ವಿಜಯವಾಣಿ ಸುದ್ದಿಜಾಲ ಯಲ್ಲಾಪುರ
ಮಾಗೋಡ ಹಾಲು ಉತ್ಪಾದಕರ ಸಹಕಾರಿ ಸಂಘ, ಅಭ್ಯುದಯ ಯುವಕ ಸಂಘ, ಸಾರ್ವಜನಿಕ ಗಜಾನನೋತ್ಸವ ಸಮಿತಿ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ತಾಲೂಕಿನ ಮಾಗೋಡ ಕಾಲನಿಯಲ್ಲಿ 3ನೇ ವರ್ಷದ ಆಲೆಮನೆ ಹಬ್ಬ ಯಶಸ್ವಿಯಾಗಿ ನಡೆಯಿತು.
ಸಂಘದ ಆವಾರದ ನಂದಗೋಕುಲ ಮಹಾದ್ವಾರದಲ್ಲಿ ರಂಗೋಲಿಗಳನ್ನು ಬಿಡಿಸಿ ಸಿಂಗರಿಸಲಾಗಿತ್ತು. ದೇವರಿಗೆ ಕಬ್ಬಿನ ಹಾಲು ನೈವೇದ್ಯ ಮಾಡುವ ಜೊತೆಗೆ ರಾಷ್ಟ್ರಗೀತೆ ಹಾಗೂ ಭಗವದ್ಗೀತೆ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಯಿತು. ವೇ. ಶಂಕರ ಭಟ್ಟ ನಾಳಶೇರು ರಾಧಾಕೃಷ್ಣರಿಗೆ ಪೂಜೆ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಸ್ಥಳದಲ್ಲೇ ಎರಡು ಗಾಣಗಳ ಮೂಲಕ ಕಬ್ಬಿನ ಹಾಲು ಸಿದ್ಧಪಡಿಸಿ ಕಾಮಧೇನು, ಪುಣ್ಯಕೋಟಿ, ಸುರಭಿ ಹಾಗೂ ನಂದಿನಿ ಎಂಬ 4 ಕೌಂಟರ್ಗಳಲ್ಲಿ ಜನರಿಗೆ ಉಚಿತವಾಗಿ ವಿತರಿಸುವ ವ್ಯವಸ್ಥೆ ಮಾಡಲಾಗಿತ್ತು. ಕಬ್ಬಿನ ಹಾಲಿನ ಜೊತೆಗೆ ಮಿರ್ಚಿ, ಮಂಡಕ್ಕಿ, ಕಾರಾ, ಬಾಳೆಕಾಯಿ ಚಿಪ್ಸ್ ಸೇರಿ 8-9 ಬಗೆಯ ತಿಂಡಿ-ತಿನಿಸುಗಳನ್ನು ನೀಡಲಾಯಿತು. 4 ಸಾವಿರಕ್ಕೂ ಹೆಚ್ಚು ಜನರು ಆಲೆಮನೆ ಹಬ್ಬದಲ್ಲಿ ಕಬ್ಬಿನಹಾಲು ಸವಿದು ಸಂಭ್ರಮಿಸಿದರು.
ಕಬ್ಬಿನಹಾಲಿನ ಸವಿಯ ಜೊತೆಗೆ ಸಮೀಪದ ಗೋವರ್ಧನ ವೇದಿಕೆ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಹಲವರ ಪ್ರತಿಭಾ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಮಾಗೋಡ ಕಾಲನಿಯ ಶಾಲೆ ವಿದ್ಯಾರ್ಥಿಗಳು ಮನರಂಜನಾ ಕಾರ್ಯಕ್ರಮ ಹಾಗೂ ರಾಜಸೂಯ ಯಾಗ ನಾಟಕ ಪ್ರದರ್ಶಿಸಿದರು. ನಂದೊಳ್ಳಿಯ ಪ್ರೌಢಶಾಲಾ ವಿದ್ಯಾರ್ಥಿಗಳು ಕೃಷ್ಣ ಸಂಧಾನ ಹಾಗೂ ಗುಂದ ಶಾಲೆಯ ಮಕ್ಕಳು ವಾಲಿ ಮೋಕ್ಷ ತಾಳಮದ್ದಲೆ ನಡೆಸಿಕೊಟ್ಟರು. ದೀಪಕ ಭಟ್ಟ ಕುಂಕಿ ಯಕ್ಷನೃತ್ಯದ ಮೂಲಕ ರಂಜಿಸಿದರು. ವೆಂಕಟ್ರಮಣ ಹೆಗಡೆ ಕುಂಭತ್ತಿ, ತಿಮ್ಮಣ್ಣ ಗಾಣಗದ್ದೆ, ನಾಗಪ್ಪ ಕೋಮಾರ, ಭಾವನಾ ಹೆಗಡೆ ಹಿಮ್ಮೇಳದಲ್ಲಿ ಸಹಕರಿಸಿದರು. ದತ್ತಾತ್ರೇಯ ಹೆಗಡೆ, ದೇವೇಂದ್ರ ಹೆಗಡೆ ಗಾಯನ ಪ್ರಸ್ತುತಪಡಿಸಿ ರಂಜಿಸಿದರು.
ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ನರಸಿಂಹ ಭಟ್ಟ ಕುಂಕಿಮನೆ, ಉಪಾಧ್ಯಕ್ಷ ವೆಂಕಟ್ರಮಣ ಭಾಗ್ವತ, ನಿರ್ದೇಶಕರಾದ ಚಂದ್ರಶೇಖರ ಕಂಚನಮನೆ, ವೆಂಕಟ್ರಮಣ ಕಿರಕುಂಭತ್ತಿ, ನಾರಾಯಣ ಭಟ್ಟ ದೇವದಮನೆ, ಗಣಪತಿ ಪಟಗಾರ, ಗಣಪತಿ ಹೆಗಡೆ ಹಾದಿಮನೆ, ನರಸಿಂಹ ಭಟ್ಟ ನೇರಲಮನೆ, ಚೇತನಾ ಹೆಗಡೆ, ಗಣೇಶ ಭಂಡಾರಿ, ಮುಖ್ಯ ಕಾರ್ಯನಿರ್ವಾಹಕ ವೇಲು ಮುರಗನ್, ಅಭ್ಯುದಯ ಯುವಕ ಸಂಘದ ಶ್ರೀಧರ ಹೆಗಡೆ, ಬಿ.ಎಸ್. ಗಂಗಾಧರ, ನರಸಿಂಹ ಮೇಲಿನಕುಂಕಿ ಇತರರ ನೇತೃತ್ವದಲ್ಲಿ 60-70ಕ್ಕೂ ಹೆಚ್ಚು ಗ್ರಾಮಸ್ಥರ ಪರಿಶ್ರಮದಿಂದ ಆಲೆಮನೆ ಹಬ್ಬ ಗ್ರಾಮೀಣ ಸೊಗಡಿನ ಹಿರಿಮೆ ಹಾಗೂ ವೈವಿಧ್ಯತೆಯನ್ನು ತೆರೆದಿಡುವಲ್ಲಿ ಯಶಸ್ವಿಯಾಯಿತು.
ವರ್ಷದಿಂದ ವರ್ಷಕ್ಕೆ ಆಲೆಮನೆ ಹಬ್ಬ ಅಭೂತಪೂರ್ವ ಯಶಸ್ಸು ಕಾಣುತ್ತಿದೆ. ಭಾವನಾತ್ಮಕ ಸಂಬಂಧಗಳು ದೂರವಾಗುತ್ತಿರುವ ಸಂದರ್ಭದಲ್ಲಿ ಎಲ್ಲರೂ ಒಂದೆಡೆ ಸೇರಿ ಕಬ್ಬಿನಹಾಲು ಸವಿಯುವ ಒಂದು ವೇದಿಕೆಯಾಗಿ ಆಲೆಮನೆ ಹಬ್ಬ ಆಚರಿಸಲಾಗಿದೆ.| ನರಸಿಂಹ ಭಟ್ಟ ಕುಂಕಿಮನೆ ಮಾಗೋಡ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ