ಚನ್ನಗಿರಿ: ಗ್ರಾಮೀಣ ಭಾಗದ ಮಹಿಳೆಯರಿಗೆ ಸ್ವಾವಲಂಬಿ ಜೀವನ ನಡೆಸಲು ಆರ್ಥಿಕ ಶಕ್ತಿ ಹಾಗೂ ಹಳ್ಳಿಗಳ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ನೀಡುವ ಮೂಲಕ ಧರ್ಮಸ್ಥಳ ಸಂಸ್ಥೆ ಜನಪರ ಕಾಳಜಿ ತೋರಿಸುತ್ತಿದೆ ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ತಿಳಿಸಿದರು.
ತಾಲೂಕಿನ ಬುಳಸಾಗರ ಗ್ರಾಮದ ಶ್ರೀ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಹಮ್ಮಿಕೊಂಡಿದ್ದ ಮದ್ಯವರ್ಜನಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ದುರಭ್ಯಾಸಗಳು ಮನುಷ್ಯನ ಜೀವನವನ್ನು ಬಲಿ ತೆಗೆದುಕೊಳ್ಳುತ್ತಿವೆ. ಆದರೆ, ಇದು ವ್ಯಸನಿಗಳಿಗೆ ಅರಿವಿಗೆ ಬರುತ್ತಿಲ್ಲ. ಅವರ ಮನಸ್ಸು ಬದಲಾಯಿಸುವ ಪ್ರಯತ್ನ ನಡೆಯುತ್ತಲೇ ಇದೆ ಎಂದರು.
ಮದ್ಯಪಾನ ಸಾಂಸಾರಿಕ ಜೀವನದಲ್ಲಿ ಬಡತನ, ಅನಾರೋಗ್ಯ ತರುವಂಥ ಕೆಲಸ ಮಾಡುತ್ತದೆ. ಕುಟುಂಬ ಸದಸ್ಯರು ಸಾಮಾಜಿಕ ಅಪಮಾನಕ್ಕೆ ಒಳಗಾಗುತ್ತಿದ್ದಾರೆ. ಕುಡಿತಕ್ಕೆ ಹಣ ಸುರಿದು ಮನೆಯವರು ಪ್ರತಿದಿನ ಉಪವಾಸ ಇರುವಂತೆ ಮಾಡುತ್ತಿದ್ದಾರೆ ಎಂದರು.
ಜಿಲ್ಲಾ ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಎಂ.ಬಿ.ನಾಗರಾಜ್ ಮಾತನಾಡಿ, ಮದ್ಯವ್ಯಸನಿಗಳ ಬದುಕು ಹಸನಾಗಲು ಇಂತಹ ಶಿಬಿರಗಳಿಂದ ಮಾತ್ರ ಸಾಧ್ಯ. ಜೀವನದಲ್ಲಿ ಬದುಕಿರುವಾಗ ಇನ್ನೊಬ್ಬರಿಗೆ ಮಾದರಿ ಆಗಿರಬೇಕಾಗಿದೆ ಎಂದರು.
ಜಿಪಂ ಮಾಜಿ ಅಧ್ಯಕ್ಷೆ ಯಶೋದಮ್ಮ ಮರುಳಪ್ಪ, ಮದ್ಯವರ್ಜನ ಸಮಿತಿಯ ಅಧ್ಯಕ್ಷ ಕೆ.ಯು.ಓಂಕಾರಪ್ಪ, ಧರ್ಮಸ್ಥಳ ಸಂಸ್ಥೆ ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶೀಲಮ್ಮ, ಯೋಜನಾಧಿಕಾರಿ ಅಜಿತ್, ಪ್ರಧಾನ ಸಂಚಾಲಕ ಅನಿಲ್‌ಕುಮಾರ್, ಅಜಿತ್‌ಕುಮಾರ್, ಸಿದ್ದರಾಮಪ್ಪ, ಸುಶೀಲಮ್ಮ ಇದ್ದರು.