಿಭವ ವಿದ್ಯಾಶಂಕರ ದೇಶಿಕೇಂದ್ರ ಸ್ವಾಮೀಜಿ, ಮಾಜಿ ಸಚಿವ ಸೊಗಡು ಶಿವಣ್ಣ, ಶಾಸಕರಾದ ಬಿ.ಸುರೇಶ್​ಗೌಡ ಎಂ.ಟಿ.ಕೃಷ್ಣಪ್ಪ, ಮುಖಂಡರಾದ ಪಂಚಾಕ್ಷರಯ್ಯ, ಧನಿಯಕುಮಾರ್​, ಬೆಳಗುಂಬ ಪ್ರಭಾಕರ್​, ನೀರಾವರಿ ತಜ್ಞ ಸಂಪಿಗೆ ಜಗದೀಶ್​, ಎಸ್​.ಆರ್​.ಗೌಡ, ಹೆಬ್ಬಾಕ ಮಲ್ಲಿಕಾರ್ಜುನ, ಎಚ್​.ಡಿ.ರಾಮಲಿಂಗಯ್ಯ, ತರಕಾರಿ ಮಹೇಶ್​, ಜಿಲ್ಲಾ ರೈತ ಸಂದ ಅಧ್ಯಕ್ಷ ಧನಂಜಯ ಆರಾಧ್ಯ, ದ್ಯಾಮಣ್ಣಗೌಡ, ಬಿ.ಎಸ್​.ರಾಜಣ್ಣ, ತಾಳೆಕೆರೆ ನಾಗೇಂದ್ರ, ಕೆ.ಪಿ.ಮಹೇಶ್​ ಮತ್ತಿತರರು ಹಾಜರಿದ್ದರು.

ನೀರಾವಾರಿ ವಿಚಾರದಲ್ಲಿ ರಾಜಕಾರಣ ಮಾಡುತ್ತಾರೆ ಅನ್ನುತ್ತಾರೆ. ಇದು ರಾಜಕಾರಣವಲ್ಲ. ಇದು ಧರ್ಮಕಾರಣ. ರೈತರ, ಜನತೆಯ ದೈನಂದಿನ ಸಮಸ್ಯೆಯಾದ ನೀರಿನ ವಿಚಾರವಾಗಿ ಪಾತೀತ, ಜಾತ್ಯಾತಿಯ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ನೀಡಿದ್ದೇವೆ. ಈಗಾಗಲೇ ಮೋದಿ ನಾಮ ಸಂವತ್ಸರ ಶುರುವಾಗಿದ್ದು ಸರ್ಕಾರದ ಆತ್ಮವಿಶ್ವಾಸ ಕಡಿಮೆ ಆಗಿದೆ. ಜಿಲ್ಲೆಯ ಜನರ ಹಿತದೃಷ್ಟಿಯಿಂದ ಯೋಜನೆ ಕೈಬಿಡಬೇಕು. ಈಗಾಗಲೇ ರೈತರ ಬಾಯಿಗೆ ಮಣ್ಣು ಹಾಕುವ ಈ ಯೋಜನೆ ನಾಲೆಗೆ ನಾವು ಮಣ್ಣು ಹಾಕಿ ಮುಚ್ಚಿ ಹೋರಾಟ ಆರಂಭಿಸಿದ್ದೇವೆ. ಡಾ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಠಾಧ್ಯಕ್ಷ, ಹಿರೇಮಠ ನೈಸರ್ಗಿಕವಾಗಿ ಹೇಮಾವತಿ ಯೋಜನೆ ಕೊನೆಭಾಗವಾದ ಕುಣಿಗಲ್​ ನೈಸರ್ಗಿಕವಾಗಿ ಹೇಮೆ ನೀರು ಹರಿಯಲಿದ್ದು ಮಾಗಡಿ ನಿಗದಿಯಾಗಿರುವ ನೀರನ್ನು ತೆಗೆದುಕೊಂಡು ಹೋಗಲು ನಮ್ಮ ಯಾವುದೇ ವಿರೋಧವಿಲ್ಲ. ಆದರೆ, ಪೈಪ್​ಲೈನ್​ ಮೂಲಕ ತೆಗೆದುಕೊಂಡು ಹೋಗುವ ಎಕ್ಸ್​ಪ್ರೆಸ್​ ಕೆನಾಲ್​ ಅವೈಜ್ಞಾನಿಕ. ಇದಕ್ಕೆ ನಮ್ಮ ವಿರೋಧವಿದೆ. ಎಂ.ಟಿ.ಕೃಷ್ಣಪ್ಪ ಜೆಡಿಎಸ್​ ಶಾಸಕ