ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯಲ್ಲಿನ ಸತ್ಯಸಾಯಿ ಲೋಕಸೇವಾ ಸಂಸ್ಥೆಯ ಪ್ರೇಮಾಮೃತಂ ಸಭಾಂಗಣದಲ್ಲಿ ಕೈಗೊಂಡಿದ್ದ ಕಾರ್ಯಕ್ರಮದಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿ, ಸತ್ಯಸಾಯಿ ವಾನವ ಅಭ್ಯುದಯ ವಿಶ್ವವಿದ್ಯಾಲಯದ ಕುಲಾಧಿಪತಿ ಬಿ.ಎಂ. ನರಸಿಂಹಮೂರ್ತಿ ಇದ್ದರು. 
ಜಿಲ್ಲೆ

ಉತ್ತಮ ಶಿಕ್ಷಕರಿಂದ ಮಾತ್ರ ಸರ್ವಾಂಗೀಣ ಪ್ರಗತಿ

ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯಲ್ಲಿನ ಸತ್ಯಸಾಯಿ ಲೋಕಸೇವಾ ಸಂಸ್ಥೆಯ ಪ್ರೇಮಾಮೃತಂ ಸಭಾಂಗಣದಲ್ಲಿ ಕೈಗೊಂಡಿದ್ದ ಕಾರ್ಯಕ್ರಮದಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿ, ಸತ್ಯಸಾಯಿ ವಾನವ ಅಭ್ಯುದಯ ವಿಶ್ವವಿದ್ಯಾಲಯದ ಕುಲಾಧಿಪತಿ ಬಿ.ಎಂ. ನರಸಿಂಹಮೂರ್ತಿ ಇದ್ದರು.

ಎನ್.ವೆಂಕಟೇಶ್

ಸದ್ಗುರು ಮಧುಸೂದನಸಾಯಿ ಪ್ರತಿಪಾದನೆ- ಹಸಿರು ನೈರ್ಮಲ್ಯ ಶಾಲಾ ಅಭ್ಯುದಯ ಪ್ರಶಸ್ತಿ ಪ್ರದಾನ

ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ಭಾರತದಲ್ಲಿ ಗುರುವಿಗೆ ಭಗವಂತನ ಸ್ಥಾನ ನೀಡಲಾಗಿದೆ. ಇದರ ಪಾವಿತ್ರ್ಯವನ್ನು ಉಳಿಸಿಕೊಂಡು ಹೋಗಬೇಕು ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಸಲಹೆ ನೀಡಿದರು.
ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಲೋಕಸೇವಾ ಸಂಸ್ಥೆಯ ಪ್ರೇಮಾಮೃತಂ ಸಭಾಂಗಣದಲ್ಲಿ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಶನಿವಾರ ಹಮ್ಮಿಕೊಂಡಿದ್ದ ಹಸಿರು ನೈರ್ಮಲ್ಯ ಶಾಲಾ ಅಭ್ಯುದಯ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಲವು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಜಾರಿಗೆ ತಂದ ಸುಧಾರಣಾ ಕ್ರಮಗಳ ಅಧ್ಯಯನ ಕೈಗೊಂಡಾಗ ದೇಶವು ಹೆಚ್ಚಿನ ಅಭಿವೃದ್ಧಿ ಮತ್ತು ಉಜ್ವಲ ಭವಿಷ್ಯ ಕಾಣುವ ನಿರೀಕ್ಷೆ ಮೂಡಿದೆ. ಉತ್ತಮ ಮಾರ್ಗದರ್ಶಿ ಶಿಕ್ಷಕರಿಂದ ಮಾತ್ರ ಸರ್ವಾಂಗೀಣ ಪ್ರಗತಿ ಸಾಧ್ಯ ಎಂದು ತಿಳಿಸಿದರು.
ಭಾರತ ಮಾತ್ರವಲ್ಲ, ಜಗತ್ತಿನಲ್ಲಿನ ಪ್ರತಿಯೊಬ್ಬ ಮಗುವಿಗೂ ಗುಣಮಟ್ಟದ ಪೌಷ್ಟಿಕ ಆಹಾರ, ಶಿಕ್ಷಣ ಮತ್ತು ಆರೋಗ್ಯ ಸೇವೆ ಸಿಗಬೇಕು. ಹಾಗೆಯೇ ಮೌಲ್ಯಗಳನ್ನು ಬೆಳೆಸಿ, ಉತ್ತಮ ಜೀವನ ನಡೆಸುವಂತಾಗಲು ಪ್ರೋತ್ಸಾಹಿಸಬೇಕು ಎಂದರು.
ಹೊರ ದೇಶಗಳಲ್ಲಿ ಶಿಕ್ಷಣ, ಆರೋಗ್ಯ, ತಂತ್ರಜ್ಞಾನ ಸೇರಿ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಂಡು ಬರುತ್ತಿದೆ. ಅಲ್ಲಿ ಯಾವುದರ ಕೊರತೆಯೂ ಇಲ್ಲ. ಆದರೆ, ತಾನು ಮತ್ತು ತನ್ನದು ಎಂಬ ಸ್ವಾರ್ಥ ಮನೋಭಾವನೆ ಬಿಟ್ಟರೆ ಮೌಲ್ಯಗಳು ಕಾಣಿಸದಂತಹ ವಾತಾವರಣ ಇರುತ್ತದೆ. ಇಂತಹ ಪರಿಸ್ಥಿತಿ ಭಾರತದಲ್ಲಿಯೂ ನಿರ್ಮಾಣವಾಗಬಾರದು. ಇದಕ್ಕೆ ಸಂಸ್ಥೆಯ ವತಿಯಿಂದ ಸೇವಾ ಚಟುವಟಿಕೆಯನ್ನು ವಿಸ್ತರಿಸಲಾಗುತ್ತಿದೆ ಎಂದು ಸದ್ಗುರು ಮಧುಸೂದನಸಾಯಿ ತಿಳಿಸಿದರು.

ಶಿಕ್ಷಣ ದೊಡ್ಡ ದಂಧೆ
ಸತ್ಯಸಾಯಿ ವಾನವ ಅಭ್ಯುದಯ ವಿಶ್ವವಿದ್ಯಾಲಯದ ಕುಲಾಧಿಪತಿ ಬಿ.ಎಂ. ನರಸಿಂಹಮೂರ್ತಿ ಮಾತನಾಡಿ, ಇಂದು ಶಿಕ್ಷಣವು ಸಹ ದೊಡ್ಡ ದಂಧೆಯಾಗಿದೆ. ವಿದ್ಯೆಯನ್ನು ಮಾರಿದವರು ಮತ್ತು ಖರೀದಿಸುವವರು ದೇಶವನ್ನು ಮಾರಲು ಹಿಂಜರಿಯುವುದಿಲ್ಲ. ಆದ್ದರಿಂದ ಮಕ್ಕಳನ್ನು ಮೌಲ್ಯಾಧಾರಿತ ವ್ಯಕ್ತಿಗಳನ್ನಾಗಿ ರೂಪಿಸುವುದರಲ್ಲಿ ತಾರತಮ್ಯ ಇರಬಾರದು, ಮಗುವಿನ ಭವಿಷ್ಯ ರೂಪಿಸುವ ಸರ್ಕಾರಿ ಶಾಲೆಗಳ ಅಭಿವೃದ್ಧಿಯಿಂದ ದೇಶಕ್ಕೆ ಉಳಿಗಾಲ. ಕೆಲವೆಡೆ ಖಾಸಗಿ ಸಂಸ್ಥೆಗಳಿಗೆ ಪೈಪೋಟಿ ನೀಡುವ ರೀತಿಯಲ್ಲಿ ಶಿಕ್ಷಕರು ಉತ್ತಮ ಕೆಲಸಗಳನ್ನು ನಿರ್ವಹಿಸಿದ್ದಾರೆ. ಆದರೆ, ಕೆಲವೆಡೆ ಮಾತ್ರ ಸಂಬಳಕ್ಕೆ ಕೆಲಸ ನಿರ್ವಹಿಸುವ ಹೊಟ್ಟೆಪಾಡಿನ ಶಿಕ್ಷಕರು ಕೆಲಸದ ಸಮಯಕ್ಕೆ ಸರಿಯಾಗಿ ಬರುತ್ತಾರಾ ಎಂದು ಪ್ರಶ್ನಿಸುವಂತಾಗಿದೆ ಎಂದು ಬೇಸರಿಸಿದರು. ಸದ್ಗುರುಗಳು ಸತ್ಯಸಾಯಿ ಸಂಸ್ಥೆಯಲ್ಲಿ ಕೇವಲ ಉಚಿತ ಶಿಕ್ಷಣ ಮಾತ್ರವಲ್ಲ ಪೌಷ್ಟಿಕ ಆಹಾರ, ಉಚಿತ ವಸತಿ, ಉತ್ತಮ ವಾತಾವರಣದಲ್ಲಿ ಕಲಿಕೆ ಮತ್ತು ಉತ್ತಮ ಮಾರ್ಗದರ್ಶನ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದಾರೆ ಎಂದರು.

ಉತ್ತಮ ಶಾಲೆಗಳಿಗೆ ಬಹುಮಾನ
ರಾಜ್ಯದ 32 ಶೈಕ್ಷಣಿಕ ಜಿಲ್ಲೆಗಳಲ್ಲಿನ ಸರ್ಕಾರಿ ಶಾಲೆಗಳಿಗೆ ಸತ್ಯಸಾಯಿ ಸಂಸ್ಥೆಯ ಸ್ವಯಂಸೇವಕರು ಭೇಟಿ ನೀಡಿ, ಮಾಹಿತಿ ಸಂಗ್ರಹಿಸಿದ್ದು ಇದರಲ್ಲಿ ಖಾಸಗಿ ಶಾಲೆಗಳಿಗಿಂತಲೂ ಪೈಪೋಟಿ ರೀತಿಯಲ್ಲಿ ಅನೇಕ ಸರ್ಕಾರಿ ಶಾಲೆಗಳಲ್ಲೂ ಪ್ರಗತಿ ಕಂಡು ಬಂದಿರುವುದು ಗೊತ್ತಾಗಿದೆ. ಇಂತಹ ವಾತಾವರಣ ನಿರ್ಮಾಣಕ್ಕೆ ಪ್ರೋತ್ಸಾಹಿಸುವ ಉದ್ದೇಶದೊಂದಿಗೆ ಶಾಲೆ ಮತ್ತು ಶಿಕ್ಷಕರಿಗೆ ಬಹುಮಾನ ನೀಡಲಾಯಿತು. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ತೊಗರಹಳ್ಳಿಯ ಉತ್ತಮ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಗಣಪತಿ ಶಿವರಾಂ, ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಲ್ಲೂರು ನಾಗೇಶ್ ಶಾಲಾ ಅಭ್ಯುದಯ ಪುರಸ್ಕಾರ, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಸರ್ಕಾರಿ ಪ್ರೌಢಶಾಲೆಯ ನಾಗೇಶ್ ಶೆಟ್ಟಿ 1 ಲಕ್ಷ ರೂ.ಗಳ ನಗದು ಜತೆಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದುಕೊಂಡರು. ಟಾಪ್ 124 ಶಾಲೆಗಳಿಗೆ ಹಸಿರು ನೈರ್ಮಲ್ಯ ಶಾಲಾ ಅಭ್ಯುದಯ ಪುರಸ್ಕಾರ ಸಿಕ್ಕಿತು.


ಶಿಕ್ಷಕರ ಅನುಭವದ ಮಾತುಗಳು
ಸರ್ಕಾರಿ ಶಾಲೆಯ (ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬನಶಂಕರಿ) ಶಿಕ್ಷಕಿ ಪಾರ್ವತಿ ಬಾಯಿ ಮಾತನಾಡಿ, ನಮ್ಮ ಶಾಲೆಯಲ್ಲಿ 25ರಿಂದ 75ಕ್ಕೆ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದು, ಇದರಲ್ಲಿ ಬಹುತೇಕರು ಕಾರ್ಮಿಕರ ಮಕ್ಕಳು. ವಿದ್ಯಾಭ್ಯಾಸಕ್ಕಾಗಿ ಕಿಮೀಗಟ್ಟಲೇ ನಡೆದು ಬರುತ್ತಾರೆ. ಇವರಿಗೆ ಸಮರ್ಪಕ ವಾಹನ ಸೌಲಭ್ಯ ಇಲ್ಲದಿರುವುದು ಕಾರಣ. ಇದರ ನಡುವೆ ಪಾಲಕರು ಕೆಲಸದ ಒತ್ತಡದಲ್ಲಿರುವುದರಿಂದ ಒಳ್ಳೆಯ ಆಹಾರ ಸೇವನೆಯಿಂದ ಮಕ್ಕಳು ವಂಚಿತರಾಗಿದ್ದು ಸರ್ಕಾರದ ಹಾಲಿನ ಜತೆಗೆ ಸತ್ಯಸಾಯಿ ಸಂಸ್ಥೆ ನೀಡುವ ಪೌಷ್ಟಿಕ ಆಹಾರ ಪದಾರ್ಥಗಳ ಸೇವನೆಯಿಂದ ಮಕ್ಕಳ ದೇಹದ ತೂಕದಲ್ಲಿ ಬದಲಾವಣೆ, ಆರೋಗ್ಯ ಸುಧಾರಣೆ ಕಂಡು ಬಂದಿದೆ ಎಂದು ತಿಳಿಸಿದರು. ಸರ್ಕಾರಿ ಪ್ರಾಥಮಿಕ ಶಾಲೆ (ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಲ್ಲೂರು) ಶಿಕ್ಷಕ ನಾಗೇಶ್ ಮಾತನಾಡಿ, ಸತ್ಯಸಾಯಿ ಸಂಸ್ಥೆ ಪ್ರೋತ್ಸಾಹವು ಮತ್ತಷ್ಟು ಶ್ರಮ ಹಾಕಲು ಉತ್ತೇಜನ ನೀಡಿದೆ. ಸರ್ಕಾರಿ ಶಾಲೆಗಳು ಸಂವಿಧಾನದ ತೊಟ್ಟಿಲು. ಇದನ್ನು ತೂಗುವವರು ಯಾರು ಎಂಬ ಮಾತಿಗೆ ಸರ್ಕಾರದ ಜತೆಗೆ ದಾನಿಗಳು ಕೈಜೋಡಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.