ರಾಣೆಬೆನ್ನೂರ: ಈ ಹಿಂದೆ ಚುನಾವಣೆ ಸಂದರ್ಭದಲ್ಲಿ ಚಹಾ ಮಂಡಕ್ಕಿ ಮಾಡಲು ಸಹ ಅಭ್ಯರ್ಥಿಗಳಿಂದ ಹಣ ಪಡೆಯುತ್ತಿರಲಿಲ್ಲ. ಆದರೆ, ಕಾರ್ಪೋರೇಟ್ ಕುಳಗಳು ಚುನಾವಣೆ ರಂಗ ಪ್ರವೇಶಿಸಿದ ಮೇಲೆ ಭ್ರಷ್ಟ್ಟಾಚಾರ ಪ್ರಾರಂಭವಾಯಿತು ಎಂದು ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಹೇಳಿದರು.
ನಗರದ ಆದಿಶಕ್ತಿ ದೇವಸ್ಥಾನದ ಸಮುದಾಯ ಭವನದಲ್ಲಿ ಭಾನುವಾರ ಸಂಜೆ ಭ್ರಷ್ಟ ಮುಕ್ತ ಮತ್ತು ಕಡ್ಡಾಯ ಮತದಾನ ಕುರಿತು ಏರ್ಪಡಿಸಿದ್ದ ಸರ್ವಪಕ್ಷಗಳ, ಎಲ್ಲ ಜಾತಿ ಧರ್ಮದ ಸಮಾನ ಮನಸ್ಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜಕಾರಣಿಗಳು ಆಸೆ, ಆಮಿಷಗಳನ್ನೊಡ್ಡಿ ಮತದಾರರನ್ನು ಭ್ರಷ್ಟಾಚಾರನ್ನಾಗಿಸಿದರು. ಮತದಾರರು ಹಣ ಕೇಳಿ ಆಭ್ಯರ್ಥಿಗಳನ್ನು ಭ್ರಷ್ಟಾಚಾರನ್ನಾಗಿಸಿದರು. ಪ್ರಾಮಾಣಿಕರನ್ನು ಆಯ್ಕೆ ಮಾಡಿದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಸಹಕಾರಿಯಾಗುತ್ತದೆ. ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತವಿರಬೇಕು. ಅದಕ್ಕೆ ಜನಪ್ರತಿನಿಧಿಗಳು ಪ್ರಾಮಾಣಿಕರಾಗಬೇಕು. ಸ್ವಾತಂತ್ರೃಕ್ಕಾಗಿ ನಡೆಸಿದ ಆಂದೋಲನದಂತೆ ಹೋರಾಟ ನಿರಂತರ ನಡೆದರೆ ಮುಂದೊಂದು ದಿನ ಯಶಸ್ಸು ಸಿಗಲಿದೆ ಎಂದರು.
ಉಪ ಚುನಾವಣೆಯಲ್ಲಿ ಹೊಸ ಪ್ರಯೋಗಕ್ಕೆ ನಿರ್ಧಾರ…
ಶೀಘ್ರದಲ್ಲಿಯೇ ಬರಲಿರುವ ಸ್ಥಳೀಯ ನಗರಸಭೆಯ 22ನೇ ವಾರ್ಡ್‌ನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಮತದಾರರಿಗೆ ಯಾವುದೆ ಆಸೆ, ಅಮೀಷಗಳನ್ನೊಡ್ಡದೆ ಮತಯಾಚಿಸುವ ನಿರ್ಣಯ ಕೈಗೊಳ್ಳುವುದಾಗಿ ಮಾಜಿ ಶಾಸಕ ಅರುಣಕುಮಾರ ಪೂಜಾರ ಹಾಗೂ ಕೆ.ಬಿ. ಕೋಳಿವಾಡ ಘೋಷಿಸಿದರು. ಇನ್ನಿತರ ರಾಜಕೀಯ ಪಕ್ಷಗಳವರು ಹಾಗೂ ಪಕ್ಷೇತರರು ಕಣದಲ್ಲಿದ್ದರೆ ಅವರ ಮನವೊಲಿಸಿ ಭ್ರಷ್ಟಾಚಾರ ರಹಿತ ಹಾಗೂ ಕಡ್ಡಾಯ ಮತದಾನದ ಪ್ರಯತ್ನ ಮಾಡಿಸುವ ನಿರ್ಣಯ ಕೈಗೊಳ್ಳಲಾಯಿತು.