ತಿಗರಿ ಗ್ರಾಮದಲ್ಲಿ ಕಾರ ಹುಣ್ಣಿಮೆ ಪ್ರಯುಕ್ತ ಶುಕ್ರವಾರ ಅದ್ದೂರಿಯಾಗಿ ಎತ್ತುಗಳಿಂದ ಕರಿ ಹರಿಯಲಾಯಿತು.  
ಜಿಲ್ಲೆ

ಎತ್ತುಗಳ ಮೇಲೆ ಬಣ್ಣಗಳ ಚಿತ್ತಾರ

ಅಳವಂಡಿ: ವಲಯ ವ್ಯಾಪ್ತಿಯ ಗ್ರಾಮಗಳಲ್ಲಿ ಮುಂಗಾರಿನ ರೈತರ ಹಬ್ಬ ಕಾರ ಹುಣ್ಣಿಮೆ ನಿಮಿತ್ತ ಶುಕ್ರವಾರ ಎತ್ತುಗಳಿಂದ ಸಂಭ್ರಮದಿಂದ ಕರಿ ಹರಿಯಲಾಯಿತು.

ಎತ್ತುಗಳ ಮೈ ತೊಳೆದು ಕೊಂಬಿಗೆ ಬಣ್ಣವನ್ನು ಹಚ್ಚಿ ಹೂಗಳಿಂದ ಸಿಂಗರಿಸಲಾಗಿತ್ತು. ಸಂಜೆ ಗ್ರಾಮದ ಅಗಸಿ ಬಾಗಿಲನ್ನು ತಳಿರು ತೋರಣಗಳಿಂದ ಅಲಂಕರಿಸಿ, ಕಂದು ಹಾಗೂ ಬಿಳಿ ಬಣ್ಣದ ಎತ್ತುಗಳನ್ನು ಕರಿ ಹರಿಯಲು ತರಲಾಯಿತು.

ಗ್ರಾಮದ ಅಗಸಿಯಲ್ಲಿ ಬೇವಿನ ಕೊಂಬೆ ಹಾಗೂ ಕೊಬ್ಬರಿ ಬಟ್ಟಲು ಕಟ್ಟಿದ ಹುರಿ ಹಿಡಿಯಲಾಗಿತ್ತು. ನಂತರ ಕರಿ ಹರಿಯುವ ಎತ್ತುಗಳನ್ನು ಒಮ್ಮೆಲೆ ಓಡಲು ಬಿಡಲಾಯಿತು. ಮೊದಲ ಕರಿ ಹರಿದ ಎತ್ತಿಗೆ ವಿಜೇತವೆಂದು ಘೋಷಿಸಿ ಸಂಭ್ರಮಿಸಲಾಯಿತು.

ಸಮೀಪದ ತಿಗರಿ ಗ್ರಾಮದಲ್ಲೂ ಅದ್ದೂರಿಯಾಗಿ ಎತ್ತುಗಳಿಂದ ಕರಿ ಹರಿಯಲಾಯಿತು. ಗ್ರಾಮದ ಅಗಸಿ ಹತ್ತಿರ ಸೇರಿದ ನೂರಾರು ಜನರು ಕರಿ ಹರಿಯುವುದನ್ನು ಕಣ್ತುಂಬಿಕೊಂಡರು. ಹನುಮಪ್ಪ ಫಕ್ಕೀರಪ್ಪ ಕುಂಟಗೇರಿ ಅವರ ಎತ್ತು ಕರಿಹರಿಯಿತು.