ಬಬಲೇಶ್ವರ ಪಟ್ಟಣಕ್ಕೆ ಭೇಟಿ ನೀಡಿದ ಲೋಕಾಯುಕ್ತ ಪಿಎಸೈ ಆನಂದ ಠಕ್ಕಣ್ಣವರ ಮುಂದೆ ಸಮಸ್ಯೆ ತೋಡಿಕೊಳ್ಳುತ್ತಿರುವ ಕೊಂಚಿಕೊರವರ ಸಮುದಾಯ. 
ಜಿಲ್ಲೆ

ನಮಗೂ ಸೌಲಭ್ಯ ಕೊಡಿಸಿ!

ಪರಶುರಾಮ ಭಾಸಗಿ
ವಿಜಯಪುರ: ನಾಗರಿಕ ಸ್ಥಾನಮಾನ ಹಾಗೂ ಸರ್ಕಾರಿ ಸೌಲಭ್ಯಗಳಿಂದ 25 ವರ್ಷಗಳಿಂದ ವಂಚಿತವಾದ ಅಲೆಮಾರಿ ಸಮುದಾಯವೊಂದು ಇದೀಗ ಸರ್ಕಾರದ ಸೌಲಭ್ಯಗಳಿಗಾಗಿ ಲೋಕಾಯುಕ್ತರ ಮೊರೆ ಹೋಗಿದೆ.

ಒಂಬತ್ತು ಕುಟುಂಬಗಳು
ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಂದ ಕೊಂಚಿಕೊರವರ ಸಮುದಾಯದವರು 25 ವರ್ಷಗಳಿಂದ ಬಬಲೇಶ್ವರದಲ್ಲಿ ನೆಲೆಯೂರಿದ್ದಾರೆ. ಸತ್ಯವ್ವ ಕೊಂಚಿಕೊರವರ ಹಾಗೂ ಇವರ ಮಕ್ಕಳಾದ ದುರ್ಗಪ್ಪ, ವಿಠ್ಠಲ, ನಾಗಪ್ಪ, ಮಾಕೋಟಿ, ಸಿದ್ದಪ್ಪ ಹಾಗೂ ಇವರ ಕುಟುಂಬ ಸದಸ್ಯರು, ಗಂಗವ್ವ ಕೊಂಚಿಕೊರವರ, ಹಣಮವ್ವ ಕೊಂಚಿಕೊರವರ, ಹಣಮಪ್ಪ ಕೊಂಚಿಕೊರವರ, ರತ್ನವ್ವ ಕೊಂಚಿಕೊರವರ, ರಮೇಶ ಕೊಂಚಿಕೊರವರ ಹೀಗೆ ಒಟ್ಟು 9 ಕುಟುಂಬಗಳ 34 ಸದಸ್ಯರು ವಾಸವಾಗಿದ್ದಾರೆ. ಸ್ವಂತ ಸೂರು ಇಲ್ಲದೆ ತಗಡಿನ ಶೆಡ್‌ನಲ್ಲಿ ಬದುಕು ಸಾಗಿಸುತ್ತಿದ್ದಾರೆ. ಮಳೆ, ಗಾಳಿ, ಬಿಸಿಲು ಲೆಕ್ಕಿಸದೇ ನಾಗರಿಕ ಸಮಾಜದ ಅತ್ಯಂತ ಕೆಳಮಟ್ಟದ ಜೀವನ ಸಾಗಿಸುವಂತಾಗಿದೆ. ಹೀಗಾಗಿ ಸೂಕ್ತ ಸೌಲಭ್ಯ ಕಲ್ಪಿಸಲು ಹಕ್ಕೊತ್ತಾಯ ಮಂಡಿಸಿದ್ದಾರೆ.

ಉದ್ಯೋಗಕ್ಕಾಗಿ ಅಲೆದಾಟ
ಕೂದಲು ತುಂಬುವುದು, ಖಾಲಿ ಬಾಟಲಿಗಳನ್ನು ಆರಿಸುವುದು, ಈಚಲ ಕಸಬರಿಗೆ ಮಾಡುವುದು ಹಾಗೂ ಇವುಗಳನ್ನು ಮಾರಾಟ ಮಾಡುವ ಕೆಲಸ ಮಾಡಿಕೊಂಡಿದ್ದು, ಅಲ್ಪ ಸಂಪಾದನೆಯಲ್ಲೇ ಜೀವನ ಸಾಗಿಸುತ್ತಿದ್ದಾರೆ. ಬೆಳಗೆದ್ದು ಊರೂರು ಅಲೆದು ಸಂಜೆ ಗೂಡು ಸೇರಿಕೊಳ್ಳುವ ಹಿರಿಯರು ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತಿತರಾಗಿದ್ದಾರೆ. ಮಹಿಳೆಯರು, ಮಕ್ಕಳು ಹಾಗೂ ಪುರುಷರು ಪ್ರತಿ ದಿನ ಕೂದಲು ಆಯುವುದನ್ನೇ ಮುಖ್ಯ ಕಾಯಕ ಮಾಡಿಕೊಂಡಿದ್ದು ಸರ್ಕಾರದ ಸೌಲಭ್ಯಗಳ ಪರಿವಿಲ್ಲದಾಗಿದೆ.

ಏನಿದೆ, ಏನಿಲ್ಲ?
ಗುರುತಿನ ಚೀಟಿಗಳಾದ ಮತದಾರರ ಚೀಟಿ ಹಾಗೂ ಆಧಾರ್ ಕಾರ್ಡ್ ಬಿಟ್ಟರೆ ಬೇರೆ ಯಾವ ದಾಖಲೆಗಳೂ ಇವರ ಬಳಿ ಇಲ್ಲ. ಜಾತಿ ಪ್ರಮಾಣ ಪತ್ರ, ರೇಷನ್ ಕಾರ್ಡ್, ಆಯುಷ್ಮಾನ್ ಕಾರ್ಡ್, ವಿಧವಾ ವೇತನ, ಅಂಗವಿಕಲ ವೇತನ, ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ವೇತನ, ಗುಡಿಸಲು ಮುಕ್ತ ಯೋಜನೆಯಡಿ ಯಾವುದೇ ಸೌಲಭ್ಯಗಳು ಇವರಿಗೆ ದೊರೆಯುತ್ತಿಲ್ಲ.

ಜಾತಿ ಪ್ರಮಾಣ ಪತ್ರ ಇಲ್ಲದ ಕಾರಣ ಮಕ್ಕಳನ್ನು ಶಾಲೆಗೆ ಸೇರಿಸಲು ಸಮಸ್ಯೆಯಾಗುತ್ತಿದೆ. ರೇಷನ್ ಕಾರ್ಡ್ ಇಲ್ಲ. ಸೂಕ್ತ ದಾಖಲಾತಿ ಇಲ್ಲದ ಕಾರಣ ಸರ್ಕಾರದ ಯೋಜನೆಗಳ ಲಾಭ ದೊರೆಯುತ್ತಿಲ್ಲ. ಹೀಗಾಗಿ ಕುಟುಂಬ ನಿರ್ವಹಣೆಗೆ ತೊಂದರೆಯಾಗುತ್ತಿದೆ.
ವಿಠಲ ಕೊಂಚಿಕೊರವರ, ಬಬಲೇಶ್ವರ

ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಆ ಸಮುದಾಯದ ಮಾಹಿತಿ ಪಡೆಯಲಾಗಿದೆ. ಸಮಗ್ರ ವರದಿ ತಯಾರಿಸಿ ಲೋಕಾಯುಕ್ತ ನ್ಯಾಯಮೂರ್ತಿಗಳ ಗಮನಕ್ಕೂ ತರಲಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಈವರೆಗೆ ಏಕೆ ಕ್ರಮ ಕೈಗೊಂಡಿಲ್ಲ ಎಂದು ವಿಚಾರಿಸಲಾಗುತ್ತಿದೆ. ಆದಷ್ಟು ಬೇಗ ಆ ಸಮುದಾಯಕ್ಕೆ ನ್ಯಾಯ ಒದಗಿಸಲಾಗುವುದು.
ಆನಂದ ಠಕ್ಕಣ್ಣವರ, ಲೋಕಾಯುಕ್ತ ಪಿಎಸೈ