ಮೈಸೂರು: ಅಂಚೆ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜಿಡಿಎಸ್ ನೌಕರರಿಗೆ ಇಲಾಖೆಯ ನೌಕರರಿಗೆ ಸಮಾನಾಂತರವಾಗಿ ಸವಲತ್ತು ನೀಡುವಲ್ಲಿ ತಾರತಮ್ಯ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಕೇಂದ್ರ, ರಾಜ್ಯ ಸರ್ಕಾರಗಳು ಸಾರ್ವಜನಿಕರಿಗೆ ನೀಡುತ್ತಿರುವ ಸಾಮಾಜಿಕ ಭದ್ರತಾ ಯೋಜನೆಗಳನ್ನು ಭಾರತದ ಮೂಲೆ ಮೂಲೆಗಳಲ್ಲಿರುವ ಹಳ್ಳಿಯ ಕಟ್ಟಕಡೆಯ ವ್ಯಕ್ತಿಗೂ ಅಂಚೆ ಇಲಾಖೆ ನೌಕರರು ತಲುಪಿಸುತ್ತಿದ್ದಾರೆ. ಆದರೆ, ಜಿಡಿಎಸ್ ನೌಕರರಿಗೆ ಸವಲತ್ತು ನೀಡಲು ತಾರತಮ್ಯ ಮಾಡಲಾಗುತ್ತಿದೆ. 2018ರಲ್ಲಿ ನಡೆಸಿದ 16 ದಿನಗಳ ಮುಷ್ಕರ, 2022ರಲ್ಲಿ ದೆಹಲಿಯ ರಾಜ್‌ಘಾಟ್‌ನಲ್ಲಿ ನಡೆಸಿದ ಉಪವಾಸ ಸತ್ಯಾಗ್ರಹದ ಸಂದರ್ಭದಲ್ಲಿ ಇಲಾಖೆಯ ಅಧಿಕಾರಿಗಳು ನೀಡಿದ ಭರವಸೆ ಆಧಾರದ ಮೇಲೆ ಹೋರಾಟ ಹಿಂಪಡೆದಿದ್ದೆವು. ಸೇವಾ ಹಿರಿತನದ ಮೇಲೆ ಹೆಚ್ಚುವರಿ ಇಂಕ್ರಿಮೆಂಟ್, ಆರೋಗ್ಯ ವಿಮೆ, ಗ್ರೂಪ್ ಇನ್ಶೂರೆನ್ಸ್ ಸೇರಿದಂತೆ ನಮ್ಮ ಬೇಡಿಕೆಗಳನ್ನು ಸದ್ಯದಲ್ಲೇ ಈಡೇರಿಸುವುದಾಗಿ ಭರವಸೆ ನೀಡಿ ವಂಚಿಸಲಾಗಿದೆ ಎಂದು ಕಿಡಿಕಾರಿದರು.
8 ಗಂಟೆಗಳ ಕೆಲಸ ನೀಡಿ, ನಿವೃತ್ತಿ ವೇತನ ಸೇರಿದಂತೆ ಎಲ್ಲ ಸವಲತ್ತುಗಳನ್ನು ನೀಡಬೇಕು. ಕಮಲೇಶ್ ಚಂದ್ರ ಸಮಿತಿ ವರದಿಯಂತೆ ಈಡೇರದೆ ಇರುವ ಶಿಫಾರಸುಗಳನ್ನು ಕೂಡಲೇ ಜಾರಿಗೊಳಿಸಬೇಕು. ಎಸ್‌ಡಿಬಿಎಸ್ ಸ್ಕೀಮ್‌ನಲ್ಲಿ 3 ಪರ್ಸೆಂಟ್‌ನಿಂದ 10 ಪರ್ಸೆಂಟ್‌ವರೆಗೆ ಹೆಚ್ಚಿಸಿ ನಿವೃತ್ತಿ ವೇತನ ನೀಡಬೇಕು. ಐಪಿಪಿಬಿ, ಆರ್‌ಪಿಎಲ್‌ಐ ಕೆಲಸಗಳಿಗೆ ನೀಡುತ್ತಿರುವ ಪ್ರೋತ್ಸಾಹ ಧನ ರದ್ದುಗೊಳಿಸಬೇಕು. ನೂತನವಾಗಿ ನೇಮಕವಾದ ನೌಕರರಿಗೆ ಕೆಲಸದ ಹೊರೆಯ ಆಧಾರದ ಮೇಲೆ ವೇತನ ನಿಗದಿಗೊಳಿಸಬೇಕು. ನೌಕರರು ತಮ್ಮ ಸ್ವಂತ ಮೊಬೈಲ್‌ನಲ್ಲೇ ಇಲಾಖಾ ಕೆಲಸವನ್ನು ನಿರ್ವಹಿಸಲು ಒತ್ತಾಯಿಸುವುದು ಮತ್ತು ಅವೈಜ್ಞಾನಿಕ ಟಾರ್ಗೆಟ್‌ಗಳನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ವಿಭಾಗೀಯ ಅಧ್ಯಕ್ಷ ಸೋಮಶೇಖರ್, ಖಜಾಂಚಿ ಮಲ್ಲಯ್ಯ, ಕಾರ್ಯದರ್ಶಿ ರಾಣಿ ಇತರರಿದ್ದರು.