All Members Meeting in nelavagilu 
ಜಿಲ್ಲೆ

ವೈಜ್ಞಾನಿಕ ಆಹಾರ ಪದ್ಧತಿಯಿಂದ ಹೆಚ್ಚು ಲಾಭ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ನಂದಗುಡಿ
ರೈತರು ಹೈನೋದ್ಯಮದಲ್ಲಿ ವೈಜ್ಞಾನಿಕ ವಿಧಾನ ಅಳವಡಿಸಿಕೊಳ್ಳುವ ಮೂಲಕ ಗುಣಮಟ್ಟದ ಹಾಲು ಸರಬರಾಜು ಮಾಡಿ, ಹೆಚ್ಚಿನ ಲಾಭಗಳಿಸಬೇಕು ಎಂದು ಬಮುಲ್ ಮಾರ್ಗ ವಿಸ್ತಾರಣಾಧಿಕಾರಿ ಟಿ.ಎಂ.ಆನಂದ್ ಹೇಳಿದರು.
ಹೋಬಳಿಯ ನೆಲವಾಗಿಲು ಗ್ರಾಪಂನ ಅರೇಹಳ್ಳಿ ಎಂಪಿಸಿಎಸ್ ಆವರಣದಲ್ಲಿ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದರು. ರಾಸುಗಳಿಗೆ ಪೌಷ್ಟಿಕಾಂಶಭರಿತ ಆಹಾರ ನೀಡುವ ಜತೆಗೆ ನಿಗದಿತವಾಗಿ ಹಸಿ ಹಾಗೂ ಒಣ ಮೇವು ನೀಡಬೇಕು. ಒಕ್ಕೂಟದಿಂದ ರಾಸುಗಳಿಗೆ ಮ್ಯಾಟ್, ಮೇವು ಕತ್ತರಿಸುವ, ಹಾಲು ಕರೆಯುವ ಯಂತ್ರಗಳನ್ನು ಸಬ್ಸಿಡಿ ದರದಲ್ಲಿ ನೀಡುತ್ತಿದ್ದು, ಹೈನುಗಾರರು ಸದುಪಯೋಗ ಪಡೆಯಬಹುದು ಎಂದು ತಿಳಿಸಿದರು.
ಉತ್ಪಾದಕರೆಲ್ಲರೂ ಗುಣಮಟ್ಟದ ಹಾಲು ಉತ್ಪಾದನೆ ಮಾಡುವ ಮೂಲಕ ಸಂಘವನ್ನು ಪ್ರಗತಿಯ ಪಥದಲ್ಲಿ ಮುನ್ನಡೆಸಬೇಕು. 2022-23ನೇ ಸಾಲಿನಲ್ಲಿ ಸಂಘಕ್ಕೆ 8.81 ಲಕ್ಷ ರೂ. ವ್ಯಾಪಾರ ಲಾಭ ಬಂದಿದ್ದು, 4.08 ಲಕ್ಷ ರೂ. ನಿವ್ವಳ ಲಾಭ ಬಂದಿದೆ. ರೈತರಿಗೆ ಶೇ.1.91ರಷ್ಟು ಬೋನಸ್ ವಿತರಿಸಲಾಗುವುದು ಎಂದರು.
ಸಂಘಕ್ಕೆ ಅತಿ ಹೆಚ್ಚು ಹಾಲು ಪೂರೈಕೆ ಮಾಡಿದ ಮೂವರು ರೈತರನ್ನು ಸನ್ಮಾನಿಸಲಾಯಿತು. ನಿರ್ದೇಶಕರಾದ ಲಾವಣ್ಯಾ, ರಾಜಣ್ಣ, ರಮೇಶ್, ವಿಶ್ವನಾಥ್, ಸುವರ್ಣ, ರತ್ನಮ್ಮ, ದಯಾನಂದ, ಮುಖ್ಯ ಕಾರ್ಯನಿರ್ವಾಹಕ ಎಂ.ನಾಗರಾಜ, ಹಾಲು ಪರೀಕ್ಷಕ ಅನಿಲ್, ಸಹಾಯಕ ರಾಜಣ್ಣ ಹಾಗೂ ರೈತರು ಇದ್ದರು.