ಅಳವಂಡಿ: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಮುಖ್ಯ ಉದ್ದೇಶದಿಂದ ಕೂಲಿಕಾರರು ವಂಚಿತರಾಗಬಾರದು ಎಂದು ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಮಹಮದ್ ಇಬ್ರಾಹಿಂ ಹೇಳಿದರು.
ಗ್ರಾಮದಲ್ಲಿ ಜಿಪಂ, ತಾಪಂ, ಅಳವಂಡಿ ಗ್ರಾಪಂ ಹಮ್ಮಿಕೊಂಡಿದ್ದ ಸಾಮಾಜಿಕ ಲೆಕ್ಕ ಪರಿಶೋಧನೆ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ಬಡವರಿಗೆ ಅನುಕೂಲ ಮಾಡುವ ಉದ್ದೇಶ ಖಾತ್ರಿ ಯೋಜನೆದ್ದಾಗಿದೆ ಎಂದರು.
ನರೇಗಾದಡಿ 2024-25ನೇ ಸಾಲಿನಲ್ಲಿ ಅನುಷ್ಠಾನಗೊಂಡ ಕಾಮಗಾರಿಯ ಪರಿಶೋಧನೆ, ಫಲಾನುಭವಿಯ ಮನೆ ಭೇಟಿ, ಪ್ರತಿ ಕಾಮಗಾರಿಯ ಸ್ಥಳ ಪರಿಶೀಲನೆ ನಂತರ ಸಾಮಾಜಿಕ ಪರಿಶೋಧನೆ ವರದಿಯನ್ನು ಗ್ರಾಮಸಭೆಯಲ್ಲಿ ಮಂಡಿಸಲಾಗುವುದು. ಗ್ರಾಪಂ ವ್ಯಾಪ್ತಿಯಲ್ಲಿ 40 ವೈಯಕ್ತಿಕ, 30 ಸಮುದಾಯ, 3 ಅರಣ್ಯ, 7 ತೋಟಗಾರಿಕೆ ಒಟ್ಟು 80 ಕಾಮಗಾರಿ ಅನುಷ್ಠಾನ ಮಾಡಲಾಗಿದೆ. ಜತೆಗೆ ವಸತಿ ಯೋಜನೆ ಫಲಾನುಭವಿಗಳಿಗೆ 90 ಮಾನವ ದಿನ ನೀಡಲಾಗಿದೆ. ನರೇಗಾ ಯೋಜನೆಯಡಿ ನಾಲಾ ಅಭಿವೃದ್ಧಿ, ಕೆರೆ-ಚೆಕ್‌ಡ್ಯಾಂ ಹೂಳೆತ್ತುವುದು, ಬದು ನಿರ್ಮಾಣ, ಮೇಕೆ ಶೆಡ್ ಮುಂತಾದ ಕಾಮಗಾರಿ ಕೈಗೊಳ್ಳಲಾಗಿದೆ. ಅಂತರ್ಜಲ ಮಟ್ಟ ಹೆಚ್ಚಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಪಿಡಿಒ ಕೊಟ್ರಪ್ಪ ಅಂಗಡಿ ಮಾತನಾಡಿ, ನರೇಗಾ ಯೋಜನೆಯ ಕಾಮಗಾರಿಗಳನ್ನು ವಾರ್ಡ್, ಗ್ರಾಮಸಭೆ ಮೂಲಕ ಕ್ರಿಯಾಯೋಜನೆ ತಯಾರಿಸಿ ನಡೆಸಲಾಗುತ್ತದೆ. ಯೋಜನೆ ಕೂಲಿಕಾರ್ಮಿಕರಿಗೆ ವರದಾನವಾಗಿದ್ದು, ಪ್ರತಿಯೊಬ್ಬರಿಗೂ 100 ದಿನ ಉದ್ಯೋಗ ಖಾತ್ರಿ ನೀಡಲಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಜೋಗಿನ, ಗುರುಬಸವರಾಜ ಹಳ್ಳಿಕೇರಿ, ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ಶಿವಕುಮಾರ ಬಗಾಡೆ, ಶ್ರೀಕಾಂತ, ಹುಸೇನಸಾಬ, ಪ್ರಮುಖರಾದ ಶಿವಮೂರ್ತಿ, ದೇವೇಂದ್ರರಡ್ಡಿ, ಸುರೇಶ, ಮಾರುತಿ, ಗೀತಾ, ಕಾವೇರಿ, ಮಲ್ಲಮ್ಮ, ಗುರಯ್ಯ, ಪ್ರಕಾಶ, ಮುಸ್ತಪಾ ಇತರರಿದ್ದರು.