ಮೈನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ, ಯುವ ಜಾಗೃತಿ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ ಚಿತ್ರಕಲೆ ಸ್ಪರ್ಧೆ ಆಯೋಜಿಸಲಾಗಿತ್ತು. ಮುಖ್ಯಶಿಕ್ಷಕ ಶಂಭುಲಿಂಗನಗೌಡ ಪಾಟೀಲ ಇದ್ದರು. 
ಜಿಲ್ಲೆ

ಪ್ರಕೃತಿ ವಿಚಾರದಲ್ಲಿ ಮನುಷ್ಯ ನಿರ್ದಯಿ

ಶ್ರೀನಾಥ

ಅಳವಂಡಿ: ಸಮೀಪದ ಮೈನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಶಿವಶರಣೆ ಬುಡ್ಡಮ್ಮ ದೇವಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಕೊಪ್ಪಳ, ಯುವ ಜಾಗೃತಿ ಸಂಸ್ಥೆ ಸಹಯೋಗದಲ್ಲಿ ವಿಶ್ವ ಪರಿಸರ ದಿನ ಅಂಗವಾಗಿ ‘ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟಲು ನನ್ನ ಪಾತ್ರ’ ವಿಷಯ ಕುರಿತು ಪ್ರಬಂಧ ಹಾಗೂ ಪರಿಸರ ಜಾಗೃತಿ ಬಗ್ಗೆ ಚಿತ್ರಕಲೆ ಸ್ಪರ್ಧೆ ಶನಿವಾರ ಏರ್ಪಡಿಸಲಾಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮುಖ್ಯ ಶಿಕ್ಷಕ ಶಂಭುಲಿಂಗನಗೌಡ ಪಾಟೀಲ ಮಾತನಾಡಿ, ಭೂತಾಯಿ ನಮ್ಮ ಬದುಕು ಸಾಗಲು ಅವಶ್ಯವಿರುವ ಎಲ್ಲವನ್ನು ನೀಡುತ್ತಾಳೆ. ಆದರೆ, ಮಾನವ ಮಾತ್ರ ಪ್ರಕೃತಿ ವಿಚಾರದಲ್ಲಿ ನಿರ್ದಯಿಯಾಗಿದ್ದಾನೆ.

ನೈಸರ್ಗಿಕ ಸಂಪನ್ಮೂಲಗಳನ್ನು ದಿನೇದಿನೆ ಹಾಳು ಮಾಡುತ್ತಿದ್ದಾನೆ. ವಾಯುಮಾಲಿನ್ಯ ಹಾಗೂ ಜಾಗತಿಕ ತಾಪಮಾನ ಹೆಚ್ಚಾಗಲು ಕಾರಣವಾಗಿದ್ದಾನೆ. ಇನ್ನಾದರೂ ನಾವು ಎಚ್ಚೆತ್ತುಕೊಂಡು ಮಕ್ಕಳಲ್ಲಿ ಪರಿಸರ ಪ್ರೇಮ ಬೆಳೆಸಬೇಕಾಗಿದೆ ಎಂದರು.

ಯುವ ಜಾಗೃತಿ ಸಂಸ್ಥೆಯ ಮುಖ್ಯಸ್ಥ ಉದಯ ತೋಟದ ಮಾತನಾಡಿ, ಪ್ಲಾಸ್ಟಿಕ್ ಬಳಕೆಯಿಂದ ವಾತಾವರಣ ಕಲುಷಿತಗೊಳ್ಳುತ್ತಿದೆ. ಹೀಗಾಗಿ ಪ್ರತಿಯೊಬ್ಬರೂ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧಿಸಬೇಕು. ಈ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದರು.

ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ, ದ್ವೀತಿಯ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ನೀಡಲಾಯಿತು. ಪ್ರೌಢ ಶಾಲೆ ಮುಖ್ಯಶಿಕ್ಷಕ ಬಸಯ್ಯ ಹಿರೇಮಠ, ಶಿಕ್ಷಕ ಹಾಗೂ ಎಸ್ಡಿಎಂಸಿ ವೃಂದ ಇದ್ದರು.