ಅಳವಂಡಿ ಸಮೀಪದ ಮೋರನಾಳದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಸೋಮವಾರ ನಡೆಯಿತು. ಮಠಾಧೀಶರಾದ ಶ್ರೀ ಮರುಳಾರಾಧ್ಯ ಶಿವಾಚಾರ್ಯ, ಶ್ರೀ ಚಂದ್ರಶೇಖರ ಶಿವಾಚಾರ್ಯ, ಶ್ರೀ ಚರಂತೇಶ್ವರ ಶಿವಾಚಾರ್ಯ ಪಾಲ್ಗೊಂಡಿದ್ದರು.  
ಜಿಲ್ಲೆ

ಸಾಮೂಹಿಕ ಮದುವೆಯಿಂದ ಆರ್ಥಿಕ ಉಳಿತಾಯ

ಕುರುವತ್ತಿ ಶ್ರೀಕಾಂತಪ್ಪ

ಅಳವಂಡಿ: ಸಾಮೂಹಿಕ ವಿವಾಹದಲ್ಲಿ ಮದುವೆ ಆಗುವುದರಿಂದ ಕುಟುಂಬಕ್ಕೆ ಆರ್ಥಿಕ ಉಳಿತಾಯ ಜತೆಗೆ ಲಕ್ಷಾಂತರ ರೂ. ಸಾಲ ಮಾಡುವುದು ತಪ್ಪಲಿದೆ ಎಂದು ಅಳವಂಡಿ ಶ್ರೀ ಮರುಳಾರಾಧ್ಯ ಶಿವಾಚಾರ್ಯ ತಿಳಿಸಿದರು.

ಸಮೀಪದ ಮೋರನಾಳದ ಶ್ರೀ ಗೋಣಿಬಸವೇಶ್ವರ ದೇವಸ್ಥಾನದಲ್ಲಿ ಏರ್ಪಡಿಸಿದ್ದ 19 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ದೇಶಿಸಿ ಸೋಮವಾರ ಮಾತನಾಡಿದರು.

ಹಬ್ಬ ಹರಿದಿನ, ಧಾರ್ಮಿಕ ಸಭೆ, ಜಾತ್ರೆ, ಸಾಮೂಹಿಕ ವಿವಾಹಗಳು ಸರ್ವರ ಮನಸ್ಸನ್ನು ಒಗ್ಗೂಡಿಸುತ್ತವೆ. ಎಲ್ಲರೂ ಭಾವೈಕ್ಯ, ಭಕ್ತಿ ಭಾವದಿಂದ ಇಂತಹ ಕಾರ್ಯಕ್ರಮಗಳನ್ನು ಆಚರಿಸಬೇಕು ಎಂದರು.

ಗುಮ್ಮಗೋಳದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಾತನಾಡಿ, ನವ ದಂಪತಿಗಳು ಪ್ರೀತಿ, ಗೌರವ, ನಂಬಿಕೆಯೊಂದಿಗೆ ಜೀವನ ನಡೆಸಿ. ಸಂಸಾರವೆಂಬ ಬಂಡಿಯನ್ನು ಜೊಡೆತ್ತಿನಂತೆ ಮುನ್ನಡೆಸಿ. ಕಷ್ಟ, ಸುಖ, ದುಖಃಗಳನ್ನು ಸಮನಾಗಿ ಸ್ವೀಕರಿಸಿ ಮುಂದೆ ಸಾಗಿ ಎಂದು ಸಲಹೆ ನೀಡಿದರು.

ನಂದಿಪುರದ ಶ್ರೀ ಚರಂತೇಶ್ವರ ಶಿವಾಚಾರ್ಯರು ಮಾತನಾಡಿ, ಸತಿ-ಪತಿ ಇಬ್ಬರೂ ನಂಬಿಕೆ, ವಿಶ್ವಾಸದಿಂದ ಬಾಳಬೇಕು. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಬೇಕು. ಅಪ ನಂಬಿಕೆಗೆ ಜಾಗ ನೀಡದಿದ್ದರೆ ಜೀವನ ಸುಂದರಮಯವಾಗಿರುತ್ತದೆ ಎಂದರು.

ಪ್ರಮುಖರಾದ ಅಂದಪ್ಪ ಚಿಲಗೊಡ್ರ, ಯಲ್ಲಪ್ಪ ಮಾಗಳದ, ರಾಮಪ್ಪ ಹೊರಪೇಟಿ, ಗವಿಸಿದ್ದಪ್ಪ ತಿಗರಿ, ಷಣ್ಮುಖಪ್ಪ ಆಲೂರ, ಪರಮೇಶಪ್ಪ ಹೊರಪೇಟಿ, ನಾಗಪ್ಪ ಹಾರನಳ್ಳಿ, ಹನುಮಂತ ಹೊರಪೇಟಿ, ಬಸವರಾಜ ಬಿನ್ನಾಳ, ಹನುಮಂತ, ಪಕೀರೇಶ, ಶಿವಪ್ಪ ಸಂಗಟಿ, ಯಲ್ಲಪ್ಪ ದಳಪತಿ ಹಾಗೂ ಗ್ರಾಮಸ್ಥರು ಇದ್ದರು.