ಅಳವಂಡಿ: ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದು ಸಂಜೀವಿನಿ ಸಂಸ್ಥೆಯ ಉದ್ದೇಶವಾಗಿದೆ ಎಂದು ಗ್ರಾಪಂ ಸದಸ್ಯೆ ರೇಣುಕಾ ದಾಸರಡ್ಡಿ ತಿಳಿಸಿದರು.
ಗ್ರಾಮದಲ್ಲಿ ಜಿಪಂ, ತಾಪಂ, ಸ್ಥಳೀಯ ಆಡಳಿತ, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಂವರ್ದನಾ ಸಂಸ್ಥೆ, ಬಾಂಧವ್ಯ ಸಂಜಿವಿನಿ ಒಕ್ಕೂಟದಿಂದ ಆಯೋಜಿಸಿದ್ದ ಮಾಸಿಕ ಸಂತೆ (ಪ್ರದರ್ಶನ ಮತ್ತು ಮಾರಾಟ) ಮೇಳ ಉದ್ಘಾಟಿಸಿ ಭಾನುವಾರ ಮಾತನಾಡಿದರು. ಗ್ರಾಮೀಣ ಭಾಗದ ಮಹಿಳೆಯರು ಆರ್ಥಿಕ ಸ್ವಾವಲಂಬನೆಗಾಗಿ ಸಂಸ್ಥೆ ಅನೇಕ ಯೋಜನೆ ಜಾರಿ ಮಾಡಿದ್ದು, ಇದರಲ್ಲಿ ತೊಡಗಿಸಿಕೊಳ್ಳಲು ತರಬೇತಿ ನೀಡಲಾಗುತ್ತಿದೆ. ಮಹಿಳೆಯರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು.
ಸಂಜೀವಿನಿ ಸಂಘದ ಎಂಬಿಕೆ ಮಲ್ಲಮ್ಮ ಭಾವಿಹಳ್ಳಿ ಮಾತನಾಡಿ, ಸಂಘದ ಸದಸ್ಯೆಯರು ತರಬೇತಿ ನಂತರ ಸ್ವುದ್ಯೋಗ ಕೈಗೊಳ್ಳಬೇಕು. ನೀವು ತಯಾರಿಸಿದ ಬಟ್ಟೆ, ರೊಟ್ಟಿ, ಚಟ್ನಿ, ಕರಕುಶಲ ವಸ್ತುಗಳನ್ನು ಮಾಸಿಕ ಸಂತೆಯಲ್ಲಿಟ್ಟು ಮಾರುಕಟ್ಟೆ ಸೌಲಭ್ಯ ಪಡೆದುಕೊಳ್ಳಬೇಕು. ಕುರಿ, ಕೋಳಿ, ಪಶು ಸಾಕಣೆ ಮಾಡಿ ಸ್ವಾವಲಂಬಿಗಳಾಗಬೇಕು ಎಂದರು.
ಸಂಘದ ಕಾರ್ಯದರ್ಶಿ ಜಯಶ್ರೀ ಹಂಚಿನಾಳ, ಖಜಾಂಚಿ ರೇಣುಕಾ ಹಳ್ಳಿಗುಡಿ, ಸದಸ್ಯರಾದ ಗೀತಾ ಕಿಲ್ಲೇದ, ಕಾಳಮ್ಮ, ಪ್ರತಿಭಾ, ಯಲ್ಲಮ್ಮ, ಸುಧಾ ಶೆಟ್ಟರ, ಬಸಮ್ಮ ತವದಿ, ಜುಲೇಖಾ, ಕಾವೇರಿ, ಖಾತುನಬೀ, ಅಂದಮ್ಮ, ಶೈಲಾ, ಸವಿತಾ, ಚನ್ನಮ್ಮ, ಶೋಭಾ, ಜಯಶ್ರೀ, ಸಲಿಮಾ ಇತರರಿದ್ದರು.