ಜಿಲ್ಲೆ

ವಾಲಿಬಾಲ್ ಕ್ಲಬ್ ನವೀಕರಣಕ್ಕೆ ನಿರ್ಧಾರ

ಚನ್ನಗಿರಿ: ಅಂತಾರಾಷ್ಟ್ರೀಯ ವಾಲಿಬಾಲ್ ಆಟಗಾರನ ಇಚ್ಚಾಶಕ್ತಿಗೆ ಅನುಸಾರವಾಗಿ ಸಂತೇಬೆನ್ನೂರಿನ ಹಿರಿಯ ಆಟಗಾರರು ವೀನಸ್ ವಾಲಿಬಾಲ್ ಕ್ಲಬ್ ನವೀಕರಿಸಲು ಸಮ್ಮತಿಸಿ, ಸಭೆಯಲ್ಲಿ ನಿರ್ಣಯ ತೆಗೆದುಕೊಂಡರು.

ತಾಲೂಕಿನ ಸಂತೇಬೆನ್ನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ವೀನಸ್ ಸ್ಫೋರ್ಟ್ಸ್ ಕ್ಲಬ್ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಸರ್ವ ಸದಸ್ಯರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಅಂತಾರಾಷ್ಟ್ರೀಯ ಮಾಜಿ ವಾಲಿಬಾಲ್ ಆಟಗಾರ ಇಮ್ತಿಯಾಜ್ ಅಹಮದ್ ಮಾತನಾಡಿ, ಸ್ವಗ್ರಾಮದಲ್ಲಿ 1970-80ರ ದಶಕದ ಹಳೆಯ ವಾಲಿಬಾಲ್ ಕ್ರೀಡೆಯ ಮೆರುಗನ್ನು ಮತ್ತೆ ಮರುಕಳಿಸುವಂತೆ ಮಾಡಲು ಎಲ್ಲರ ಸಹಕಾರ ಅಗತ್ಯ. ಗ್ರಾಮದ ಯುವಕರಿಗೆ ವಾಲಿಬಾಲ್ ಅಂಕಣ ವ್ಯವಸ್ಥೆ, ಬೇಸಿಗೆ ಮತ್ತು ದಸರಾ ರಜೆಯಲ್ಲಿ ತರಬೇತಿ ಶಿಬಿರ ಆಯೋಜನೆ, ಶಿಬಿರಕ್ಕೆ ಬೇಕಾದ ಸಾಮಗ್ರಿಗಳ ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳಿಗೆ ಪಂದ್ಯಾವಳಿ ನಡೆಸಬೇಕು ಎಂದರು.

ಕ್ಲಬ್‌ನ ಹಿರಿಯ ಆಟಗಾರ ಜಿ.ಎಸ್. ನಾಗರಾಜ್ ಮಾತನಾಡಿ, ರಾಜ್ಯದಲ್ಲಿಯೇ ವಾಲಿಬಾಲ್‌ಗೆ ಹೆಸರು ವಾಸಿಯಾಗಿದ್ದ ಸಂತೇಬೆನ್ನೂರು ಇಂದು ಎಲ್ಲರ ಮನಸ್ಸಿನಿಂದ ದೂರ ಆಗುತ್ತಿದೆ. ಅದನ್ನು ಮರು ದಾಖಲಿಸಬೇಕು ಎಂದು ಹೇಳಿದರು.

ವಾಲಿಬಾಲ್ ಕ್ಲಬ್‌ನ ನೋಂದಣಿಗೆ ವ್ಯವಸ್ಥೆ ಮಾಡಲಾಗಿದ್ದು, ಹೊಸ ಅಂಕಣವನ್ನು ಗ್ರಾಮದ ಪಶು ಆಸ್ಪತ್ರೆ ಪಕ್ಕದಲ್ಲಿ ನಿರ್ಮಿಸಲು ಸಿದ್ಧತೆ ನಡೆಸಲಾಗಿದೆ. ದಸರಾ ಶಿಬಿರ ಆಯೋಜಿಸಲಾಗುತ್ತಿದ್ದು, ಹೋಬಳಿ ಮಟ್ಟದ ಪಂದ್ಯಾವಳಿ ನಡೆಸಲು ತೀರ್ಮಾನ ಮಾಡಿದ್ದೇವೆ ಎಂದರು.

ಹಿರಿಯ ಆಟಗಾರ ಹಾಗೂ ನಿವೃತ್ತ ಡಿವೈಎಸ್‌ಪಿ ಅಬ್ದುಲ್ ರೆಹಮಾನ್, ಎಂ.ಜಿ. ಸಾದಿಕ್, ಬಿ.ಅರ್. ರಾಜಪ್ಪ, ತಿಪ್ಪೇಸ್ವಾಮಿ, ಕೃಷ್ಣಮೂರ್ತಿ, ಜಿ.ಎನ್. ಸುರೇಶ್, ಗಂಗಾಧರಪ್ಪ, ಬಾಲಚಂದ್ರ, ಹನುಮಂತಪ್, ಹಮೀದ್ ಇದ್ದರು.