ಮಂಡ್ಯ: ಕೊರಮ ಮತ್ತು ಕೊರಚ ಸಮುದಾಯವನ್ನು ಗುರಿಯಾಗಿಸಿಕೊಂಡಿರುವ ಮಾಜಿ ಸಚಿವ ಎಚ್.ಆಂಜನೇಯ ಅವರು ಪರಿಶಿಷ್ಟ ಅಲೆಮಾರಿಗಳ ವಿರೋಧಿಯಾಗಿದ್ದು, ರಾಜಕೀಯ ದುರುದ್ದೇಶದಿಂದ ಏಕಪಕ್ಷೀಯವಾಗಿ ಪರಿಶಿಷ್ಟ ಅಲೆಮಾರಿಗಳ ಸಮಾವೇಶ ನಡೆಸುವ ನಿರ್ಧಾರ ಕೈಗೊಂಡಿರುವುದು ಅಸಂಬದ್ಧ ಎಂದು ಅಖಿಲ ಕರ್ನಾಟಕ ಕುಳುವ ಮಹಾಸಭಾದ ಮಾಜಿ ಅಧ್ಯಕ್ಷ ತಿರುಮಲಾಪುರ ಗೋಪಾಲ್ ಆಕ್ರೋಶ ವ್ಯಕ್ತಪಡಿಸಿದರು.
ಸಮಾವೇಶ ನಡೆಸುವ ಸಂಬಂಧ ಜೂ.4ರಂದು ಪರಿಶಿಷ್ಟ ಜಾತಿಯ ಅಲೆಮಾರಿ ಸಮುದಾಯಗಳ ಸಭೆ ನಡೆಸಿದ ಅವರು, ಎಲ್ಲ ಸಮುದಾಯಗಳ ಅಭಿಪ್ರಾಯ ಪಡೆಯದೇ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಾರೆ. ಪರಿಶಿಷ್ಟ ಅಲೆಮಾರಿಗಳ 51 ಸಮುದಾಯಗಳ ಪೈಕಿ ಕೇವಲ 13 ಸಮುದಾಯದ ಮುಖಂಡರ ನಡುವೆ ಚರ್ಚಿಸಿ ಉಳಿದ 38 ಸಮುದಾಯಗಳ ಅಭಿಪ್ರಾಯವನ್ನು ನಿರ್ಲಕ್ಷಿೃಸಲಾಗಿದೆ. 2016ರಲ್ಲಿ ನಡೆದ ಚುನಾವಣೆಯಲ್ಲಿ ಅವರಿಗೆ ಕೊರಮ ಮತ್ತು ಕೊರಚ ಸಮುದಾಯಗಳ ಮತ ದೊರೆತಿಲ್ಲ ಎಂಬ ಕಾರಣಕ್ಕೆ ಈ ರೀತಿಯಾಗಿ ಹಗೆಯ ರಾಜಕಾರಣ ಮಾಡುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಸಭೆಯ ನಿರ್ಣಯವನ್ನು ವಿರೋಧಿಸಿದ್ದಕ್ಕೆ ಎಚ್.ಆಂಜನೇಯ ಬೆಂಬಲಿಗರು ಎಸ್ಸಿ/ಎಸ್ಟಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂಧಿಸಿ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ 7 ಜನ ಆರೋಪಿಗಳ ಮೇಲೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರೂ, ಇನ್ನು ಬಂಧಿಸಿಲ್ಲ ಎಂದು ಆರೋಪಿಸಿದರು.
ಅಲೆಮಾರೆ ಜಾರಿಗಳ ನಡುವೆ ದ್ವೇಷ, ಅಸೂಯೆ ಮೂಡಿಸಿ ವಿಷ ಬೀಜ ಬಿತ್ತುತ್ತಿರುವ ಮಾಜಿ ಸಚಿವ ಎಚ್.ಆಂಜನೇಯ ಹಾಗೂ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ, ಆರೋಪಿಗಳನ್ನು ಕೂಡಲೇ ಬಂಧಿಸುವಂತೆ, ಮಹಿಳಾ ಮುಖಂಡರಿಗೆ ಮಹಿಳಾ ಆಯೋಗದಿಂದ ಹಾಗೂ ಸರ್ಕಾರದಿಂದ ಸೂಕ್ತ ರಕ್ಷಣೆ ಒದಗಿಸುವಂತೆ ಒತ್ತಾಯಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರು ನೀಡಲಾಗುವುದು ಎಂದು ಹೇಳಿದರು.
ಭೋವಿ ಸಮಾಜದ ಜಿಲ್ಲಾಧ್ಯಕ್ಷ ಟಿ.ಗುರಪ್ಪ, ವೆಂಕಟೇಶ್, ರವಿಕುಮಾರ್, ಶ್ರೇಯಸ್ ಶ್ರೀನಿವಾಸ್, ಗಂಗಾಧರ್, ಸುರೇಶ್ ಇತರರಿದ್ದರು.