ಜಿಲ್ಲೆ

ದೈವಭಕ್ತಿಯಿಂದ ಉನ್ನತಿ ಹೊಂದಲಿ ಸಮಾಜ

ಮೊನ್ಸಿನ್ಜರ್​ ಫರ್ಡಿನಾಂಡ್​ ಗೊನ್ಸಾಲ್ವಿಸ್​ ಆಶಯ

ಕಲ್ಯಾಣಪುರ ಚರ್ಚ್​ನಲ್ಲಿ ಸಕಲ ಸಂತರ ಮಹೋತ್ಸವ

ವಿಜಯವಾಣಿ ಸುದ್ದಿಜಾಲ ಉಡುಪಿ

ಸಂತರ ಜೀವನ ಹಾಗೂ ದೈವಭಕ್ತಿ ನಮ್ಮೆಲ್ಲರಿಗೂ ಮಾದರಿಯಾಗಿದ್ದು, ಅವರ ಮಾರ್ಗ ಅನುಸರಿಸಿ ನಾವೂ ಸಹ ಪವಿತ್ರತೆಯ ಹಾದಿಯಲ್ಲಿ ಸಾಗಬೇಕು. ನಮ್ಮ ನಡೆ-ನುಡಿ ಮತ್ತು ವರ್ತನೆ ಸಂತರನ್ನೇ ಪ್ರತಿಬಿಂಬಿಸುವಂತಾಗಲಿ ಸಮಾಜ ಔನ್ಯತ್ಯ ಹೊಂದಲಿ ಎಂದು ಕಲ್ಯಾಣಪುರದ ಮಿಲಾಗ್ರಿಸ್​ ಕಥೆಡ್ರಲ್​ ಚರ್ಚ್​ನ ಧರ್ಮಗುರು ಮೊನ್ಸಿನ್ಜರ್​ ಫರ್ಡಿನಾಂಡ್​ ಗೊನ್ಸಾಲ್ವಿಸ್​ ಆಶಯ ವ್ಯಕ್ತಪಡಿಸಿದರು.

ಉಡುಪಿಯ ಕಲ್ಯಾಣಪುರದ ಮಿಲಾಗ್ರಿಸ್​ ಕಥೆಡ್ರಲ್​ ಚರ್ಚ್​ನಲ್ಲಿ ಆಯೋಜಿಸಿದ್ದ ಸಕಲ ಸಂತರ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹೃದಯ ಶುದ್ಧವಿರಲಿ

ಸಹಾಯಕ ಗುರು ರೆ.ಫಾ. ಪ್ರದಿಪ್​ ಕಾಡೋರ್ಜ ಮಾತನಾಡಿ, ನಾವೆಲ್ಲರೂ ಸಹ ಸಂತರಂತಾಗಲು ಸಿದ್ಧರಾಗಬೇಕು. ಅದಕ್ಕಾಗಿ ನಮ್ಮ ಆಲೋಚನೆ, ಮಾತು ಮತ್ತು ಹೃದಯ ಶುದ್ಧವಾಗಿರಬೇಕು. ದೇವರ ಮಾರ್ಗದಲ್ಲಿ ನಡೆಯುವ ಪರಿಪೂರ್ಣ ಸಂತ ಜೀವನ ಅಳವಡಿಸಿಕೊಳ್ಳುವುದು ಪ್ರತಿಯೊಬ್ಬರ ಧಾರ್ಮಿಕ ಕರ್ತವ್ಯ ಎಂದರು.

ಯುವಜನ ಆಯೋಗದ ಸದಸ್ಯೆ ರೇಚೆಲ್​ ಲುವಿಸ್​ ಕಾರ್ಯಕ್ರಮ ನಿರೂಪಿಸಿದರು. ಚರ್ಚ್​ನ ಪಾಲನಾ ಸಮಿತಿಯ ಕಾರ್ಯದರ್ಶಿ ಎವ್ಜಿನ್​ ರೆಬೆಲ್ಲೊ, ಆಯೋಗ ಸಂಯೋಜಕಿ ಪ್ರೇಮಾ ಲುವಿಸ್​, ಸುವಾರ್ತಾ ಪ್ರಸಾರ ಆಯೋಗದ ಸಚೇತಕಿ ಜ್ಯೋತಿ ಲುವಿಸ್​ ವಂದಿಸಿದರು. ಅನೇಕ ಪಾಲಕರು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಭಕ್ತಿ-ಭಾವ ನಿರ್ಮಿಸಿದ ಉಡುಗೆ ಸ್ಪರ್ಧೆ

ಸಂತರ ಮಹೋತ್ಸವದ ನಿಮಿತ್ತ ಮಕ್ಕಳು ಹಾಗೂ ಯುವಜನರಿಗಾಗಿ ಸಂತರ ಅಲಂಕಾರ ಉಡುಗೆ ಸ್ಪರ್ಧೆ ಆಯೋಜಿಸಲಾಗಿತ್ತು. ಚರ್ಚ್​ನ 28 ಮಕ್ಕಳು ಹಾಗೂ ಯುವಜನರು ಭಾಗವಹಿಸಿ ತಾವು ಆಯ್ದ ಸಂತರ ಜೀವನದ ಪ್ರೇರಣಾದಾಯಕ ಘಟನೆ ಮತ್ತು ಧಾರ್ಮಿಕ ಸಂದೇಶಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಸ್ಪರ್ಧಾಳುಗಳ ಸಾಂಸ್ಕೃತಿಕ ಪ್ರತಿಭೆಯು ಚರ್ಚ್​ನಲ್ಲಿ ಭಕ್ತಿ-ಭಾವದ ವಾತಾವರಣ ನಿರ್ಮಿಸಿತು. ಸಂತರ ವಿಭಿನ್ನ ಜೀವನಶೈಲಿ, ಅವರ ದೈವಭಕ್ತಿ ಮತ್ತು ತ್ಯಾಗದ ಮನೋಭಾವ ಪ್ರತಿಬಿಂಬಿಸುವ ಉಡುಪು ಹಾಗೂ ಅಲಂಕಾರ ಮಾಡಿಕೊಂಡಿದ್ದ ಸ್ಪರ್ಧಾಳುಗಳನ್ನು ಗೌರವಿಸಲಾಯಿತು. ವಂ. ಗುರು ಸ್ಟೀವನ್​ ಫರ್ನಾಂಡಿಸ್​ ಮತ್ತು ವಂ. ಗುರು ಜೋಕಿಮ್​ ಡಿಸೋಜ ತೀರ್ಪುಗಾರರಾಗಿ ಸೇವೆ ಸಲ್ಲಿಸಿದರು.