ರೋಣ: ಪಟ್ಟಣದ ನಾಗರಿಕರು ಹಾಗೂ ತಾಲೂಕಿನ ವಿವಿಧ ಗ್ರಾಮಗಳ ಜನತೆಗೆ ಆಸರೆಯಾಗಬೇಕಿದ್ದ ಪಟ್ಟಣದ ಆಧಾರ್ ಕೇಂದ್ರಗಳು ಐದು ತಿಂಗಳಿಂದ ಬಂದ್ ಆಗಿವೆ. ಜನರು ಆಧಾರ್ ಕಾರ್ಡ್ ತಿದ್ದುಪಡಿಗಾಗಿ ಅಲೆದಾಡಬೇಕಾಗಿದೆ.
ಪಟ್ಟಣದಲ್ಲಿ ಖಾಸಗಿಯವರದ್ದೂ ಸೇರಿ ಒಟ್ಟು ನಾಲ್ಕು ಆಧಾರ್ ಕೇಂದ್ರಗಳಿವೆ. ಅವುಗಳಲ್ಲಿ ಎಸ್‌ಬಿಐನಲ್ಲಿರುವ ಆಧಾರ್ ಕೇಂದ್ರ ಮಾತ್ರ ಇತ್ತೀಚಿನ ವರೆಗೂ ಕಾರ್ಯನಿರ್ವಹಿಸುತ್ತಿತ್ತು. ನಾಲ್ಕು ದಿನಗಳಿಂದ ಅದೂ ಬಂದ್ ಆಗಿದೆ. ಇನ್ನು ಪುರಸಭೆ ಆವರಣ, ಬಿಎಸ್‌ಎನ್‌ಎಲ್ ಕಚೇರಿ, ಅಂಚೆ ಕಚೇರಿಯ ಆಧಾರ್ ಕೇಂದ್ರ ಬಂದ್ ಆಗಿ ಹಲವು ತಿಂಗಳೇ ಕಳೆದಿವೆ. ಆಧಾರ್ ತಿದ್ದುಪಡಿಗೆಂದು ಬಂದವರು ಅಲ್ಲಿನ ಸಿಬ್ಬಂದಿಯನ್ನು ವಿಚಾರಿಸಿದರೆ ‘ಆಧಾರ್ ಕೇಂದ್ರದ ಸಾಮಗ್ರಿಗಳು ದುರಸ್ತಿಯಲ್ಲಿವೆ’ ಎಂದು ನೆಪ ಹೇಳುತ್ತಿದ್ದಾರೆ.
ಸರ್ಕಾರದ ಬಹುತೇಕ ಯೋಜನೆಗಳ ಸೌಲಭ್ಯ ಪಡೆಯಲು ಆಧಾರ್ ಅವಶ್ಯ. ಶಾಲಾ ಕಾಲೇಜು, ಪಡಿತರ, ಬ್ಯಾಂಕ್ ಸೇರಿ ಇನ್ನಿತರ ಕೆಲಸ ಕಾರ್ಯಗಳಿಗೆ ಆಧಾರ್ ಸಂಖ್ಯೆಯು ಮುಖ್ಯವಾಗಿದೆ. ಆದರೆ ಪಟ್ಟಣದಲ್ಲಿ ನಾಲ್ಕು ಆಧಾರ್ ಕೇಂದ್ರಗಳಿದ್ದರೂ ಯಾವುದೂ ಕಾರ್ಯನಿರ್ವಹಿಸದಿರುವುದು ಜನರಿಗೆ ಪೀಕಲಾಟ ತಂದಿದೆ. ಪುರಸಭೆ ಆವರಣದಲ್ಲಿನ ಕೇಂದ್ರ ಸ್ಥಗಿತಗೊಂಡ ಬಗ್ಗೆ ಆಡಳಿತದ ಕೇಂದ್ರ ಸ್ಥಾನದಲ್ಲಿರುವ ಅಧಿಕಾರಿಗಳು ಕಣ್ತೆರದು ನೋಡುವ ಗೋಜಿಗೆ ಹೋಗಿಲ್ಲ. ಏಕೈಕ ಆಸರೆಯಾಗಿದ್ದ ಎಸ್‌ಬಿಐನ ಕೇಂದ್ರವೂ ಬಂದ್ ಆಗಿ, ಜನರು ಸಮೀಪದ ಗ್ರಾಮಗಳಿಗೆ ತೆರಳಬೇಕಾಗಿದೆ.
ಎಸ್‌ಬಿಐ ಕಚೇರಿಯಲ್ಲಿನ ಆಧಾರ್ ಕೇಂದ್ರ ಶೀಘ್ರದಲ್ಲಿಯೇ ಆರಂಭವಾಗ ಲಿದೆ. ಉಳಿದ ಕೇಂದ್ರಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಅವುಗಳ ಕಾರ್ಯಾರಂಭಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.-ಕೆ. ನಾಗರಾಜ, ತಹಸೀಲ್ದಾರ್