ಜಿಲ್ಲೆ

ಎಲ್ಲ ಇಲಾಖೆಗಳ ಕೆಲಸಗಳಿಗೆ ಕಮಿಷನ್

ಎನ್.ವೆಂಕಟೇಶ್

ರಾಜ್ಯ ಸರ್ಕಾರದ ವಿರುದ್ಧ ಸಂಸದ ಸುಧಾಕರ್ ಆಕ್ರೋಶ ಗುತ್ತಿಗೆದಾರರ ಸ್ಥಿತಿ ಹೇಳತೀರದು

ಬಾಗೇಪಲ್ಲಿ: ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಿಗಳ ವರ್ಗಾವಣೆ, ಪ್ರಮೋಷನ್, ಕಾಮಗಾರಿ ಅನುಮೋದನೆ, ಕಾಮಗಾರಿ ಬಿಲ್ ಮಂಜೂರು ಸೇರಿ ಎಲ್ಲ ಇಲಾಖೆಯ ಕೆಲಸಗಳಿಗೆ ಕಮಿಷನ್ ಪಡೆದು ಕೆಲಸ ಮಾಡಿಕೊಡುವ ಅಕ್ರಮ ಪ್ರವೃತ್ತಿ ಬೆಳೆಸಿಕೊಂಡಿದೆ ಎಂದು ಸಂಸದ ಡಾ. ಕೆ. ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಹೊಸಹುಡ್ಯ ಗ್ರಾಮದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಮಂಗಳವಾರ ಭಾಗವಹಿಸಿದ್ದ ಅವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಗಳ ವರ್ಗಾವಣೆಯಿಂದ ಹಿಡಿದು ಪ್ರಮೋಷನ್‌ವರೆಗೂ ಪರ್ಸಂಟೇಜ್ ನಿಗದಿ ಮಾಡಿ ಅಧಿಕಾರಿಗಳಿಂದ ಕಮಿಷನ್ ಪಡೆಯುತ್ತಿದೆ. ಇನ್ನು ರಾಜ್ಯದ ಗುತ್ತಿಗೆದಾರರ ಪರಿಸ್ಥಿತಿ ಹೇಳತೀರದಾಗಿದೆ. ಕಾಮಗಾರಿ ಅನುಮೋದನೆ ಸಮಯದಲ್ಲಿ ಹಣ ನೀಡಬೇಕು, ಕಾಮಗಾರಿ ಪೂರ್ಣಗೊಳಿಸಿ ಬಿಲ್ ಮಾಡಿಕೊಡುವಾಗಲೂ ಹಣ ಕೊಡಬೇಕು, 5ರಿಂದ 10 ಪರ್ಸೆಂಟ್ ಲಾಭಕ್ಕೆ ಕೆಲಸ ಮಾಡುವ ಗುತ್ತಿಗೆದಾರನಿಂದ ಆರ್ಧದಷ್ಟು ಹಣವನ್ನು ಕಾಂಗ್ರೆಸ್ ಪಕ್ಷದ ಸಚಿವರು, ಸರ್ಕಾರಿ ಅಧಿಕಾರಿಗಳೇ ವಸೂಲಿ ಮಾಡಿಕೊಂಡರೆ ಸಾಲ ಮಾಡಿ ಬಂಡವಾಳ ಹಾಕಿರುವ ಗುತ್ತಿಗೆದಾರನ ಪರಿಸ್ಥಿತಿ ಏನಾಗಬೇಕಾಗಿದೆ ಎಂದು ಮುಖ್ಯಮಂತ್ರಿಗಳು ಯೋಚಿಸಬೇಕಿದೆ. ರಾಜ್ಯದಲ್ಲಿ ನಡೆಯುತ್ತಿರುವ ದುರಾಡಳಿತ, ಭ್ರಷ್ಟಾಚಾರದ ಬಗ್ಗೆ ಮುಖ್ಯಮಂತ್ರಿಗಳು ಗಮನಹರಿಸಿ ಸರಿಪಡಿಸುವ ಕೆಲಸ ಮಾಡಬೇಕಾಗಿದೆ ಎಂದು ಆಗ್ರಹಿಸಿದರು.

ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಕೋನಪರೆಡ್ಡಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹರಿನಾಥರೆಡ್ಡಿ, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ವೆಂಕಟಶಿವಾರೆಡ್ಡಿ, ಯಂಡ್ರಕಾಯಲಪಲ್ಲಿ ಬಾಬುರೆಡ್ಡಿ, ಜೆ.ಪಿ.ರೆಡ್ಡಿ, ತಾಪಂ ಮಾಜಿ ಸದಸ್ಯ ಗೋಪಾಲಕೃಷ್ಣ, ಬ್ಲ್ಯಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶ್ರೀನಿವಾಸರೆಡ್ಡಿ, ಎಪಿಎಂಸಿ ಮಾಜಿ ಅಧ್ಯಕ್ಷ ಸೋಮಶೇಖರರೆಡ್ಡಿ, ಗ್ರಾಪಂ ಸದಸ್ಯರಾದ ಮಲ್ಲಿಕಾರ್ಜುನ, ಜಗನ್ನಾಥ, ಮುಖಂಡರಾದ ಚಿನ್ನ ಪೂಜಪ್ಪ, ಗಣೇಶ್ ರೆಡ್ಡಿ, ಸುನೀಲ್ ರೆಡ್ಡಿ ಮತ್ತಿತರರು ಇದ್ದರು.

ಪರಮಾಧಿಕಾರ ಧೋರಣೆ ಸಲ್ಲ

ಬಾಗೇಪಲ್ಲಿ ತಾಲೂಕಿನ ಕೊಂಡರೆಡ್ಡಿಪಲ್ಲಿ ಮತ್ತು ಹೊಸಹುಡ್ಯ ಗ್ರಾಮದ 25 ಕುಟುಂಬಗಳಿಗೆ ಸೇರಿರುವ 65 ಎಕರೆ ಕೃಷಿ ಜಮೀನನ್ನು ಮಾಲೀಕರ ಒಪ್ಪಿಗೆ ಪಡೆಯದೆ, ಪರಿಹಾರ ಹಣ ನೀಡದೆ ಪರಮಾಧಿಕಾರ ಧೋರಣೆ ಅನುಸರಿಸಿ ಕೆಐಎಡಿಬಿ ಹೆಸರಿಗೆ ವರ್ಗಾವಣೆ ಮಾಡಿಕೊಂಡಿದ್ದು, ರೈತರ ಜಮೀನನ್ನು ರೈತರ ಹೆಸರಿಗೆ ವಾಪಸ್ ವರ್ಗಾವಣೆ ಮಾಡುವಂತೆ ಚಿಕ್ಕಬಳ್ಳಾಪುರ ಉಪವಿಭಾಗೀಯ ಅಧಿಕಾರಿ ಹಾಗೂ ಬಾಗೇಪಲ್ಲಿಯ ತಹಸೀಲ್ದಾರ್‌ಗೆ ಈಗಾಗಲೇ ಸೂಚಿಸಿದ್ದು, ಒಂದು ವಾರದೊಳಗೆ ರೈತರ ಹೆಸರಿಗೆ ಪಹಣಿ ವರ್ಗಾವಣೆ ಮಾಡಿಕೊಡುವುದಾಗಿ ತಿಳಿಸಿದ್ದಾರೆ. ಅಧಿಕಾರಿಗಳು ಮಾಡಿರುವ ತಪ್ಪು ಸರಿಪಡಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಅದರ ಪರಿಣಾಮವನ್ನು ಅವರೇ ಅನುಭವಿಸಲಿದ್ದಾರೆ ಎಂದು ರೈತರಿಗೆ ಡಾ. ಕೆ. ಸುಧಾಕರ್ ಭರವಸೆ ನೀಡಿದರು.

ನರೇಗಾಗೆ ಅಡ್ಡಿ ಬೇಡ

ಬಾಗೇಪಲ್ಲಿ ತಾಲೂಕು ಪಂಚಾಯಿತಿ ಇಒ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸ್ಥಳೀಯ ಶಾಸಕರ ಆದೇಶದಂತೆ ಜೂಲಪಾಳ್ಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದಿರುವ ನರೇಗಾ ಕಾಮಗಾರಿಗಳ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಗ್ರಾಮ ಪಂಚಾಯತಿ ಸದಸ್ಯ ಜಗನ್ನಾಥ್ ಎಂಬುವರು ಸಂಸದರಿಗೆ ದೂರು ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, ಭಾರತ ಸರ್ಕಾರದ ನರೇಗಾ ಯೋಜನೆಯಲ್ಲಿ ಕೆಲಸ ಮಾಡಿರುವವರ ಹಣ ತಡೆಯಲು ತಾಲೂಕು ಪಂಚಾಯತಿ ಇಒಗೆ ಏನು ಅಧಿಕಾರ ಇದೆ? ಅಧಿಕಾರಿಗಳು ಅವರ ತಾತನ ಮನೆಯಿಂದ ಹಣ ಕೊಡುತ್ತಿಲ್ಲ ಎಂದು ಎಚ್ಚರಿಕೆ ನೀಡಿದರು.