ಜಿಲ್ಲೆ

ಜ.10ರೊಳಗೆ ಎಲ್ಲ ಒತ್ತುವರಿ ತೆರವು

ಎನ್.ವೆಂಕಟೇಶ್

ಪೌರಾಯುಕ್ತ ಚಲಪತಿ ಹೇಳಿಕೆ ವಿರೋಧ ವ್ಯಕ್ತವಾದರೆ ಕಾನೂನು ಕ್ರಮದ ಎಚ್ಚರಿಕೆ

ಚಿಂತಾಮಣಿ: ಹೊಸವರ್ಷದ ಜನವರಿ 10ರೊಳಗೆ ನಗರದ ಎಲ್ಲ ಮುಖ್ಯರಸ್ತೆಗಳಲ್ಲಿ ರಸ್ತೆ, ಚರಂಡಿ ಮತ್ತು ಪುಟ್‌ಪಾತ್ ಒತ್ತುವರಿಯನ್ನು ತೆರವುಗೊಳಿಸಲಾಗುವುದು ಎಂದು ನಗರಸಭೆ ಪೌರಾಯುಕ್ತ ಜಿ.ಎನ್. ಚಲಪತಿ ತಿಳಿಸಿದರು.

ನಗರದಲ್ಲಿ ಎರಡು ದಿನಗಳಿಂದ ಕೈಗೊಂಡಿರುವ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಬುಧವಾರ ಸುದ್ದಿಗಾರರ ಜತೆ ಮಾತನಾಡಿ, ನಗರದ ಪಿಸಿಆರ್ ವೃತ್ತದಿಂದ ಕನ್ನಂಪಲ್ಲಿ ಆಂಜನೇಯಸ್ವಾಮಿ ದೇವಾಲಯದವರೆಗೂ ಜೋಡಿ ರಸ್ತೆಯ ಎರಡು ಬದಿ ರಸ್ತೆ, ಚರಂಡಿ ಮತ್ತು ಪುಟ್‌ಪಾತ್ ಒತ್ತುವರಿ ತೆರವುಗೊಳಿಸಲಾಗಿದೆ. ಬಹುತೇಕ ಅಂಗಡಿ ವ್ಯಾಪಾರಿಗಳು ನಗರಸಭೆ ಮನವಿಗೆ ಸ್ಪಂದಿಸಿ ಒತ್ತುವರಿ ತೆರವು ಮಾಡಿದ್ದಾರೆ. ಇದಕ್ಕಾಗಿ ಅವರಿಗೆ ಧನ್ಯವಾದಗಳು ಎಂದರು.

ನಗರ ಪಾಲಿಟೆಕ್ನಿಕ್ ರಸ್ತೆಯಲ್ಲಿ ಈಗಾಗಲೇ ಒತ್ತುವರಿ ಮಾಡಿಕೊಂಡಿದ್ದ ಅಂಗಡಿ ಮಾಲೀಕರು ಸ್ವಯಂಪ್ರೇರಿತರಾಗಿ ತೆರವು ಮಾಡಿದ್ದಾರೆ. ಇನ್ನು

ಗಜಾನನ ವೃತ್ತ, ಬಾಗೇಪಲ್ಲಿ ವೃತ್ತ, ಕೋಲಾರ ವೃತ್ತ ಸೇರಿ ಚೇಳೂರು ರಸ್ತೆ, ಕೋಲಾರ ರಸ್ತೆ, ಎಂ.ಜಿ. ರಸ್ತೆ ಇತರ ಮುಖ್ಯರಸ್ತೆಗಳಲ್ಲಿ ರಸ್ತೆ, ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡಿದ್ದು, ಅಂಗಡಿ ಮಾಲೀಕರು ಸ್ವಯಂಪ್ರೇರಿತರಾಗಿ ತೆರವು ಮಾಡುವಂತೆ ಕೋರಿದರು. ಒಂದುವೇಳೆ ತೆರವು ಮಾಡದಿದ್ದಲ್ಲಿ ನಗರಸಭೆಯಿಂದ ಕಾರ್ಯಾಚರಣೆ ನಡೆಸಲಾಗುವುದು. ಒತ್ತುವರಿ ತೆರವಿಗೆ ವಿರೋಧ ವ್ಯಕ್ತಪಡಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

ನಗರದಲ್ಲಿ ಅಪಘಾತಗಳು ಸಂಭವಿಸಿದಂತೆ ಹಾಗೂ ನಗರದಲ್ಲಿ ಸುಗಮ ಸಂಚಾರಕ್ಕೆ ಅನುವ ಮಾಡಿಕೊಡುವ ನಿಟ್ಟಿನಲ್ಲಿ ಜನವರಿ 10ರೊಳಗೆ ಸಂಪೂರ್ಣ ರಸ್ತೆ ಮತ್ತು ಫುಟ್‌ಪಾತ್ ಒತ್ತುವರಿ ತೆರವು ಮಾಡಲಾಗುವುದು ಎಂದು ಚಲಪತಿ ತಿಳಿಸಿದರು.

ಒತ್ತುವರಿ ತೆರವು ತ್ಯಾಜ್ಯ ವಿಲೇವಾರಿ

ಚಿಂತಾಮಣಿ ನಗರದ ಬೆಂಗಳೂರು ಜೋಡಿ ರಸ್ತೆಯಲ್ಲಿ ರಸ್ತೆ ಮತ್ತು ಪುಟ್‌ಪಾತ್ ಅತಿಕ್ರಮಣ ತೆರವು ಮಾಡಿಸಿದ ನಗರಸಭೆ ಅಧಿಕಾರಿಗಳು, ತೆರವು ಜಾಗದಲ್ಲಿದ್ದ ಕಸ ಕಡ್ಡಿ, ಕಲ್ಲು ಮಣ್ಣು, ಸಿಮೆಂಟ್ ತ್ಯಾಜ್ಯಗಳನ್ನು ವಿಲೇವಾರಿ ಮಾಡಿದರು. ಕಳೆದರಡು ದಿನಗಳಿಂದ ತೆರವು ಕಾರ್ಯಾಚರಣೆ ನಡೆದು, ಕಸ ಕಡ್ಡಿ, ಕಲ್ಲು ಮಣ್ಣು, ಸೀಮೆಂಟ್‌ಚೂರುಗಳು ರಾಶಿ ಬಿದ್ದಿತ್ತು. ಕೆಲವೆಡೆ ಕಲ್ಲು ಮತ್ತು ಮಣ್ಣನ್ನು ಅಕ್ರಮವಾಗಿ ತೆಗೆದಿದ್ದ ನೀರಿನ ತೊಟ್ಟಿಗಳಿಗೆ ತುಂಬಿಸಿ ಮುಚ್ಚಲಾಯಿತು. ನಗರದ ಪಿಸಿಆರ್ ವೃತ್ತದಿಂದ ಕನ್ನಂಪಲ್ಲಿಯವರೆಗೂ ರಸ್ತೆಯ ಎಡಬದಿಯಲ್ಲಿ ಬಿದ್ದಿದ್ದ ಕಲ್ಲು, ಕಸ, ಮಣ್ಣನ್ನು ವಿಲೇವಾರಿ ಮಾಡಲಾಯಿತು. ನಗರಸಭೆ ಪೌರಾಯುಕ್ತ ಜಿ.ಎನ್.ಚಲಪತಿ ಮಾತನಾಡಿ, ನಗರದಲ್ಲಿ ಒತ್ತುವರಿ ಮಾಡಿದ ಬಹುತೇಕ ಕಡೆ ಬಿದ್ದಿರುವ ಡಬರೀಸನ್ನು ನಗರಸಭೆ ವತಿಯಿಂದಲೇ ಯಾರಿಗೂ ತೊಂದರೆ ಯಾಗದಂತೆ ವಿಲೇವಾರಿ ಮಾಡಲಾಗಿದೆ ಎಂದರು.