ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ  
ಜಿಲ್ಲೆ

ಎಲ್ಲ ಹಗರಣ ಸಿಬಿಐಗೆ ಕೊಡಲಿ: ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ವಿದೇಶಕ್ಕೆ ಹಣ ವರ್ಗಾವಣೆ ಮಾಡಿದ್ದಾರೆಂದು ಡಿಸಿಎಂ ಡಿ.ಕೆ.ಶಿವಕುಮಾರ್ ಆರೋಪಿಸುತ್ತಿದ್ದಾರೆ. ಡಿಕೆಶಿ ಅವರು ಬೆದರಿಕೆ ತಂತ್ರ ಅನುಸರಿಸುವುದು ಬೇಡ. ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರದ ಅವಧಿಯ ಎಲ್ಲ ಹಗರಣಗಳನ್ನೂ ಸಿಬಿಐ ತನಿಖೆಗೆ ವಹಿಸಲಿ. ಆಗ ಯಾರು, ಎಷ್ಟು ಹಗರಣ ಮಾಡಿದ್ದಾರೆ ಎಂಬುದು ಬಹಿರಂಗವಾಗಲಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.

ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಅವರು 21 ಹಗರಣಗಳ ಪಟ್ಟಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಅದು ಸೇರಿ ಕಾಂಗ್ರೆಸ್‌ನ ಹಗರಣಗಳನ್ನು ಉನ್ನತ ತನಿಖೆಗೆ ಕೊಟ್ಟರೆ ಮುಖವಾಡಗಳು ಕಳಚಲಿವೆ. ಈಗಾಗಲೇ ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಮುಡಾ ಹಗರಣದಲ್ಲಿ ಸಿಎಂ ಮತ್ತು ಅವರ ಸರ್ಕಾರದ ಮುಖವಾಡ ಕಳಚಿದೆ ಎಂದು ಲೇವಡಿ ಮಾಡಿದರು.
ರಾಜ್ಯ ಸರ್ಕಾರ ಬಡವರಿಗೆ ಮನೆ ಕೊಡುವುದಾಗಿ ಘೋಷಿಸಿರುವುದು ಸ್ವಾಗತಾರ್ಹ. ಆದರೆ ಶಿವಮೊಗ್ಗದಲ್ಲಿ ಏಳು ವರ್ಷದಿಂದ ಬಡವರಿಗೆ ಮನೆ ಕೊಡಿಸುವ ಕೆಲಸ ಆಗಿಲ್ಲ. ಈ ಬಗ್ಗೆ ವಸತಿ ಸಚಿವ ಜಮೀರ್ ಅಹಮ್ಮದ್ ಅವರನ್ನು ಭೇಟಿ ಮಾಡಲು ಸಮಯ ಕೊಟ್ಟಿದ್ದ ಅವರು ವಿದೇಶಕ್ಕೆ ಹಾರಿದ್ದಾರೆ ಎಂದು ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು. ಸಚಿವ ಜಮೀರ್ ಶೀಘ್ರವೇ ಶಿವಮೊಗ್ಗಕ್ಕೆ ಬಂದು ಆಶ್ರಯ ಮನೆಗಳ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದರೆ ದೊಡ್ಡ ಮಟ್ಟದ ಹೋರಾಟ ಮಾಡುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.