ಮಂಡ್ಯ: ನಿಯಮಗಳ ಹೆಸರಿನಲ್ಲಿ ಪರಿಸರ ಮಾಲಿನ್ಯ ಇಲಾಖೆ ಅಧಿಕಾರಿಗಳು ನೀಡುತ್ತಿರುವ ತೊಂದರೆಯಿಂದಾಗಿ ಆಲೆಮನೆಗಳನ್ನು ಬಾಗಿಲು ಮುಚ್ಚಲಾಗುತ್ತಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಅದರಂತೆ ಈ ವಿಷಯದ ಬಗ್ಗೆ ಶಾಸಕ ರವಿಕುಮಾರ್ ಗಣಿಗ ಶುಕ್ರವಾರ ಅಧಿವೇಶನದಲ್ಲಿ ಮಹತ್ವದ ಚರ್ಚೆ ನಡೆಸಿದ್ದಾರೆ.
ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಸರ್ಕಾರದ ಗಮನಸೆಳೆದ ಶಾಸಕ ರವಿಕುಮಾರ್ ಗಣಿಗ, ಮಂಡ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವ ಆಲೆಮನೆ ಮಾಲೀಕರಿಗೆ ಪರಿಸರ ಮಾಲಿನ್ಯ ಇಲಾಖೆ ಅಧಿಕಾರಿಗಳು ಅನಗತ್ಯವಾಗೊ ತೊಂದರೆ ನೀಡುತ್ತಿದ್ದಾರೆ. ಪರಿಣಾಮ ಮಾಲೀಕರು ಸಂಕಷ್ಟ ಎದುರಿಸುವಂತಾಗಿದೆ. ಜಿಲ್ಲೆಯಲ್ಲಿ ಸಾವಿರಾರು ಕುಟುಂಬಗಳು ಈ ಆಲೆಮನೆಯ ಉದ್ಯೋಗವನ್ನು ನಂಬಿ ಜೀವನ ನಡೆಸುತ್ತಿವೆ. ಜಿಲ್ಲೆಯಲ್ಲಿ ಒಟ್ಟು 1,050 ಆಲೆಮನೆಗಳು ಇದ್ದು, ಮಂಡ್ಯ ತಾಲೂಕಿನಲ್ಲೇ ಸುಮಾರು 600 ಆಲೆಮನೆಗಳಲ್ಲಿ ಬೆಲ್ಲದ ಉತ್ಪಾದನೆ ನಡೆಯುತ್ತಿದೆ. ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ರೈತರು ಆಲೆಮನೆಗಳನ್ನು ಅವಲಂಬಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ಜಿಲ್ಲೆಯಲ್ಲಿ ಕೇವಲ 614 ಆಲೆಮನೆಗಳು ಅಂದರೆ ಮಂಡ್ಯ ತಾಲೂಕಿನಲ್ಲಿ 380, ಮದ್ದೂರಿನಲ್ಲಿ 20, ಮಳವಳ್ಳಿಯಲ್ಲಿ 05, ಶ್ರೀರಂಗಪಟ್ಟಣದಲ್ಲಿ 66, ಪಾಂಡವಪುರದಲ್ಲಿ 113 ಮತ್ತು ಕೆ.ಆರ್.ಪೇಟೆ ತಾಲೂಕಿನಲ್ಲಿ 30 ಆಲೆಮನೆಗಳು ಇವೆ ಎಂದು ಸರ್ಕಾರಕ್ಕೆ ತಪ್ಪು ಉತ್ತರ ನೀಡಲಾಗಿದೆ ಎಂದು ಆರೋಪಿಸಿದರು.
ಅದರಲ್ಲಿಯೂ ಅತಿ ಹೆಚ್ಚು ಆಲೆಮನೆಗಳು ಮಂಡ್ಯ ತಾಲೂಕಿನಲ್ಲಿ ಇದ್ದು, ಗ್ರಾಮದ ಮಧ್ಯ ಭಾಗದಲ್ಲಿ ಕಾರ್ಯಾರಂಭ ಮಾಡುತ್ತಿವೆ. ಇದಲ್ಲದೆ ಅದೆಷ್ಟೋ ಆಲೆಮನೆಗಳು ಮನೆಗಳಲ್ಲಿಯೇ ನಡೆಯುತ್ತಿವೆ. ಇಂತಹ ಆಲೆಮನೆಗಳಿಗೆ ಭೂ ಪರಿವರ್ತನೆ ಆಗಬೇಕು. ಅದಕ್ಕೆ ಪರಿಸರ ಮಾಲಿನ್ಯ ಇಲಾಖೆ ಎನ್‌ಒಸಿ ಪತ್ರ ಪಡೆಯಬೇಕು ಎಂಬುದು ಸೇರಿದಂತೆ ಹಲವು ನಿಯಮಗಳನ್ನು ಮುಂದಿಟ್ಟುಕೊಂಡು ಅನಗತ್ಯವಾಗಿ ಬಾಗಿಲು ಮುಚ್ಚಿಸಲಾಗುತ್ತಿದೆ. ಕೃಷಿ ಹಾಗೂ ಕಬ್ಬು ಬೆಳೆಯನ್ನೇ ಅವಲಂಬಿಸಿರುವ ಜಿಲ್ಲೆಯ ರೈತರಿಗೆ ಅಧಿಕಾರಿಗಳು ನೀಡುತ್ತಿರುವ ತೊಂದರೆಯಿಂದ ಸಂಕಷ್ಟ ಎದುರಾಗಿದೆ. ಗಮನಾರ್ಹ ಅಂಶವೆಂದರೆ ಸಕ್ಕರೆ ಕಾರ್ಖಾನೆಗಳು ಸ್ಥಗಿತಗೊಂಡ ವೇಳೆಯಲ್ಲಿ ಜಿಲ್ಲೆಯ ಕಬ್ಬು ಬೆಳೆಗಾರರನ್ನು ಆಲೆಮನೆಗಳೇ ಕೈ ಹಿಡಿಯುದರ ಜತೆಗೆ ಆರ್ಥಿಕ ಸಹಕಾರ ನೀಡಿದೆ. ಈ ನಿಟ್ಟಿನಲ್ಲಿ ಇಂದಿಗೂ ಆಲೆಮನೆಗಳು ಮಹತ್ವದ ಪಾತ್ರ ವಹಿಸುತ್ತಿವೆ. ಆದ್ದರಿಂದ ಗುಡಿ ಕೈಗಾರಿಕೆ ರೀತಿಯಂತೆ ಆಲೆಮನೆಗಳ ಪುನಶ್ವೇತನಗೊಳಿಸುವ ನಿಟ್ಟಿನಲ್ಲಿ ಪ್ರೋತ್ಸಾಹದ ಕಾರ್ಯಕ್ರಮವನ್ನು ರೂಪಿಸಬೇಕಿದೆ ಎಂದು ಸರ್ಕಾರವನ್ನು ಒತ್ತಾಯಿಸಿದರು.
ಅರಣ್ಯ ಸಚಿವರ ಅಧ್ಯಕ್ಷತೆಯಲ್ಲಿ ಸಭೆ: ಪ್ರಮುಖವಾಗಿ ಅಧಿಕಾರಿಗಳು ನೀಡುತ್ತಿರುವ ತೊಂದರೆಯಿಂದ ಆಲೆಮನೆ ಮಾಲೀಕರಿಗೆ ರಕ್ಷಣೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಕೂಡಲೇ ಸರ್ಕಾರ ಮಧ್ಯ ಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದು ಶಾಸಕ ರವಿಕುಮಾರ್ ಗಣಿಗ ಒತ್ತಾಯಿಸಿದರು. ಇದಕ್ಕೆ ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್.ಪಾಟೀಲ್ ಪ್ರತಿಕ್ರಿಯಿಸಿ, ಕೂಡಲೇ ಅರಣ್ಯ ಸಚಿವರ ನೇತೃತ್ವದಲ್ಲಿ ಸಭೆ ನಡೆಸಿ ಪರಿಸರ ಮಾಲಿನ್ಯ ಇಲಾಖೆ ಅಧಿಕಾರಿಗಳಿಗೆ ಸೂಕ್ತ ಆದೇಶ ಕೊಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.