ಜಿಲ್ಲೆ

ಅಲೆಮಾರಿ ಜನಾಂಗದವರಿಗೆ ಮೂಲ ಸೌಲಭ್ಯ ಕಲ್ಪಿಸಲು ಆಗ್ರಹ

ಹರೀಶ ಎಂ.

ಮಂಗಳೂರು: ರಾಜ್ಯದ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗ ವಸತಿ, ನಿವೇಶನ, ಮಕ್ಕಳಿಗೆ ಶಿಕ್ಷಣ ಮೊದಲಾದ ಎಲ್ಲಾ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಸರ್ಕಾರ ಆದ್ಯತೆಯಾಗಿ ಹೆಚ್ಚಿನ ಗಮನ ವಹಿಸಬೇಕು ಎಂದು ಅಲೆಮಾರಿ ನಿಗಮದ ಮಾಜಿ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಒತ್ತಾಯಿಸಿದ್ದಾರೆ.


ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಜನಾಂಗದ ಮಕ್ಕಳು ಶೈಕ್ಷಣಿಕ ವ್ಯವಸ್ಥೆಯಲ್ಲಿ ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲವು ತಾಲೂಕುಗಳಲ್ಲಿ ತಹಶೀಲ್ದಾರರು ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ. ಮೊರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲರು ಅಲೆಮಾರಿ ಜನಾಂಗ ಎಂದು ಜಾತಿ ಪ್ರಮಾಣ ಪತ್ರ ತರುವಂತೆ ತರಬೇಕು ಎಂದು ದಾಖಲಾತಿ ನಿರಾಕರಣೆ ಮಾಡುತ್ತಿದ್ದಾರೆ. ಇದರಿಂದ ಅವರ ಶೈಕ್ಷಣಿಕ ಜೀವನ ಅಡಕತ್ತರಿಯಲ್ಲಿ ಸಿಕ್ಕಿದಂತಾಗಿದೆ. ಸರ್ಕಾರ ಅವರಿಗೆ ನ್ಯಾಯ ದೊರಕಿಸುವ ಕೆಲಸ ಮಾಡಬೇಕಾಗಿದೆ ಎಂದವರು ಹೇಳಿದರು.


ಮೊರಾರ್ಜಿ ದೇಸಾಯಿ ಸೇರಿದಂತೆ ಎಲ್ಲಾ ವಸತಿ ಶಾಲೆಗಳಲ್ಲಿ ನಮ್ಮ ಅಲೆಮಾರಿ ವಿದ್ಯಾರ್ಥಿಗಳಿಗೆ ನೇರ ದಾಖಲಾತಿಗೆ ಅವಕಾಶ ನೀಡಬೇಕು. ಇತರ ಜನಾಂಗದ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡಿ, ಅಲೆಮಾರಿ ಜನಾಂಗದವರ ಶೇ.85ಕ್ಕಿಂತ ಅಧಿಕ ಅಂಕ ಪಡೆದರೂ ಪ್ರವೇಶಾತಿ ನಿರಾಕರಣೆ ಮಾಡಿರುವುದು ಗಮನಕ್ಕೆ ಬಂದಿದೆ. ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ಎಚ್ಚೆತ್ತು ಈ ಅನ್ಯಾಯವನ್ನು ಸರಿಪಡಿಸಬೇಕು.
ಕೆಲವು ಕಡೆ 10 ವರ್ಷಕ್ಕಿಂತ ಹೆಚ್ಚಿನ ಕಾಲ ಡೇರೆ, ಗುಡಿಸಲು, ಟೆಂಟ್ ಹಾಕಿ ಜೀವನ ನಡೆಸುತ್ತಿರುವವರಿಗೆ ಆ ಜಾಗವನ್ನು ಅವರ ಹೆಸರಿನಲ್ಲಿಯೇ ಪಹಣಿ ಪತ್ರ ನೀಡಬೇಕು. ಪ್ರತಿ ಜಿಲ್ಲೆ, ತಾಲೂಕಿಗೆ ಸಂಬಂಧಿಸಿ ಅಲೆಮಾರಿ ಸಮುದಾಯ ಭವನ ನಿರ್ಮಿಸಬೇಕು. ಅಲೆಮಾರಿ ರುದ್ರಭೂಮಿ ಮಾಡಬೇಕು. ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ನೀಡುವ ಮೂಲಕ ನೇರ ಸಾಲ, ಗಂಗಾ ಕಲ್ಯಾಣ, ಭೂ ಖರೀದಿ ಯೋಜನೆ, ಸ್ವಸಹಾಯ ಗುಂಪುಗಳಿಗೆ ಆರ್ಥಿಕ ನೆರವು, ಉನ್ನತ ವ್ಯಾಸಾಂಗಕ್ಕೆ ಶೈಕ್ಷಣಿಕ ಸಾಲ ಯೋಜನೆ, ಸ್ವ ಉದ್ಯೋಗ, ಉದ್ಯಮಶೀಲತಾ ತರಬೇತಿ ಮೊದಲಾದವುಗಳಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದವರು ಆಗ್ರಹಿಸಿದರು.


ರಾಜ್ಯ ಹಿಂದುಳಿದ ವರ್ಗಗಳ ಅಲೆಮಾರಿ/ಅರೆ ಅಲೆಮಾರಿ ಜನಾಂಗಗಳ ಒಕ್ಕೂಟದ ರಾಜ್ಯಾಧ್ಯಕ್ಷ ಪ್ರಕಾಶ್ ಎಂ. ಬೆಂಗಳೂರು, ಕಾರ್ಯದರ್ಶಿ ಬಸವರಾಜ್ ಚಿತ್ರದುರ್ಗ, ಜಿಲ್ಲಾ ಸಮಿತಿ ಕೇಶವನಾಥ ಉಪಸ್ಥಿತರಿದ್ದರು.