ಅಳವಂಡಿ: ಮಹರ್ಷಿ ವಾಲ್ಮೀಕಿ ರಾಮಾಯಣವನ್ನು ವಿಶ್ವವೇ ಮೆಚ್ಚಿದೆ. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಹೇಳಿದರು.
ವಾಲ್ಮೀಕಿ ಜಯಂತಿ ನಿಮಿತ್ತ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಕ್ಷೇಮಾಭಿವೃದ್ಧಿ ಸಂಘ ಏರ್ಪಡಿಸಿದ್ದ ಧಾರ್ಮಿಕ ಸಭೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಭಾನುವಾರ ಮಾತನಾಡಿದರು. ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ.ಚಂದ್ರಶೇಖರ ಮಾತನಾಡಿ, ಮಕ್ಕಳಿಗೆ ಶಿಕ್ಷಣವೆಂಬ ಆಸ್ತಿ ನೀಡಬೇಕು. ವಿದ್ಯೆ ಇದ್ದರೆ ಜಗತ್ತಿನಲ್ಲಿ ಏನನ್ನಾದರೂ ಸಾಧಿಸಬಹುದು. ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಸಮುದಾಯದ ಜನರು ಆರ್ಥಿಕವಾಗಿ ಸಬಲರಾಗಬೇಕು. ಮನುಕುಲಕ್ಕೆ ಮಾದರಿಯಾದ ಮಹನೀಯರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು ಎಂದರು.
ಶ್ರೀ ಸಿದ್ಧೇಶ್ವರ ಮಠದ ಮರುಳಾರಾಧ್ಯ ಸ್ವಾಮೀಜಿ ಮಾತನಾಡಿ, ಮಹರ್ಷಿ ವಾಲ್ಮೀಕಿ ಒಬ್ಬ ಶರಣ, ಸಂಸ್ಕೃತ ಪಂಡಿತ, ಖಗೋಳ ಶಾಸ್ತ್ರಜ್ಞ, ತತ್ವಜ್ಞಾನಿ ಆಗಿದ್ದರು. ಅವರ ತತ್ವಾದರ್ಶಗಳನ್ನು ಎಲ್ಲರೂ ಪಾಲಿಸಬೇಕು. ಶರಣರು, ಸಂತರು, ದಾರ್ಶನಿಕರ ಜಯಂತಿಗಳನ್ನು ಸರ್ವರೂ ಆಚರಿಸುವಂತಾಗಬೇಕು ಎಂದು ತಿಳಿಸಿದರು. ಪ್ರಮುಖರಾದ ದೇವಪ್ಪ ಕಟ್ಟಿಮನಿ, ಭಾರತಿ ಬೆಣಕಲ್, ಶಂಕ್ರಮ್ಮ ಜೋಗಿನ, ಬಸವರಡ್ಡಿ ಗದ್ದಿಕೇರಿ, ಗುರುಬಸವರಾಜ ಹಳ್ಳಿಕೇರಿ, ವಸಂತ, ಜವಳಪ್ಪ, ಲಕ್ಷ್ಮಣ, ಕೊಟ್ರಪ್ಪ, ಸಿದ್ದಪ್ಪ, ಕೃಷ್ಣಪ್ಪ, ಎಸ್.ಆರ್.ಚಿಗರಿ, ಶ್ರೀನಿವಾಸ, ವಿಶ್ವನಾಥ, ಭೀಮರಡ್ಡಿ, ಮಂಜುನಾಥ, ಉಮೇಶ, ರಾಮಪ್ಪ, ದೇವಪ್ಪ, ಪರಶುರಾಮ, ಶಿವಮೂರ್ತಿ, ಹೇಮರಡ್ಡಿ ಇತರರಿದ್ದರು.