ಕವಲೂರು ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಲಿಕಾ ಹಬ್ಬವನ್ನು ಅಕ್ಷರ ದಾಸೋಹದ ಸಹಾಯಕ ನಿರ್ದೆಶಕ ಮಲ್ಲಿಕಾರ್ಜುನ ಗುಡಿ ಉದ್ಘಾಟಿಸಿದರು. ಪ್ರಮುಖರಾದ ಮಲ್ಲಿಕಾರ್ಜುನ, ವೀರೇಶ, ಮಲ್ಲಣ್ಣ, ಬಸವರಾಜ ಇತರರಿದ್ದರು. 
ಜಿಲ್ಲೆ

ಅಕ್ಷರಜ್ಞಾನ ಮಕ್ಕಳಿಗೆ ಭದ್ರ ಬುನಾದಿ - ಅಕ್ಷರ ದಾಸೋಹದ ಎ.ಡಿ.ಮಲ್ಲಿಕಾರ್ಜುನ ಗುಡಿ ಅನಿಸಿಕೆ

ಅಳವಂಡಿ: ಹಿಂದುಳಿದ ಮಕ್ಕಳಲ್ಲಿ ಕೌಶಲ ಹೆಚ್ಚಿಸುವುದು ಕಲಿಕಾ ಹಬ್ಬದ ಆಶಯವಾಗಿದೆ ಎಂದು ಅಕ್ಷರ ದಾಸೋಹದ ಸಹಾಯಕ ನಿರ್ದೆಶಕ ಮಲ್ಲಿಕಾರ್ಜುನ ಗುಡಿ ತಿಳಿಸಿದರು.

ಸಮೀಪದ ಕವಲೂರು ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಕ್ಷೇತ್ರ ಸಮನ್ವಯಾಧಿಕಾರಿ, ಸಮೂಹ ಸಂಪನ್ಮೂಲ ಕೇಂದ್ರದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಕಲಿಕಾ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಅಕ್ಷರಜ್ಞಾನ ಭದ್ರ ಬುನಾದಿ. ಮಕ್ಕಳಲ್ಲಿ ಅಭ್ಯಾಸದ ಬಗ್ಗೆ ಆಸಕ್ತಿ ಮೂಡಿಸಿ ಓದಿನಲ್ಲಿ ತೊಡಗುವಂತೆ ಮಾಡುವುದು, ಪ್ರಾಯೋಗಿಕ ಚಟುವಟಿಕೆ ಮೂಲಕ ಅಭ್ಯಾಸದ ವಿಷಯ ತಿಳಿಸುವುದು ಇದರ ಉದ್ದೇಶವಾಗಿದೆ. ಮಕ್ಕಳ ಓದು ಉಲ್ಲಾಸ, ಉತ್ಸಾಹದಿಂದಿರುವಂತೆ ಮಾಡಿ ಅಭ್ಯಾಸ ಮಾಡಿಸಲಾಗುವುದು ಎಂದರು.

ಸಿಆರ್‌ಪಿ ವೀರೇಶ ಕೌಟಿ ಮಾತನಾಡಿ, ಕಲಿಕಾ ಹಬ್ಬದಲ್ಲಿ ಮಕ್ಕಳಿಗೆ ಮೂಲ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರ ಹೆಚ್ಚಿಸುವುದು, ಕಥೆ ಹೇಳುವುದು, ಮೋಜಿನ ಆಟಗಳು, ಗಟ್ಟಿ ಓದು, ಕೈಬರಹ ಹಾಗೂ ಇತರ ವಿಷಯಗಳ ಬಗ್ಗೆ ತಿಳಿಸಲಾಗುವುದು. ಮಕ್ಕಳಲ್ಲಿ ಅಡಗಿರುವ ಸೃಜನಾತ್ಮಕ ಗುಣ ಮತ್ತು ಕಲೆಯನ್ನು ಹೊರತರಲು ಪೂರ್ವತಯಾರಿ ನಡೆಸಲಾಗುತ್ತದೆ. ಒಟ್ಟಾರೆಯಾಗಿ ಪ್ರತಿ ಮಗುವು ಕಲಿಕೆಯಲ್ಲಿ ಮುಂದುವರಿಯುವಂತೆ ನೋಡಿಕೊಳ್ಳುವುದೇ ಕಲಿಕಾ ಹಬ್ಬದ ಉದ್ದೇಶ ಎಂದರು.

ಮುಖ್ಯ ಶಿಕ್ಷಕರಾದ ಮಲ್ಲಣ್ಣ ಗೊರವರ, ಅಶೋಕ, ಬಸವರಾಜ, ಮಲ್ಲಿಕಾರ್ಜುನಗೌಡ ಶರಭಗೌಡ್ರ, ಜಗದೀಶ, ಅಶೋಕ, ಸುರೇಶಬಾಬು, ಕನಕಪ್ಪ, ಅಂದಪ್ಪ ಚೈತನ್ಯ, ಗಿರಿಯಪ್ಪ, ಚಂದ್ರಶೇಖರ, ಜಂದಿಸಾಬ್, ಚೈತ್ರ, ಶಂಕ್ರಮ್ಮ, ಸಂಗೀತ, ರತ್ನಾ, ಮಂಜುಳಾ ಇತರರು ಇದ್ದರು.