ಅಳವಂಡಿ: ಸಾಮೂಹಿಕ ವಿವಾಹದಲ್ಲಿ ಮದುವೆ ಆಗುವುದರಿಂದ ಆರ್ಥಿಕ ಉಳಿತಾಯವಾಗಲಿದೆ ಎಂದು ಕುದರಿಮೋತಿಯ ಮೈಸೂರುಮಠದ ವಿಜಯ ಮಹಾಂತ ಸ್ವಾಮೀಜಿ ಹೇಳಿದರು.
ಸಮೀಪದ ವದಗನಾಳ ಗ್ರಾಮದ ಶ್ರೀ ಹಮ್ಮಿಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹದ ಕಾರ್ಯಕ್ರಮ ಹಾಗೂ ಧಾರ್ಮಿಕ ಸಭೆಯಲ್ಲಿ ಭಾನುವಾರ ಮಾತನಾಡಿದರು. ಸಾಮೂಹಿಕ ಮದುವೆಯಿಂದ ಲಕ್ಷಾಂತರ ಹಣ ಸಾಲ ಮಾಡುವುದು ತಪ್ಪಲಿದ್ದು, ದುಂದುವೆಚ್ಚಕ್ಕೆ ಕಡಿವಾಣ ಬೀಳಲಿದೆ ಎಂದರು.
ಜಾತ್ರೆಗಳು ಸರ್ವರ ಮನಸ್ಸನ್ನು ಒಗ್ಗೂಡಿಸುತ್ತವೆ. ಜಾತ್ರೆಗೆ, ಧರ್ಮಕ್ಕೆ ಜಾತಿ, ಮತ ಇಲ್ಲ ಸರ್ವರು ಭಾವೈಕ್ಯತೆಯಿಂದ, ಭಕ್ತಿ ಭಾವದಿಂದ ಜಾತ್ರೆಯನ್ನು ಆಚರಿಸಬೇಕು. ವದಗನಾಳ ಗ್ರಾಮ ಭಕ್ತಿಯ ಶಕ್ತಿ ಕೇಂದ್ರ ಆಗಿದೆ. ಇಲ್ಲ ಯಾವುದೇ ಧಾರ್ಮಿಕ ಕಾರ್ಯ ನಡೆದರು ಭಕ್ತರು ತನು, ಮನ, ಧನ ಅರ್ಪಿಸುತ್ತಾರೆ. ಹಮ್ಮಿಗೇಶ್ವರ ಅಜ್ಜನ ಮಹಿಮೆ ಅಪಾರವಾಗಿದೆ ಎಂದರು.
ಮೈನಳ್ಳಿ-ಬಿಕನಳ್ಳಿಯ ಸಿದ್ಧೇಶ್ವರ ಶಿವಾಚಾರ್ಯರು ಮಾತನಾಡಿ, ಹಮ್ಮಿಗೇಶ್ವರ ಅಜ್ಜ ಪ್ರತಿಯೊಬ್ಬ ಸದ್ಭಕ್ತರ ಹೃದಯದಲ್ಲಿ ನೆಲೆಸಿದ್ದಾನೆ. ನೂತನ ದಂಪತಿಗಳು ಪ್ರೀತಿ, ಗೌರವ, ನಂಬಿಕೆಯೊಂದಿಗೆ ಜೀವನ ಸಾಗಿಸಿದಾಗ ಸಾರ್ಥಕವಾಗಲಿದೆ ಎಂದರು.
ಜಾತ್ರೆ ಅಂಗವಾಗಿ ದೇವಸ್ಥಾನವನ್ನು ವಿವಿಧ ಹೂಗಳಿಂದ ಅಲಂಕರಿಸಿ ಸಿಂಗರಿಸಲಾಗಿತ್ತು. ಭಕ್ತರು ಅಜ್ಜನ ಗದ್ದುಗೆಗೆ ಪೂಜೆ ಸಲ್ಲಿಸಿದರು. 40 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು. ನಂತರ ವಿವಿಧ ಕ್ಷೇತ್ರಗಳ ಸಾಧಕರು, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ರಾಜ್ಯ ಮಟ್ಟದ ಭಜನಾ ಸ್ಪರ್ಧೆಯಲ್ಲಿ ರೋಣದ ಶ್ರೀದುರ್ಗಾದೇವಿ ಭಜನಾ ಸಂಘ(ಪ್ರಥಮ), ಗದಗನ ಗಾನಯೋಗಿ ಭಜನಾ ಸಂಘ (ದ್ವಿತೀಯ), ಸಾಗರ ಕ್ಯಾಂಪನ ಕಲ್ಯಾಣ ಕರ್ನಾಟಕ ಭಜನಾ ಸಂಘ (ತೃತೀಯ) ಸ್ಥಾನ ಪಡೆದುಕೊಂಡವು. ಪ್ರಥಮ 10,001 ದ್ವಿತೀಯ 5001, ತೃತೀಯ 3001 ರೂ. ಜತೆಗೆ ನೆನಪಿನ ಕಾಣಿಕೆ ನೀಡಲಾಯಿತು.
ಜಾತ್ರೆಯಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಯಿತು. ಕೆಂಪುಚಟ್ನಿ, ಬದನೆಕಾಯಿ ಪಲ್ಯ, ಅಲಸಂದೆ ಹಾಗೂ ಇತರ ಧಾನ್ಯಗಳ ಪಲ್ಯ, ಜಿಲೇಬಿ, ಶೇಂಗಾಹೋಳಿಗೆ, ಮಾಲದಿ, ಬೂಂದಿ, ಜೋಳದ ರೊಟ್ಟಿ, ಜಪಾತಿ, ಮಜ್ಜಿಗೆ, ಅನ್ನ, ಸಾಂಬಾರನ್ನು ಭಕ್ತರು ಸವಿದರು.
ಹಿರೇಸಿಂದೋಗಿಯ ಕಪ್ಪತ್ತಮಠದ ಚಿದಾನಂದ ಸ್ವಾಮೀಜಿ , ಬೆದವಟ್ಟಿಯ ಶಿವಸಂಗಮೇಶ ಶಿವಾಚಾರ್ಯರು, ಸಂಗನಾಳ ಅನ್ನದಾನೇಶ್ವರ ಮಠದ ಶಾಂತವೀರ ಸ್ವಾಮಿಗಳು, ಮಾರ್ಕಂಡೇಯ ಅಜ್ಜ, ಸಂಸದ ರಾಜಶೇಖರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ, ಮುಖಂಡರಾದ ಸಿ.ವಿ.ಚಂದ್ರಶೇಖರ, ಕೆ.ಬಸವರಾಜ, ಅಜಯಗೌಡ ಪಾಟೀಲ, ಡಾ.ಬಸವರಾಜ ಇತರರಿದ್ದರು.