ಬೆಳಗಾವಿ : ನಿಷ್ಕ್ರಿಯ ಬ್ಯಾಂಕ್ ಖಾತೆ, ತಪ್ಪಾದ ಆಧಾರ್ ಸಂಖ್ಯೆ ಹಾಗೂ ಇಕೆವೈಸಿ ಪೂರ್ಣಗೊಳಿಸದ್ದರಿಂದಾಗಿಯೇ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಅನ್ನಭಾಗ್ಯದ ಹೆಚ್ಚುವರಿ 5 ಕೆಜಿ ಅಕ್ಕಿಯ ಹಣ ಪಡಯುವಲ್ಲಿ ವಂಚಿತರಾಗುತ್ತಿದ್ದ ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿದಾರಿಗೂ ಸೌಲಭ್ಯ ಒದಗಿಸಲು ಇಲಾಖೆ ತ್ವರಿತವಾಗಿ ಕ್ರಮ ಕೈಗೊಳ್ಳುತ್ತಿದೆ.
ವಿವಿಧ ತಾಂತ್ರಿಕ ತೊಂದರೆಗಳಿಂದಾಗಿ ರಾಜ್ಯದ್ಯಂತ ಯೋಜನೆಯಿಂದ ವಂಚಿತರಾಗುತ್ತಿರುವ ಪಡಿತರ ಚೀಟಿದಾರರ ಸಮಸ್ಯೆ ಕುರಿತು ವಿಜಯವಾಣಿ ಪತ್ರಿಕೆ ಜು.11ರಂದು ‘15 ಲಕ್ಷ ಕುಟುಂಬಗಳಿಗಿಲ್ಲ ಅನ್ನಭಾಗ್ಯ ಗ್ಯಾರಂಟಿ ಹಣ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿ ಸರ್ಕಾರದ ಗಮನ ಸೆಳೆದಿತ್ತು.
ವರದಿಯಿಂದ ಎಚ್ಚೆತ್ತ ಅಧಿಕಾರಿಗಳು, ಮಂಗಳವಾರ ಇಡೀ ದಿನ ತಮ್ಮ ವ್ಯಾಪ್ತಿಯಲ್ಲಿನ ನ್ಯಾಯಬೆಲೆ ಅಂಗಡಿಕಾರರ ಸಭೆ ಕರೆದು, ಆಯಾ ಕೇಂದ್ರ ವ್ಯಾಪ್ತಿಯ ಪಡಿತರ ಚೀಟಿದಾರರಿಂದ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸುವಂತೆ ಸೂಚಿಸಲಾಗಿದೆ.
ಬ್ಯಾಂಕ್ ಇಲ್ಲದವರೂ ಕೂಡಲೇ ಹೊಸದಾಗಿ ರಾಷ್ಟ್ರೀಕೃತ ಬ್ಯಾಂಕ್ ಅಥವಾ ಅಂಚೇ ಕಚೇರಿಯಲ್ಲಿ ಉಳಿತಾಯ ಖಾತೆ ತೆರೆಯಬೇಕು. ಈಗಾಗಲೇ ಖಾತೆ ಇದ್ದೂ, ನಿಷ್ಕ್ರಿಯಗೊಂಡಿದ್ದ ಖಾತೆಯನ್ನು ಸಕ್ರಿಯಗೊಳಿಸಬೇಕು ಹಾಗೂ ಅತ್ಯಗತ್ಯವಾಗಿ ಆಧಾರ್ ಕಾರ್ಡ್ ಹಾಗೂ ಫೋನ್ ನಂಬರ್ ಲಿಂಕ್ ಮಾಡಿಸಿಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಜಿಲ್ಲೆಯ ಎಲ್ಲ ನ್ಯಾಯಬೆಲೆ ಅಂಗಡಿಕಾರರಿಗೆ ಸೂಚಿಸಿದ್ದಾರೆ.