ಶಿವಮೊಗ್ಗದ ಹಳೇ ಜೈಲು ಆವರಣದಲ್ಲಿ ಜಿಲ್ಲಾಮಟ್ಟದ ಸಮಾವೇಶ ಆಯೋಜನೆಗೊಂಡಿರುವ ಸ್ಥಳವನ್ನು ಸಚಿವ ಮಧು ಬಂಗಾರಪ್ಪ ಪರಿಶೀಲಿಸಿದರು. ಗುರುದತ್ತ ಹೆಗಡೆ, ಸ್ನೇಹಲ್ ಲೋಖಂಡೆ, ಜಿ.ಕೆ.ಮಿಥುನ್‌ಕುಮಾರ್, ಸಿದ್ದಲಿಂಗ ರೆಡ್ಡಿ, ಕೆ.ಮಾಯಣ್ಣಗೌಡ, ಆರ್.ಪ್ರಸನ್ನಕುಮಾರ್, ಸುಂದರೇಶ್, ಕಲಗೋಡು ರತ್ನಾಕರ್ ಇತರರಿದ್ದರು. 
ಜಿಲ್ಲೆ

ಫೆ.24ರ ಗ್ಯಾರಂಟಿ ಸಮಾವೇಶಕ್ಕೆ ಸಕಲ ಸಿದ್ಧತೆ

ಶಿವಮೊಗ್ಗ: ಸರ್ಕಾರದ ಮಹತ್ವಕಾಂಕ್ಷಿ ಐದು ಗ್ಯಾರಂಟಿ ಯೋಜನೆ ಫಲಾನುಭವಿಗಳ ಜಿಲ್ಲಾಮಟ್ಟದ ಸಮಾವೇಶ ಫೆ.24ರಂದು ನಗರದ ಹಳೇಜೈಲು ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಬುಧವಾರ ಕಾರ್ಯಕ್ರಮದ ಪೂರ್ವಸಿದ್ಧತೆ ಪರಿಶೀಲಿಸಿ ಮಾತನಾಡಿದ ಅವರು, ಸರ್ಕಾರದ ಗ್ಯಾರಂಟಿ ಸೌಲಭ್ಯ ಪಡೆದ ಜಿಲ್ಲೆಯ 50 ಸಾವಿರಕ್ಕೂ ಅಧಿಕ ಫಲಾನುಭವಿಗಳು ಸಮಾವೇಶಕ್ಕೆ ಆಗಮಿಸಲಿದ್ದು, ಅವರ ಅನುಕೂಲಕ್ಕಾಗಿ ಎಲ್ಲ ರೀತಿಯ ಮೂಲ ಸೌಕರ್ಯ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಸಮಾವೇಶ ಉದ್ಘಾಟಿಸುವರು. ಕೆಲ ಸಚಿವರು ಹಾಗೂ ನಿಗಮ ಮಂಡಳಿ ಅಧ್ಯಕ್ಷರು ಆಗಮಿಸುವರು. ಇದೇ ಸಂದರ್ಭದಲ್ಲಿ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಲಾಗುವುದು ಎಂದು ಹೇಳಿದರು.
ಮೈದಾನಕ್ಕೆ ಅಲ್ಲಮಪ್ರಭು ಹೆಸರನ್ನು ಸರ್ಕಾರ ಅಧಿಕೃತವಾಗಿ ಘೋಷಿಸಿರುವುದರಿಂದ ಆ ನಾಮಫಲಕವನ್ನು ಮತ್ತು ಅಲ್ಲಮನ ವಚನಗಳ ಕಾಂಪೌಂಡ್ ಗ್ಯಾಲರಿಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಅನಾವರಣ ಮಾಡುವರು. ಈವರೆಗೆ ಗ್ಯಾರಂಟಿ ಯೋಜನೆಗಳ ಸೌಲಭ್ಯ ವಂಚಿತರ ಅನುಕೂಲಕ್ಕಾಗಿ ವೇದಿಕೆ ಇಕ್ಕೆಲಗಳಲ್ಲಿ ದೂರು ಸ್ವೀಕಾರ ಹಾಗೂ ಸಮಸ್ಯೆ ನಿವಾರಣೆಗೆ ಸಲಹಾ ಕೊಠಡಿಗಳನ್ನು ಸ್ಥಾಪಿಸಲಾಗುವುದು. ಅರ್ಹರು ಈ ಸದವಕಾಶದ ಲಾಭ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಪಂ ಸಿಇಒ ಸ್ನೇಹಲ್ ಲೋಖಂಡೆ, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಎಡಿಸಿ ಸಿದ್ದಲಿಂಗ ರೆಡ್ಡಿ, ಮಹಾನಗರ ಪಾಲಿಕೆ ಆಯುಕ್ತ ಕೆ.ಮಾಯಣ್ಣಗೌಡ, ಮಾಜಿ ಎಂಎಲ್‌ಸಿ ಆರ್.ಪ್ರಸನ್ನಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಎನ್.ರಮೇಶ್, ಎಚ್.ಪಿ.ಗಿರೀಶ್, ಮುಹೀಬ್, ಕಲೀಂ ಪಾಷ, ಜಿ.ಡಿ.ಮಂಜುನಾಥ್ ಉಪಸ್ಥಿತರಿದ್ದರು.