ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
ಪ್ರತಿ ತರಗತಿ ಕೋಣೆ ಸ್ಮಾರ್ಟ್, ಪ್ರತಿ ವಿಷಯ ಬೋಧನೆಗೆ ಸ್ನಾತಕೋತ್ತರ ಪದವಿ ಪಡೆದ ಶಿಕ್ಷಕರು, ವೈಫೈ ಸೌಲಭ್ಯ, ಅತ್ಯಾಧುನಿಕ ಕಂಪ್ಯೂಟರ್ ಕೊಠಡಿ. ಅಟಲ್ ಟಿಂಕ್‌ರಿಂಗ್ ಲ್ಯಾಬ್, ರ‌್ಯಾಂಕ್ ವಿದ್ಯಾರ್ಥಿಗಳಿಗೆ 12 ವಿದ್ಯಾರ್ಥಿ ವೇತನ. ಡೊನೇಶನ್ ಹಣ ಉನ್ನತ ಶಿಕ್ಷಣಕ್ಕೆ ಬಳಸಿ ಎಂಬ ಸ್ಲೋಗನ್.
ಇದ್ಯಾವುದೋ ಖಾಸಗಿ ಶಾಲೆ ಜಾಹೀರಾತಲ್ಲ. ವಿಶಿಷ್ಟ ಕೊಡುಗೆ ಮೂಲಕ ವಿದ್ಯಾರ್ಥಿಗಳನ್ನು ಸೆಳೆಯುತ್ತಿರುವ ಶಾಲೆ ಬೈಂದೂರು ವಿಧಾನಸಭಾ ಕ್ಷೇತ್ರದ ಹಕ್ಲಾಡಿ ಗ್ರಾಮದಲ್ಲಿರುವ ಶ್ರೀ ಕೆಎಸ್ಸೆಸ್ ಸರ್ಕಾರಿ ಪ್ರೌಢಶಾಲೆಯ ಯಶೋಗಾಥೆಯಿದು. ಹಕ್ಲಾಡಿ ಶ್ರೀ ಕೆಎಸ್ಸೆಸ್ ಸರ್ಕಾರಿ ಪ್ರೌಢಶಾಲೆ 1965ರಲ್ಲಿ ಆರಂಭವಾಗಿದ್ದು, ಐವತ್ತರ ಸಂಭ್ರದ ನಂತರ ಒಂದಲ್ಲಾ ಒಂದು ಹೊಸ ಪ್ರಯೋಗಗಳ ಮೂಲಕ ಜಿಲ್ಲೆಯ ಅತ್ಯುತ್ತಮ ಪ್ರೌಢಶಾಲೆಯಲ್ಲಿ ಹಕ್ಲಾಡಿ ಶಾಲೆ ಒಂದಾಗಿ ಗುರುತಿಸಿಕೊಂಡಿದೆ.
ಈ ಶಾಲೆಯಲ್ಲಿ ಎಲ್ಲವೂ ಉಚಿತ. ನಿಮ್ಮ ಮಕ್ಕಳು ನಮ್ಮದೇ ಶಾಲೆಯಲ್ಲಿ ಕಲಿಯಲಿ. ಉಳಿಸಿದ ಹಣ ಮಕ್ಕಳ ಉನ್ನತ ಶಿಕ್ಷಣಕ್ಕೆ ಖರ್ಚು ಮಾಡಿ ಎನ್ನುವ ವಿನೂತನ ಸೂತ್ರ ಅಳವಡಿಸಿಕೊಂಡ ಜಿಲ್ಲೆಯ ಮೊದಲ ಪ್ರೌಢಶಾಲೆ.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 3ನೇ ರ‌್ಯಾಂಕ್, ಇಬ್ಬರು ಐದನೇ ರ‌್ಯಾಂಕ್ ಪಡೆದು ಶಾಲೆಯ ಹೆಸರನ್ನು ಬೆಳಗಿಸಿದ್ದಾರೆ. ವಿದ್ಯಾರ್ಥಿನಿ ಸೌಜನ್ಯಾ ಮುಖ್ಯಮಂತ್ರಿ ಮಕ್ಕಳ ಸಭೆಯಲ್ಲಿ ಭಾಗವಹಿಸಿ ವಿಷಯ ಮಂಡನೆ ಮಾಡುವ ಮೂಲಕ ಸಾಮಾಜಿಕ ಬದ್ಧತೆ ಕೂಡಾ ಪ್ರದರ್ಶಿಸಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದ್ದರೂ ಮತ್ತೊಂದು ಕಡೆ ಖಾಸಗಿ ಶಾಲೆಗೆ ಸಡ್ಡು ಹೊಡೆಯುವಷ್ಟು ವ್ಯವಸ್ಥೆಗಳನ್ನು ಮಾಡಿಕೊಳ್ಳುವ ಮೂಲಕ ಸರ್ಕಾರಿ ಶಾಲೆಗಳು ಮುಂದಡಿ ಇಡುತ್ತಿರುವುದು ಆಶಾದಾಯಕ ಬೆಳವಣಿಗೆ.
ಹಳೇ ವಿದ್ಯಾಥಿಗಳು, ಪಾಲಕರು ಸೇರಿ 40 ಲಕ್ಷ ರೂ. ವೆಚ್ಚದ ಆಡಿಟೋರಿಯಮ್ ಮಾಡಿಕೊಟ್ಟಿದ್ದಾರೆ. ಶಿಕ್ಷಕರು, ಪಾಲಕರು, ಹಳೆ ವಿದ್ಯಾರ್ಥಿಗಳು, ಸ್ಥಳೀಯಾಡಳಿತ ಒಟ್ಟಾದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಹಕ್ಲಾಡಿ ಸರ್ಕಾರಿ ಪ್ರೌಢಶಾಲೆ ಸಾಕ್ಷಿ.
ಪ್ರತಿವರ್ಷ ಖಾಸಗಿ ಶಾಲೆಗಳನ್ನು ಮೀರಿಸುವ ಎಸ್ಸೆಸ್ಸೆಲ್ಸಿ ಫಲಿತಾಂಶ. ಕಳೆದ ಬಾರಿ 3 ಮತ್ತು 5ನೇ ರ‌್ಯಾಂಕ್, ಪಾಲಕರು ವಿದ್ಯಾಭಿಮಾನಿಗಳು ನಡೆಸುವ ಶಾಲೆ. ಪ್ರತಿ ಬುಧವಾರ ಉಚಿತ ಯಕ್ಷಗಾನ ತರಬೇತಿ, ಪ್ರತಿ ವಾರ ರಂಗ ತರಬೇತಿ, ಜಿಲ್ಲೆಯಲ್ಲಿಯೇ ಉತ್ತಮ ಗ್ರಂಥಾಲಯ ಸೌಲಭ್ಯ, ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಪ್ರತ್ಯೇಕ ತರಗತಿ ಕೊಠಡಿ. ಯಾವುದೇ ಖಾಸಗಿ ಶಾಲೆಯಲ್ಲಿ ಇಲ್ಲದ ಎನ್‌ಎಂಎಂಎಸ್ ರಾಷ್ಟ್ರೀಯ ಪ್ರತಿಭಾನ್ವೇಷಣ ಪರೀಕ್ಷೆ ತರಬೇತಿ, ರ‌್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ 12 ಸಾವಿರ ರೂ.ವಿದ್ಯಾರ್ಥಿವೇತನ. ಪ್ರತಿದಿನ ಒಂದೊಂದು ಬಗೆಯ ಊಟ, ಪಾಲಕರೇ ಮುಂದೆ ನಿಂತು 40 ಲಕ್ಷ ರೂ.ಖರ್ಚುಮಾಡಿ ನಿರ್ಮಿಸಿದ 1ಸಾವಿರ ವಿದ್ಯಾರ್ಥಿಗಳು ಕುಳಿತುಕೊಳ್ಳುವ ಅಡಿಟೋರಿಯಂ, ವಿಶಾಲವಾದ ಮೈದಾನ, ಸಿಸಿ ಟಿವಿ ಕಣ್ಗಾವಲು, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ. ಮಣಿಪಾಲ್ ಅಕಾಡೆಮಿ ಟ್ಯೂಷನ್, ಶಿಕ್ಷಕರಿಂದ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ತರಬೇತಿ ಇಷ್ಟೊಂದು ಸೌಲಭ್ಯ ಯಾವ ಖಾಸಗಿ ಶಾಲೆಗಳಲ್ಲಿ ಸಿಗುತ್ತದೆ ಹೇಳಿ?
ವಿದ್ಯಾರ್ಥಿಗಳ ಆಸಕ್ತಿ ಗುರುತಿಸಿ ಪ್ರೊತ್ಸಾಹಿಸುವ ಮೂಲಕ ಸಾಂಸ್ಕೃತಿಕ ಸಾಹಿತ್ಯ ಕ್ಷೇತ್ರದಲ್ಲೂ ವಿದ್ಯಾರ್ಥಿಗಳು ಮುಂಚೂಣಿಯಲ್ಲಿ ನಿಲ್ಲುತ್ತಾರೆ. ನಾಟಕ ಅಕಾಡೆಮಿ ನಡೆಸಿದ ನಾಟಕ ಸ್ಪರ್ಧೆಯಲ್ಲಿ ಹಕ್ಲಾಡಿ ಮಕ್ಕಳು ಪ್ರಥಮ ಸ್ಥಾನ ಪಡೆದಿದ್ದಾರೆ. ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರಿಂದ ಪ್ರಸ್ತುತ 210 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, 62 ಮಕ್ಕಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರಯುತ್ತಿದ್ದಾರೆ. ಮೂವರು ಅತಿಥಿ ಶಿಕ್ಷಕರು, ಐವರು ಶಿಕ್ಷಕರಿದ್ದಾರೆ. ಪಾಲಕರು, ಎಸ್ಡಿಎಂಸಿ, ಗ್ರಾಪಂ ಬೆನ್ನಿಗೆ ನಿಂತಿದ್ದರಿಂದ ಸಾಧ್ಯವಾಯಿತು.
-ಮಂಜುನಾಥ ಎಸ್., ಮುಖ್ಯಶಿಕ್ಷಕ
ಶಾಲೆಯ ಅಭಿವೃದ್ಧಿಯ ಹಿಂದೆ ಶಿಕ್ಷಕ ವೃಂದದ ಶ್ರಮವಿದೆ. ಪಾಲಕರು, ಹಳೇ ವಿದ್ಯಾರ್ಥಿಗಳು, ದಾನಿಗಳ ಸಹಕಾರ ಪ್ರಮುಖ. ಸರ್ಕಾರದ ಪಾಲೂ ಇದೆ. ಶಿಕ್ಷಕ ವೃಂದ, ಗಾಪಂ, ಎಸ್ಡಿಎಂಸಿ, ಹಳೇ ವಿದ್ಯಾರ್ಥಿಗಳು, ಪಾಲಕರ ಒಟ್ಟಾದರೆ ಶಾಲೆಯ ಅಭಿವೃದ್ಧಿ ಕಷ್ಟವಲ್ಲ ಎನ್ನುವದು ಹಕ್ಲಾಡಿ ಶಾಲೆ ತೋರಿಸಿಕೊಟ್ಟಿದ್ದು, ಇನ್ನು ಒಂದಿಷ್ಟು ಅಭಿವೃದ್ಧಿ ಸವಾಲಿದೆ.
-ಸುಭಾಶ್ ಶೆಟ್ಟಿ ಹೊಳ್ಮಗೆ, ಸದಸ್ಯ ಎಸ್ಡಿಎಂಸಿ