ಲಕ್ಷ್ಮೇಶ್ವರ: ಸಾರ್ವಜನಿಕ ಗಜಾನನ ಮಹಾ ಮಂಡಳಿಯಿಂದ ಪಟ್ಟಣದಲ್ಲಿ ಸುಂದರ ಗಣಪತಿ ಮೂರ್ತಿ ಪ್ರತಿಷ್ಠಾಪನೆ, ಸಾಂಸ್ಕೃತಿಕ-ಸಾಂಪ್ರದಾಯಿಕವಾಗಿ ಗಣಪತಿ ವಿಸರ್ಜನೆ ಮಾಡಿದವರಿಗೆ ಮತ್ತು ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಿದವರಿಗೆ ಬಹುಮಾನ ವಿತರಿಸಲಾಯಿತು.
ಬಹುಮಾನ ವಿತರಿಸಿ ಮಾತನಾಡಿದ ಡಿವೈಎಸ್ಪಿ ಮುರ್ತುಜಾ ಖಾದ್ರಿ, ‘ಪ್ರತಿಯೊಂದು ಹಬ್ಬಗಳ ಆಚರೆಣೆಗೆ ಅರ್ಥ, ಸಂಸ್ಕೃತಿ, ಸಂಪ್ರದಾಯಗಳ ಹಿನ್ನೆಲೆ ಇದೆ. ವಿಶೇಷವಾಗಿ ಗಣೇಶ ಹಬ್ಬದಲ್ಲಿ ಬಳಸುವ ಡಿಜೆ ನಮ್ಮ ಸಂಸ್ಕೃತಿಯಲ್ಲ. ಡಿಜೆ ಸಿಡಿಲಬ್ಬರದಿಂದ ಮಕ್ಕಳು ಸೇರಿ ಎಲ್ಲರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಡಿಜೆ ಬದಲಾಗಿ ನಮ್ಮ ನಾಡಿನ ಜಾನಪದ ಕಲಾ ವೈಭವದೊಂದಿಗೆ ಗಣೇಶ ವಿಸರ್ಜನೆ ಮಾಡಿದರೆ ನಮ್ಮ ಸಂಸ್ಕೃತಿ, ಕಲೆ ಉಳಿಸಿದಂತಾಗುತ್ತದೆ. ಹಬ್ಬದ ಆಚರಣೆಗಳು ಅರ್ಥಪೂರ್ಣ, ಸಮಾಜೋಪಯೋಗಿಯಾಗಿರಬೇಕು ಎಂದರು.
ಸುಂದರವಾದ ಗಣಪತಿಯ ಮೂರ್ತಿಗಾಗಿ ಪಟ್ಟಣದ ಕುರುಬರ ಗಲ್ಲಿಯ ಕಾಳಿಕಾ ಯುವಕ ಮಂಡಳ (ಪ್ರಥಮ) ಸೊಪ್ಪಿನಕೆರೆಯ ಸನಾತನ ಹಿಂದು ಯುವಕ ಮಂಡಳ (ದ್ವಿತೀಯ), ಬಸ್ತಿಬಣದ ಶಾಂಭವಿ ಯುವಕ ಮಂಡಳಕ್ಕೆ (ತೃತೀಯ) ಬಹುಮಾನ ನೀಡಲಾಯಿತು. ಇನ್ನು ಸಾಂಸ್ಕೃತಿಕ/ಸಾಂಪ್ರದಾಯಿಕ ಗಣೇಶ ಮೂರ್ತಿ ವಿಸರ್ಜನೆಗಾಗಿ ಬಸ್ತಿಕೆರಿಯ ಪಂಪ ಯುವಕ ಮಂಡಳ (ಫ್ರಥಮ), ತೇರಿನ ಮನೆಯ ಗಜಾನನ ಯುವಕ ಮಂಡಳ (ದ್ವಿತೀಯ), ಪುರಸಭೆ ಹತ್ತಿರದ ಗಂಗಾಮಾತಾ ಯುವಕ ಮಂಡಳಕ್ಕೆ (ತೃತೀಯ) ಹಾಗೂ ಗಣಪತಿಯ ಮುಂಭಾಗ ಆಕರ್ಷಕ ವಿದ್ಯುತ್ ದೀಪ ಅಲಂಕಾರಕ್ಕಾಗಿ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.
ಸಾರ್ವಜನಿಕ ಗಜಾನನ ಮಹಾಮಂಡಳಿ ಅಧ್ಯಕ್ಷ ಈರಣ್ಣ ಪೂಜಾರ, ವಿಜಯ ಹತ್ತಿಕಾಳ, ಗಂಗಾಧರ ಮೆಣಸಿನಕಾಯಿ ತಿಪ್ಪಣ್ಣ ಸಂಶಿ, ಬಸವರಾಜ ಚಕ್ರಸಾಲಿ, ವಿಜಯ ಕುಂಬಾರ, ಫಕೀರೇಶ ಅಣ್ಣಿಗೇರಿ, ಅಮಿತ ಗುಡಿಗೇರಿ, ಮುತ್ತು ಕರ್ಜೆಕಣವರ, ಗಣಪತಿ ಮಂಡಳಿಯ ಸದಸ್ಯರು ಇದ್ದರು.