All Members Meeting 
ಜಿಲ್ಲೆ

ಸಹಕಾರ ಸಂಘದಲ್ಲಿ ಸದಸ್ಯರೇ ಮಾಲೀಕರು

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ದಾಬಸ್‌ಪೇಟೆ
ಸಹಕಾರ ಸಂಘದಲ್ಲಿ ಸದಸ್ಯರೇ ಮಾಲೀಕರು. ಸಂಘಗಳಲ್ಲಿ ದೊರೆಯುವ ಸೌಲಭ್ಯಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮರಳಕುಂಟೆ ವಿವಿದೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಎಲ್.ನರಸಿಂಹಮೂರ್ತಿ ಹೇಳಿದರು.
ಸೋಂಪುರ ಹೋಬಳಿಯ ಮರಳಕುಂಟೆ ವಿವಿದೋದ್ಧೇಶ ಪ್ರಾಥಮಿಕ, ಗ್ರಾಮೀಣ ಕೃಷಿ ಸಹಕಾರ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದ 2022-23ನೇ ಸಾಲಿನ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದರು.
ಗ್ರಾಮಿಣ ಭಾಗದ ರೈತರಿಗೆ ಸಹಕಾರ ಸಂಘಗಳಿಂದ ಸಾಕಷ್ಟು ಅನುಕೂಲವಾಗಿದೆ. ಸಂಘದಲ್ಲಿ ಸುಮಾರು 5,324 ಸದಸ್ಯರಿದ್ದಾರೆ. ಅವರೆಲ್ಲರೂ ಸಭೆಯಲ್ಲಿ ಭಾಗವಹಿಸಿ, ಪ್ರಶ್ನೆ ಕೇಳಿದರೆ, ಅದಕ್ಕೆ ಉತ್ತರ ದೊರೆಯುತ್ತದೆ. ಇದರಿಂದ ಎಲ್ಲ ಸಮಸ್ಯೆಗೂ ಪರಿಹಾರ ದೊರೆಯುತ್ತದೆ ಎಂದರು.
ಸಂಘದ ಮಾಜಿ ಅಧ್ಯಕ್ಷ ಎಚ್.ನಾಗಭೂಷಣ್ ಮಾತನಾಡಿ, ಸಹಕಾರ ಸಂಘಗಳು ಉತ್ತಮ ಪ್ರಗತಿ ಸಾಧಿಸಲು ರಾಜಕೀಯ ಹಸ್ತಕ್ಷೇಪ, ಪಕ್ಷಪಾತದಿಂದ ಮುಕ್ತರಾದಲ್ಲಿ ಮಾತ್ರ ಸದಸ್ಯರ ಹಿತ ಕಾಪಾಡಲು ಸಾಧ್ಯ. ಸಂಘ ಕೇವಲ ವ್ಯಾಪಾರ, ವಹಿವಾಟು ನಡೆಸಿ, ಲಾಭ ಗಳಿಸಲು ಸೀಮಿತಗೊಳ್ಳದೆ, ಸದಸ್ಯರಿಗೆ ಅನೂಕೂಲ ಮಾಡಿಕೊಡಬೇಕು ಎಂದರು.
ಕಾರ್ಯನಿರ್ವಾಹಕ ನಾಗರಾಜು ಮಾತನಾಡಿ, ನಮ್ಮಲ್ಲಿ ಷೇರು ಹಣ 74.44 ಲಕ್ಷ ರೂ.ಇದೆ. ಠೇವಣಿಯು 2.2021 ಕೋಟಿ ರೂ. ಬಿಡಿಸಿಸಿ ಬ್ಯಾಂಕ್‌ನಿಂದ 44,48,000 ರೂ.ಗಳನ್ನು ಷೇರು ಧನವಾಗಿ ಇಡಲಾಗಿದೆ. ಪ್ರಸ್ತುತ ಬಿಡಿಸಿಸಿ ಬ್ಯಾಂಕಿನಿಂದ 762 ಸದಸ್ಯರಿಗೆ 6.063 ಕೋಟಿ ರೂ.ಕೆಸಿಸಿ ಸಾಲ ವಿತರಿಸಲಾಗಿದೆ. ಸುಮಾರು 86 ಸದಸ್ಯರಿಗೆ 1.024 ಕೋಟಿ ರೂ. ವಿತರಿಸಲಾಗಿದೆ. ಒಟ್ಟು ಸಾಲದ ಮೊತ್ತ 6.41.44 ಕೋಟಿ ರೂ.ಆಗಿದೆ. ಕೃಷಿಯೇತರ ಸಾಲವಾಗಿ 2.30.21 ಕೋಟಿ ರೂ.ಆಗಿದೆ ಎಂದು ತಿಳಿಸಿದರು.
ಬಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ನರಸಿಂಹಮೂರ್ತಿ ಮಾತನಾಡಿ, ಬ್ಯಾಂಕಿನಲ್ಲಿ ಪ್ರತಿ ಗ್ರಾಹಕನಿಗೂ ಎಟಿಎಂ ಕಾರ್ಡ್ ನೀಡಲಾಗಿದೆ. ಆರ್‌ಟಿಜಿಎಸ್ ಹಾಗೂ ಎನ್‌ಇಡಿಎಸ್ ಸೇವೆಗಳೂ ಲಭ್ಯವಿದೆ. ಲಾಕರ್ ಸೌಲಭ್ಯವಿದೆ. ಅದನ್ನು ರೈತರು ಹಾಗೂ ಸೀಶಕ್ತಿ ಮಹಿಳೆಯರು ಉಪಯೋಗಿಸಬೇಕು ಎಂದರು.
ನಿರ್ದೇಶಕರಾದ ಎಚ್.ನಾಗಭೂಷಣ್, ಡಿ.ಬಿ.ಮಂಜುನಾಥ, ವೀರಣ್ಣ, ಡಿ.ರಾಮಕೃಷ್ಣಯ್ಯ, ರಾಜಣ್ಣ, ತಾರಾ ಶ್ರೀನಿವಾಸ್, ಹನುಮಕ್ಕ, ವೆಂಕಟಾಚಲಯ್ಯ, ಹನುಮಂತಯ್ಯ, ಹನುಮಯ್ಯ, ಮಾರಾಟ ಗುಮಾಸ್ತ ಆರ್.ಕುಮಾರಸ್ವಾಮಿ, ಸೌಮ್ಯಾ, ಟಿ.ದೇವರಾಜು ಇದ್ದರು.