ಅಳವಂಡಿ: ಕನ್ನಡ ಹೃದಯದ ಭಾಷೆಯಾಗಿದೆ. ಭಾಷೆ ನಮಗೆ ತಾಯಿ. ಆದ್ದರಿಂದ ಕನ್ನಡವನ್ನು ಉಳಿಸಿ ಬೆಳೆಸಬೇಕು ಎಂದು ಸಾಹಿತಿ ವೀಣಾ ಪಾಟೀಲ್ ಹೇಳಿದರು.
ಗ್ರಾಮದ ಖಾಸಗಿ ಶಾಲೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಅಳವಂಡಿ ಹೋಬಳಿ ಘಟಕ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯದಲ್ಲಿ ಯುವಕರ ಪಾತ್ರ ಕುರಿತ ಉಪನ್ಯಾಸದಲ್ಲಿ ಮಾತನಾಡಿದರು. ಕನ್ನಡ ಭಾಷೆ ಸಾಹಿತ್ಯ ಮೌಲ್ಯಗಳನ್ನು ಪುನರುತ್ಥಾನ ಮಾಡುತ್ತದೆ. ಟಿವಿ, ಮೊಬೈಲ್ ಹಾವಳಿಯಿಂದ ಓದು ಕಡಿಯಾಗಿದೆ. ಯುವಕರು ಪುಸ್ತಕ ಹಾಗೂ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಅತಿಯಾದ ಮೊಬೈಲ್ ಬಳಕೆ ಆರೋಗ್ಯಕ್ಕೆ ಹಾನಿಕಾರ. ಆಶ್ರಯ ನೀಡಿದ ಕನ್ನಡ ಭಾಷೆ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಿ ಎಂದರು.
ಸಾಹಿತಿ ನೀಲಪ್ಪ ಹಕ್ಕಂಡಿ ಮಾತನಾಡಿ, ವೈಜ್ಞಾನಿಕ ತಳಹದಿ ಮೇಲೆ ರೂಪುಗೊಂಡ ಮಾತೃ ಭಾಷೆ ಬಳಸಲು ಹಿಂಜರಿಕೆ ಬೇಡ. ಯುವಕರು ಕನ್ನಡ ಭಾಷೆ ಬಳಸಿ, ಇತರರಿಗೆ ಮಾತನಾಡಲು ತಿಳಿಸಬೇಕು. ಇದರಿಂದ ಕನ್ನಡ ಬೆಳೆಯಲಿದೆ ಎಂದರು.
ಇದೇ ಸಂದರ್ಭದಲ್ಲಿ ಸೌತ್ ಇಂಡಿಯಾ ವಿಮೆನ್ ಅಚೀವರ್ಸ್ ಪ್ರಶಸ್ತಿ ಪಡೆದ ಸಾಹಿತಿ ವೀಣಾ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.
ಕಸಾಪ ತಾಲೂಕಾಧ್ಯಕ್ಷ ರಾಮಚಂದ್ರಗೌಡ ಗೊಂಡಬಾಳ, ಹೋಬಳಿ ಘಟಕದ ಅಧ್ಯಕ್ಷ ಸುರೇಶ ಸಂಗರಡ್ಡಿ, ಗ್ರಾಪಂ ಉಪಾಧ್ಯಕ್ಷೆ ಶಾರಮ್ಮ ಇಳಿಗೇರ, ಮುಖ್ಯಶಿಕ್ಷಕ ರಫೀಕ್ ಬಳಿಗಾರ, ಸಾಹಿತಿ ಕಿರಣಕುಮಾರ ಅಂಗಡಿ, ಪ್ರಮುಖರಾದ ಬಸವರಾಜ ತಳಕಲ್, ಪ್ರತಿಭಾ ಮೇಟಿ, ರಮೇಶ ಸುಣಗಾರ, ಶಶಿಕುಮಾರ ಇತರರಿದ್ದರು.