ಜಿಲ್ಲೆ

ಕುಡಿತದಿಂದ ಸಾಮಾಜಿಕ ಸಮಸ್ಯೆಗಳು ಉಲ್ಬಣ

ಲಲಾಟಾಕ್ಷ ಎಸ್

ಎಚ್.ಡಿ.ಕೋಟೆ: ಕುಡಿತಕ್ಕೆ ದಾಸನಾಗುವುದು ಸುಲಭ. ಆದರೆ, ಅದರಿಂದ ಆಗುವ ಅನಾಹುತಗಳು ಸಮಾಜದಲ್ಲಿ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತವೆ ಎಂದು ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ಪ್ರಭುಸ್ವಾಮಿ ತಿಳಿಸಿದರು.


ಪಟ್ಟಣದ ಗುರುಭವನದಲ್ಲಿ ಎಚ್.ಡಿ.ಕೋಟೆ ತಾಲೂಕು ಮದ್ಯ ವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟ್ರಸ್ಟ್ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ 1848ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಕುಡಿತದಿಂದ ಸಮಾಜದಲ್ಲಿ ಹಲವು ಏರುಪೇರುಗಳು ಉಂಟಾಗಲಿವೆ. ಕುಡಿತದಿಂದ ಬಿಡುಗಡೆ ಹೊಂದಿದ ಬಳಿಕ ಮತ್ತೆ ಕುಡಿತಕ್ಕೆ ಬಲಿಯಾಗದಿರಿ. ಪಟ್ಟಣದಲ್ಲಿ ಎಂಟು ದಿನಗಳ ಕಾಲ ನಡೆದ ಶಿಬಿರದಲ್ಲಿ ಸುಮಾರು 40 ಶಿಬಿರಾರ್ಥಿಗಳಿಗೆ ಕುಡಿತದ ಚಟದಿಂದ ಹೊರ ಬರುವಂತೆ ಮಾರ್ಗದರ್ಶನ ನೀಡಲಾಗಿದೆ ಎಂದು ಹೇಳಿದರು.


ಯೋಜನೆಯ ಹಿರಿಯ ಜಿಲ್ಲಾ ನಿರ್ದೇಶಕ ವಿಜಯಕುಮಾರ್ ನಾಗನಾಳ ಮಾತನಾಡಿ, ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸತತ ಪ್ರಯತ್ನ ಮಾಡುತ್ತಾ ಬಂದಿದೆ. ಮುಂದೆಯೂ ಸಹ ಇದೇ ದಾರಿಯಲ್ಲಿ ಯೋಜನೆ ಸಾಗಲಿ. ಶಿಬಿರಾರ್ಥಿಗಳು ಪ್ರಯೋಜನ ಪಡೆದು ದುಶ್ಚಟದಿಂದ ದೂರವಿರಿ ಎಂದು ಸಲಹೆ ನೀಡಿದರು.


ಪಡುವಲು ಮಠದ ಮಹದೇವ ಸ್ವಾಮೀಜಿ ಆಶೀರ್ವಚನ ನೀಡಿದರು. ಯೋಜನೆಯ ಪ್ರಾದೇಶಿಕ ನಿರ್ದೇಶಕ ಜಯರಾಮ ಬಿ.ನೆಲ್ಲಿತ್ತಾಯ, ತಾಲೂಕು ಯೋಜನಾಧಿಕಾರಿ ಭಾಸ್ಕರ್, ಸಮಿತಿ ಅಧ್ಯಕ್ಷ ಐಡಿಯಾ ವೆಂಕಟೇಶ್, ಶ್ರೀಕಾಂತ್, ಚಾ.ನಂಜುಂಡಮೂರ್ತಿ, ವಿನಯ ಭಜರಂಗಿ, ನಾಗಣ್ಣ, ನಾಗರಾಜು, ಕಸಾಪ ಅಧ್ಯಕ್ಷ ಕನ್ನಡ ಪ್ರಮೋದ್, ವೀರಪ್ಪ, ರಾಜೇಗೌಡ, ಸ್ವಾಮಿ, ಸೋಮೇಶ್, ಜಯಂತ್, ಶಾಂತಮ್ಮ, ಯಶವಂತ್, ಭಾಸ್ಕರ್, ಬೀಚನಹಳ್ಳಿ ಮಂಜು, ಮಾಧವನಾಯಕ, ಆರಕ್ಷಕ ನಿರೀಕ್ಷಕ ಶಬ್ಬೀರ್ ಹುಸೇನ್, ಉಪ ನಿರೀಕ್ಷಕ ಪ್ರಕಾಶ್, ಲೋಕೇಶ್, ಸುರೇಶ್, ಬಿ.ಜೆ.ರಾಜು, ಕೃಷ್ಣಮೂರ್ತಿ, ಆನಂದ, ವರ್ಷಾ, ರೇಖಾ, ಭಾರತಿ, ಪವಿತ್ರಾ, ದೇವರಾಜು ಇದ್ದರು.