ಜಿಲ್ಲೆ

ರಾಜಾಂಗಣದಲ್ಲಿ 'ಆಲೆಮನೆ' ದರ್ಬಾರ್​...!

ಶ್ರೀಕೃಷ್ಣನ ಸನ್ನಿಧಿಯಲ್ಲಿ ಕೋಣನ ಗಾಣ

ಜಮಾನಸಕ್ಕೆ ಸಂಪ್ರದಾಯ ತಿಳಿಸುವ ಯತ್ನ

ಪ್ರಶಾಂತ ಭಾಗ್ವತ, ಉಡುಪಿ

ಮಲೆನಾಡು ಭಾಗದ ಜನಪ್ರಿಯ ಹಾಗೂ ಸಂಪ್ರದಾಯವಾದ ಆಲೆಮನೆಯು ಕಡಲ ನಗರಿ ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದ ಬಳಿ ದರ್ಬಾರ್​ ನಡೆಸುತ್ತಿದೆ. ಯಾಂತ್ರಿಕ ಯುಗದಲ್ಲಿ ತನ್ನ ಛಾಪು ಕಳೆದುಕೊಳ್ಳುತ್ತಿದ್ದರೂ ಸಹ ಆಲೆಮನೆ ತನ್ನ ಅಸ್ತಿತ್ವ ಹಾಗೂ ಮಹತ್ವವನ್ನು ಪ್ರವಾಸಿಗರಿಗೆ, ಭಕ್ತರಿಗೆ ಅರುಹುತ್ತಿದೆ.

ಮರೆಯಾಗುತ್ತಿರುವ ಆಲೆಮನೆ ಸಂಸ್ಕೃತಿಯನ್ನು ಮತ್ತೆ ಜನಮಾನಸಕ್ಕೆ ತಲುಪಿಸಲು ಪರ್ಯಾಯ ಪುತ್ತಿಗೆ ಮಠ ಮುಂದಾಗಿದೆ. ಭಗವದ್ಗೀತೆಯ ಪ್ರಸಾರಕ್ಕೆ ಮೀಸಲಾಗಿದ್ದ ಗೀತಾಮಂದಿರದಲ್ಲಿ ದೇಸೀಯ ಆಚಾರ-ವಿಚಾರಗಳಿಗೆ ಮರುಜೀವ ನೀಡುವಂತಾಗಲು ಭಾರತ ಮೇಳ ಆಯೋಜಿಸಿದ್ದು, ಅದರಲ್ಲಿ ಆಲೆಮನೆ ಗಮನ ಸೆಳೆಯುತ್ತಿದೆ.

ಶಿವಮೊಗ್ಗ ಜಿಲ್ಲೆಯ ಆಲೆಮನೆ

ಕೋಣಗಳನ್ನು ಬಳಸಿ ಈ ಹಿಂದೆ ನಡೆಸುತ್ತಿದ್ದ ಆಲೆಮನೆಗಳು ಈಗ ಲಾಭದಾಯಕವಾಗಿಲ್ಲ. ಹೀಗಾಗಿ ಎಲ್ಲೆಡೆ ಸ್ಥಗಿತಗೊಂಡಿದ್ದರೂ ಸಹ ಮಲೆನಾಡು ಭಾಗಗಗಳಲ್ಲಿ ಇಂದಿಗೂ ತನ್ನ ಶ್ರೇಷ್ಠತೆ ಉಳಿಸಿಕೊಂಡಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಆಲೆಮನೆ ಮನೆಮಾತಾಗಿದೆ. ಅಲ್ಲಿನ ಆರ್ಗಾ ಗ್ರಾಮದ ಬಿಂದ್ಯಾ ಎಂಬ ಊರಿನ ಚಂದ್ರಶೇಖರ ಎಂಬವರು ರಾಜಾಂಗಣದ ಬಳಿ ಕೋಣನ ಆಲೆಮನೆ ತೆರೆದಿದ್ದಾರೆ. ಉಡುಪಿಗೆ ಬರುವ ಪ್ರವಾಸಿಗರು ಹಾಗೂ ಭಕ್ತರಿಗೆ ಇದು ಆಕರ್ಷಣೆಯ ಕೇಂದ್ರವಾಗಿದ್ದು, ಕಣ್ಣೆದುರಿನಲ್ಲೇ ಗಾಣದ ಮೂಲಕ ಕಬ್ಬಿನ ತಾಜಾ ರಸ ಕುಡಿದು ವಿಶಿಷ್ಟ ಅನುಭವ ಪಡೆಯುತ್ತಿದ್ದಾರೆ. ಓಲ್ಡ್​ ಈಸ್​ ಗೋಲ್ಡ್​ ಎಂಬ ಪ್ರತಿಕ್ರಿಯೆಯನ್ನೂ ನೀಡುತ್ತಿದ್ದಾರೆ.

ದುಡಿಯುವ ಕೋಣಗಳಿಗೆ ಹಾಡಿನ ರಂಜನೆ

ಉಡುಪಿಯಲ್ಲಿ ಆಲೆಮನೆ ತೆರೆದಿರುವ ಚಂದ್ರಶೇಖರ ಅವರು ಜತೆಯಲ್ಲಿ ನಾಲ್ಕು ಬಲಿಷ್ಠವಾದ ಕೋಣಗಳನ್ನು ತಂದಿದ್ದಾರೆ. ಅವುಗಳಲ್ಲಿ ಎರಡು ಕೋಣಗಳಿಗೆ ಬೆಳ್ಳು, ಇನ್ನೆರಡು ಕೋಣಗಳಿಗೆ ಕಾಳು ಎಂದು ಹೆಸರಿಟ್ಟಿದ್ದಾರೆ. ಒಂದು ಜೋಡಿಗೆ ಬೆಳಗಿನ ಅವಧಿಯಲ್ಲಿ ಹಾಗೂ ಇನ್ನೊಂದು ಜೋಡಿಗೆ ಸಂಜೆಯ ಅವಧಿಯಲ್ಲಿ ಆಲೆಮನೆಯ ಗಾಣ ತಿರುಗಿಸುವ ಕೆಲಸಕ್ಕೆ ನೇಮಿಸುತ್ತಾರೆ. ಗಾಣ ತಿರುಗಿಸುವಾಗ ಕೋಣಗಳಿಗೆ ಹರುಷವಾಗಲೆಂದು ಚಂದ್ರಶೇಖರ ಅವರೇ ವಿಶಿಷ್ಟ ಸ್ವರದಲ್ಲಿ ಮೂಡು ದಿಕ್ಕಿನ ಮನೆಯೋ ನಡೆಯೋ ಬೆಳ್ಳು, ಹಾದಿಯಲಿ ಕಲ್ಲು-ಮುಳ್ಳು ನಡೆಯೋ ಕಾಳು ಎಂದು ಹಾಡುತ್ತಾರೆ. ಕಬ್ಬಿನ ಹಾಲು ಕುಡಿಯಲು ಬರುವ ಗ್ರಾಹಕರೂ ಈ ಹಾಡನ್ನು ಕೇಳಿ ಸಂತಸಗೊಳ್ಳುತ್ತಿದ್ದಾರೆ.

ನಮ್ಮ ಕುಟುಂಬದ ಕುಲಕಸುಬು ಇದು. ಮುತ್ತಾತ, ತಾತ, ತಂದೆ ಎಲ್ಲರೂ ಈ ವೃತ್ತಿಯಿಂದಲೇ ಜೀವನ ನಡೆಸಿದ್ದಾರೆ. ನಮ್ಮ ಸಂಸ್ಕೃತಿ, ಸಂಪ್ರದಾಯ ಉಳಿಸಬೇಕಿದೆ. ಹೀಗಾಗಿ ಲಾಭ-ನಷ್ಟ ನೋಡದೇ ಕೋಣನ ಗಾಣವನ್ನು ಇಂದಿಗೂ ಮುನ್ನಡೆಸಿಕೊಂಡು ಬಂದಿದ್ದೇನೆ. ರಿಪ್ಪನ್​ಪೇಟೆಯ ಸಿಹಿ ಕಬ್ಬು ಬಳಸುತ್ತೇನೆ. ಮದುವೆ, ಜಾತ್ರೆ, ಮೇಳ, ಶಿಬಿರಗಳು ನಡೆಯುವಲ್ಲಿ ಕರೆದರೆ (ಮೊ.ಸಂ. 6362742647) ಗಾಣ ಹಾಕುತ್ತೇನೆ. | ಚಂದ್ರಶೇಖರ ಬಿಂದ್ಯಾ. ಗಾಣದ ಮಾಲೀಕ, ತೀರ್ಥಹಳ್ಳಿ ದೇಸೀಯ ಸಂಸ್ಕೃತಿ, ಆಚಾರ-ವಿಚಾರಗಳ ಕುರಿತು, ಈ ಹಿಂದೆ ಜನರ ಜೀವನ ವ್ಯವಸ್ಥೆ ಹೇಗಿತ್ತು ಎನ್ನುವುದನ್ನು ಜನಮಾನಸಕ್ಕೆ ತಿಳಿಸಲು ಪರ್ಯಾಯ ಪುತ್ತಿಗೆ ಮಠದಿಂದ ಗೀತಾ ಮಂದಿರದಲ್ಲಿ 'ಭಾರತ ಮೇಳ' ಆಯೋಜಿಸಿದ್ದೇವೆ. ಕೋಣನ ಬಳಸಿ ಕಬ್ಬಿನ ರಸ ತೆಗೆಯುವ ವಿಧಾನವನ್ನೂ ಸಹ ಇಂದಿನ ಯುವ ಸಮುದಾಯಕ್ಕೆ ತಿಳಿಸಲು ರಾಜಾಂಗಣದ ಬಳಿ ಆಲೆಮನೆಯ ಕಾರ್ಯವಿಧಾನದ ವೀಕ್ಷಣೆಗೆ ವ್ಯವಸ್ಥೆ ಮಾಡಿದ್ದೇವೆ. | ಸುಗುಣೇಂದ್ರ ತೀರ್ಥ ಶ್ರೀಪಾದರು. ಪರ್ಯಾಯ ಪುತ್ತಿಗೆ ಮಠ