ಜಿಲ್ಲೆ

ಕ್ರೀಡೆಯಿಂದ ಸರ್ವಾಂಗೀಣ ಅಭಿವೃದ್ಧಿ

ಪ್ರಸಿನ್ ಕೆ.ಆರ್

ಸೋಮವಾರಪೇಟೆ: ವಿದ್ಯಾರ್ಜನೆಯೊಂದಿಗೆ ಕ್ರೀಡೆಯಲ್ಲಿಯೂ ಉತ್ತಮ ಆಸಕ್ತಿ ಬೆಳೆಸಿಕೊಂಡಲ್ಲಿ ಮಾತ್ರ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಡಾ.ಮಂತರ್‌ಗೌಡ ಅಭಿಪ್ರಾಯಪಟ್ಟರು.

ಭಾನುವಾರ ಪಟ್ಟಣದ ಜೂನಿಯರ್ ಕಾಲೇಜಿನ ಸಿಂಥೆಟಿಕ್ ಟರ್ಫ್ ಮೈದಾನದಲ್ಲಿ ಒಂದು ತಿಂಗಳಿನಿಂದ ಡಾಲ್ಫಿನ್ಸ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ನಡೆದ ಹಾಕಿ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಮಕ್ಕಳ ಭವಿಷ್ಯ ರೂಪಿಸುವಲ್ಲಿ ತಾಯಂದಿರ ಪಾತ್ರ ಪ್ರಮುಖವಾದುದು. ತಾಯಂದಿರು ಮನಸು ಮಾಡಿದಲ್ಲಿ ಪ್ರತಿ ಮನೆಯಲ್ಲಿಯೂ ಉತ್ತಮ ಕ್ರೀಡಾಪಟು ಇಲ್ಲವೇ ಉನ್ನತ ಉದ್ಯೋಗ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ರಾಜ್ಯ ಮತ್ತು ರಾಷ್ಟ್ರಮಟ್ಟದ ಹಾಕಿ ಪಂದ್ಯಾವಳಿ ನಡೆಸಿದರೆ ಮಕ್ಕಳಲ್ಲಿ ಕ್ರೀಡೆಯ ಬಗ್ಗೆ ಹೆಚ್ಚು ಆಸಕ್ತಿ ಮೂಡುತ್ತದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ರಾಜ್ಯ ಅಥವಾ ರಾಷ್ಟ್ರಮಟ್ಟದ ಹಾಕಿ ಪಂದ್ಯಾವಳಿಯನ್ನು ಆಯೋಜಿಸಲು ಡಾಲ್ಫಿನ್ಸ್ ಸ್ಪೋರ್ಟ್ಸ್ ಕ್ಲಬ್‌ನೊಂದಿಗೆ ಕೈಜೋಡಿಸುವುದಾಗಿ ಶಾಸಕರು ಭರವಸೆ ನೀಡಿದರು.

ಭಾರತ ಹಾಕಿ ತಂಡದ ಮಾಜಿ ನಾಯಕ ಅರ್ಜುನ್ ಹಾಲಪ್ಪ ಮಾತನಾಡಿ, ತಮ್ಮ ಬಾಲ್ಯದ ದಿನಗಳಲ್ಲಿ ಟರ್ಫ್ ಮೈದಾನವಿರಲಿಲ್ಲ. ಆದರೆ, ಈಗಿನ ಮಕ್ಕಳಿಗೆ ಅದರ ಅವಕಾಶ ಸಿಕ್ಕಿದೆ. ಹೀಗಾಗಿ ಹಾಕಿಯಲ್ಲಿ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ಡಾಲ್ಫಿನ್ಸ್ ಕ್ಲಬ್ ಅಧ್ಯಕ್ಷ ಅಶೋಕ್, ಅಂತಾರಾಷ್ಟ್ರೀಯ ಹಾಕಿ ಆಟಗಾರ ವಿಕ್ರಂ ಕಾಂತ್, ಭಾರತ ಕಿರಿಯರ ಪುರುಷರ ಹಾಕಿ ತಂಡದ ಕೋಚ್ ಸಿ.ಬಿ.ಜನಾರ್ಧನ, ಆರ್ಮಿ ಹಾಗೂ ಸರ್ವಿಸಸ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ಸಿ.ಬಿ.ದೇವದಾಸ್ ಶಿಬಿರಾರ್ಥಿಗಳಿಗೆ ಸಲಹೆಗಳನ್ನು ನೀಡಿದರು.
ಹಿರಿಯ ಹಾಕಿ ಆಟಗಾರರಾದ ಬಿ.ಕೆ.ಹಾಲಪ್ಪ, ಲಕ್ಷ್ಮಿಕಾಂತ್, ಡಾಲ್ಫಿನ್ಸ್ ಕ್ಲಬ್ ಕಾರ್ಯದರ್ಶಿ ಕೆ.ಎಸ್.ಪ್ರಕಾಶ್ ಇದ್ದರು. ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರವನ್ನು ಶಾಸಕರು ಹಾಗೂ ಅತಿಥಿಗಳು ವಿತರಿಸಿದರು.