ವಿಜಯವಾಣಿ ಸುದ್ದಿಜಾಲ ಧಾರವಾಡ
ಆಟೋಟಗಳಿಂದ ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವ ನಿರ್ಮಾಣವಾಗುವುದು. ಕ್ರೀಡಾ ಸಾಧನೆಗೆ ಅಡ್ಡಿ ಆತಂಕಗಳು ಎದುರಾದರೂ ಎದೆಗುಂದದೆ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ನಿವೃತ್ತ ಉಪ ಪೊಲೀಸ ಪರಿಷ್ಠಾಧಿಕಾರಿ ನಾಗರಾಜ ಅಂಬ್ಲಿ ಅಭಿಪ್ರಾಯಪಟ್ಟರು.
ನಗರದ ಮಾಳಮಡ್ಡಿ ಕೆ.ಇ. ಬೋರ್ಡಿನ ಪ್ರೌಢ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಗಳು ಮಕ್ಕಳ ದೈಹಿಕ ಮಾನಸಿಕ ಆರೋಗ್ಯ ವೃದ್ಧಿಗೆ ಪುಷ್ಠಿ ನೀಡಬಲ್ಲವು. ಹೀಗಾಗಿ ಮಕ್ಕಳು ಪಠ್ಯದೊಂದಿಗೆ ಆಟಗಳನ್ನಾಡಿ ಆರೋಗ್ಯ ಭಾಗ್ಯ ಪಡೆಯಬೇಕು ಎಂದ ಅವರು, ವಿದ್ಯಾರ್ಥಿ ಜೀವನದಲ್ಲಿ ಕ್ರೀಡಾ ಸಾಧನೆ ಪ್ರಸಂಗಗಳನ್ನು ನೆನಪಿಸಿಕೊಂಡು ಕ್ರೀಡಾ ಪಟುಗಳಿಗೆ ಉತ್ಸಾಹ ತುಂಬಿದರು.
ಕ್ರೀಡಾ ಅಭಿವೃದ್ಧಿ ಅಧಿಕಾರಿ ವಸಂತ ಮುರ್ಡೇಶ್ವರ ಮಾತನಾಡಿ, ಕ್ರೀಡಾಪಟುಗಳು ಹುರುಪು ಹುಮ್ಮಸ್ಸಿನಿಂದ ಆಟಗಳಲ್ಲಿ ಭಾಗವಹಿಸಿ ಗುರಿ ತಲುಪಲು ಸತತ ಪರಿಶ್ರಮ ಪಡಬೇಕು. ಕ್ರೀಡೆಯಲ್ಲಿ ಜಯ ಸಾಧಿಸಲು ಸದೃಢತೆ ನಿರಂತರ ಪ್ರಯತ್ನದ ಅಗತ್ಯವಿದೆ. ಕ್ರೀಡೆಗಳಿದ್ದಾಗ ಮಾತ್ರ ಆಟವಾಡುವುದರ ಬದಲು ನಿತ್ಯ ಶ್ರದ್ಧೆಯಿಂದ ಆಡಿದರೆ ಗೆಲುವು ಲಭಿಸುವುದು ಎಂದರು.
ಉಪಪ್ರಾಂಶುಪಾಲ ಎನ್.ಎಸ್.ಗೋವಿಂದರಡ್ಡಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಅಭಿವೃದ್ಧಿ ಅಧಿಕಾರಿ ಗುರುರಾಜ ಜಮಖಂಡಿ, ಕರ್ನಾಟಕ ಹೈಸ್ಕೂಲ್ ಮುಖ್ಯಾಧ್ಯಾಪಕ ಎನ್.ಎನ್.ಸವಣೂರ, ಪ್ರಕಾಶ ಕವಲಿ, ಪಥಸಂಚಲನದ ನಿರ್ಣಾಯಕರಾದ ಕೆ.ಡಿ. ಈರಣ್ಣವರ, ಶಿವಪ್ರಸಾದ ಬೊಂಗಾಲೆ, ಮಾಂತೇಶ ದೇಸಾಯಿ, ಅರುಣ ಚಿಕ್ಕಳ್ಳಿ, ದೀಪಾ ಹಿರೇಮಠ, ಮಲ್ಲಮ್ಮ ಆಲೂರ, ಕ್ರೀಡಾಕೂಟದ ಸಂಚಾಲಕ ಶರಣಪ್ಪ ಗುತ್ತೂರ, ಇತರರು ಇದ್ದರು.
ಪಿ.ನಾಗೇಂದ್ರಪ್ಪ ಸ್ವಾಗತಿಸಿದರು. ಶ್ರೀನಿಧಿ ನಾಯ್ಕರ ವಂದಿಸಿದರು.