ಜಿಲ್ಲೆ

ಮೈಸೂರಿನಲ್ಲಿ ಕ್ರಿಸ್‌ಮಸ್ ಆಚರಣೆಗೆ ಚರ್ಚ್‌ಗಳಲ್ಲಿ ಸಕಲ ಸಿದ್ಧತೆ

ಮೈಸೂರು: ಕ್ರಿಸ್‌ಮಸ್ ಆಚರಣೆಗೆ ನಗರದ ಸಂತ ಫಿಲೋಮಿನಾ ಸೇರಿದಂತೆ ನಗರದ ಎಲ್ಲ ಚರ್ಚ್‌ಗಳಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಂತ ಫಿಲೋಮಿನಾ ಚರ್ಚ್‌ನಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ನಡೆಯಲಿದೆ.

ಶಾಂತಿದೂತ ಯೇಸುಕ್ರಿಸ್ತನ ಜನ್ಮದಿನವನ್ನು ಆಚರಿಸಲು ಕ್ರೈಸ್ತರು ಭರದ ಸಿದ್ಧತೆ ಮಾಡಿಕೊಂಡಿದ್ದಾರೆ. ಕ್ರಿಸ್ಮಸ್‌ಗೆ ಸಂಬಂಧಿಸಿದಂತೆ ಅಲಂಕಾರಿಕ ವಸ್ತುಗಳ ವ್ಯಾಪಾರ ಜೋರಾಗಿದೆ. ದೇವರಾಜ ಮಾರುಕಟ್ಟೆ ಸೇರಿದಂತೆ ಇತರ ಮಾರುಕಟ್ಟೆಗಳಲ್ಲಿ ಬೊಂಬೆಗಳು, ಜಿಂಗಲ್ ಬೆಲ್ಸ್, ಸಂತ ಕ್ಲಾಸ್ ಕಟೌಟ್‌ಗಳು, ಕ್ರಿಸ್ಮಸ್ ಸ್ಟಾರ್, ವಿವಿಧ ಬಣ್ಣದ ಆಕಾರದ ದೀಪಗಳು ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ.

ಕ್ರಿಸ್‌ಮಸ್ ಆಚರಣೆಗಾಗಿ ಸಂತ ಫಿಲೋಮಿನಾ ಚರ್ಚ್‌ಗೆ ಬಣ್ಣ ಬಣ್ಣದ ವಿದ್ಯುತ್ ಬೆಳಕಿನ ಸೊಬಗು ನೀಡಲು ತಯಾರಿ ಮಾಡಲಾಗಿದೆ. ಚರ್ಚ್ ಆವರಣದಲ್ಲಿ ಈ ಬಾರಿ ವಿಶಿಷ್ಟವಾದ ಗೋದಳಿ ನಿರ್ಮಾಣವಾಗಿದೆ. ಡಿ.24ರಂದು ರಾತ್ರಿ 11ಕ್ಕೆ ಕ್ರಿಸ್‌ಮಸ್ ಹಾಡುಗಳೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, 12ಕ್ಕೆ ಜಾಗರಣೆ, ಬಲಿಪೂಜೆ ನೆರವೇರಲಿದೆ. ಸರಿಯಾಗಿ ರಾತ್ರಿ 12 ಗಂಟೆಗೆ ಬಾಲಯೇಸುವನ್ನು ಮೆರವಣಿಗೆ ಮಾಡಿ ಗೋದಳಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಡಿ.25ರಂದು ಬೆಳಗ್ಗೆ 5 ರಿಂದ 9 ಗಂಟೆವರೆಗೆ ಪ್ರತಿ ಗಂಟೆಗೊಮ್ಮೆ ಪೂಜೆ, ಪ್ರಾರ್ಥನೆ ಇರಲಿದೆ. ಗೋದಳಿಯಲ್ಲಿರುವ ಯೇಸುವನ್ನು ಪ್ರಾರ್ಥಿಸಿ, ಪರಸ್ಪರ ಕ್ರಿಸ್‌ಮಸ್ ಶುಭಾಶಯ ವಿನಿಮಯ ಮಾಡಿಕೊಳ್ಳಲಾಗುತ್ತದೆ. ನಗರದ ಎಲ್ಲ ಚರ್ಚ್‌ಗಳಲ್ಲಿಯೂ ವಿಶೇಷ ಪ್ರಾರ್ಥನೆ ನಡೆಯಲಿದೆ.