ಜಿಲ್ಲೆ

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಿ: ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು: ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಮಾಜದ ಎಲ್ಲ ವರ್ಗಗಳ ಜನರು ಕೈಜೋಡಿಸಿ ಗುಣಮಟ್ಟದ ಶಿಕ್ಷಣ ಒದಗಿಸಿದರೆ, ಖಾಸಗಿ ಶಾಲೆಯ ಮಕ್ಕಳೂ ನಮ್ಮ ಸರ್ಕಾರಿ ಶಾಲೆಗಳತ್ತ ಮುಖಮಾಡುತ್ತಾರೆ ಎಂದು ಸಚಿವ ಕೃಷ್ಣಬೈರೇಗೌಡ ಅಭಿಪ್ರಾಯಪಟ್ಟರು.

ಬ್ಯಾಟರಾಯನಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಉದ್ಘಾಟಿಸಿ ಗುರುವಾರ ಮಾತನಾಡಿದ ಅವರು, ಸಿಎಸ್‌ಆರ್ ನಿಧಿಯನ್ನು ಬಳಸಿಕೊಂಡು ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸಲು ರಾಜ್ಯ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಉದ್ಯಮಿ ದಯಾನಂದ್ ಪೈ ಅವರ ವಿದ್ಯಾಶಿಲ್ಪ್ ಅಕಾಡೆಮಿಯು ತನ್ನ ಸಿಎಸ್‌ಆರ್ ನಿಧಿಯಿಂದ 4.5 ಕೋಟಿ ರೂ. ವೆಚ್ಚದಲ್ಲಿ ಹಲವು ಸೌಲಭ್ಯಗಳನ್ನು ಒಳಗೊಂಡ ಹೈಟೆಕ್ ಶಾಲೆಯನ್ನಾಗಿಸಿದ್ದಾರೆ. ಇಂತಹ ಶಾಲೆಯಲ್ಲಿ ಬಡವರ ಮಕ್ಕಳಿಗೆ ಸಕಲ ಸೌಲಭ್ಯದೊಂದಿಗೆ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು ಎಂದರು.

ಬ್ಯಾಟರಾಯನಪುರ ಕ್ಷೇತ್ರದಲ್ಲಿ ಈಗಾಗಲೇ ಹಲವು ಸರ್ಕಾರಿ ಶಾಲೆಗಳನ್ನು ಸಿಎಸ್‌ಆರ್ ನಿಧಿ ಬಳಸಿ ಉನ್ನತೀಕರಿಸಲಾಗಿದೆ. ಇಲ್ಲೆಲ್ಲಾ ಖಾಸಗಿ ಶಾಲೆಗಳಿಗಿಂತ ಉತ್ತಮ ಗುಣಮಟ್ಟದ ಕಟ್ಟಡ ಹಾಗೂ ಕಲಿಕಾ ಸೌಲಭ್ಯಗಳನ್ನು ಒದಗಿಸಲಾಗಿದೆ. ಇದರ ಪರಿಣಾಮ ಇಂತಹ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯ ಏರಿಕೆ ಕಂಡಿದೆ ಎಂದು ಸಚಿವರು ತಿಳಿಸಿದರು.

ಗುಣಮಟ್ಟದ ಶಿಕ್ಷಣಕ್ಕೆ ಗಮನ ನೀಡಿ:

ದೊಡ್ಡ ಕಟ್ಟಡ ನಿರ್ಮಿಸಿದರೆ ಶಾಲೆಗಳು ಉತ್ತಮಗೊಳ್ಳುವುದಿಲ್ಲ. ಇದರ ಬದಲು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಬೇಕು. ಆಗ ಮಾತ್ರ ನಮ್ಮೆಲ್ಲರ ಕೆಲಸ ಸಾರ್ಥಕವಾಗುತ್ತದೆ. ಆ ನಿಟ್ಟಿನಲ್ಲಿ ಶಿಕ್ಷಕರ ಮೇಲೆ ಹೆಚ್ಚಿನ ಜವಾಬ್ದಾರಿ ಇದ್ದು, ಶಾಲೆಯ ಶಿಕ್ಷಕ ವೃಂದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವತ್ತ ಗಮನ ಹರಿಸಬೇಕು. ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಭವಿಷ್ಯದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸುವಂತಾಗಬೇಕು ಎಂದು ಸಚಿವರು ಆಶಿಸಿದರು.

ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ದಯಾನಂದ ಪೈ, ಸತೀಶ್ ಪೈ, ಆನಂದ ಪೈ, ನಗರಸಭೆಯ ಮಾಜಿ ಸದಸ್ಯ ಬಿ.ಎನ್.ಬೈರೇಗೌಡ, ಸ್ಥಳೀಯ ಮುಖಂಡರಾದ ಆದಿರಾಮು, ಬಿ.ಕೆ.ಗೋಪಾಲಕೃಷ್ಣ, ಮುನಿರಾಜು, ಎಲ್.ನಂಜಪ್ಪ, ಮಂಜುನಾಥ್, ಶಾಲೆಯ ಮುಖ್ಯೋಪಾಧ್ಯಯ ರವಿಕುಮಾರ್ ಹಾಗೂ ಇತರರಿದ್ದರು.

ಹೈಟೆಕ್ ಶಾಲೆಯಲ್ಲಿ ಸಕಲ ಸೌಲಭ್ಯ:

ಬಳ್ಳಾರಿ ರಸ್ತೆ ಬ್ಯಾಟರಾಯನಪುರದಲ್ಲಿ ಸಿಎಸ್‌ಆರ್ ನಿಧಿಯಡಿ ನಿರ್ಮಿಸಿರುವ ನೂತನ ಸರ್ಕಾರಿ ಶಾಲೆಯು ಕಲಿಕೆಗೆ ಅಗತ್ಯವಿರುವ ಸಕಲ ಸೌಲಭ್ಯವನ್ನು ಪಡೆದಿದೆ. 17 ಕೊಠಡಿಗಳನ್ನು ಹೊಂದಿರುವ 2 ಅಂತಸ್ತಿನ ಕಟ್ಟಡದಲ್ಲಿ ಗ್ರಂಥಾಲಯ, ಪ್ರಯೋಗಾಲಯ, ಕಂಪ್ಯೂಟರ್, ಯೋಗ ಕ್ಲಾಸ್, ಕ್ರೀಡೆ, ನಲಿ-ಕಲಿ ತರಗತಿ ನಡೆಸಲು ಹೊಸ ಮಾದರಿಯಲ್ಲಿ ರೂಂಗಳನ್ನು ನಿರ್ಮಿಸಲಾಗಿದೆ. ಮುಖ್ಯೋಪಾಧ್ಯಯರು, ಶಿಕ್ಷಕರಿಗೂ ಪ್ರತ್ಯೇಕ ಕೊಠಡಿಗಳನ್ನು ಹೊಂದಿವೆ.