ಅಳವಂಡಿ: ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡುವುದೇ ಪಾಲಕರ ಆದ್ಯ ಕರ್ತವ್ಯ ಎಂದು ಮುಖ್ಯಶಿಕ್ಷಕ ರಾಮಚಂದ್ರಗೌಡ ಗೊಂಡಬಾಳ ಹೇಳಿದರು.
ಸಮೀಪದ ನೀರಲಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಹಮ್ಮಿಕೊಂಡಿದ್ದ ವಿಶೇಷ ದಾಖಲಾತಿ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು. ಪ್ರತಿ ಮಗುವಿನ ಓದಿಗೆ ಪಾಲಕರು ಆದ್ಯತೆ ನೀಡಬೇಕು. ಮಕ್ಕಳಿಗೆ ಶಿಕ್ಷಕರು ನೀಡುವ ಮೂಲಕ ಖುಷಿ ಪಡಬೇಕು. ಶಿಕ್ಷಣದಿಂದ ಮಾತ್ರ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದರು.
ತಳಿರು, ತೋರಣ ಹಾಗೂ ಹೂಗಳಿಂದ ಅಲಂಕರಿಸಿದ ಎತ್ತಿನ ಬಂಡಿಯಲ್ಲಿ ಸರಸ್ವತಿ ಭಾವಚಿತ್ರವನ್ನಿರಿಸಿ ಕುಂಭ ಹಾಗೂ ಕಳಸ ಹಾಗೂ ವಾದ್ಯ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಯಿತು. ಮಕ್ಕಳು ಯಾರು ಕದಿಯದ ಆಸ್ತಿ, ಶಿಕ್ಷಣ, ಕಲಿತವರು ಕಲಿಸಿರಿ ಕಲಿಯದವರು ಕಲಿಯಿರಿ, ಎಲ್ಲರೂ ಮಕ್ಕಳ ಹಕ್ಕನ್ನು ರಕ್ಷಿಸಿರಿ, ಅರಿವೇ ಗುರು ಗುರುವೇ ಶಿಕ್ಷಣ, ಬಳಸಿದಷ್ಟು ಬೆಳೆಯುವ ಸಂಪತ್ತು ಶಿಕ್ಷಣ ಎಂಬ ಘೋಷಣೆ ಹಾಗೂ ಬಿತ್ತಿಪತ್ರಗಳನ್ನು ಹಿಡಿದುಕೊಂಡು ಮೆರವಣಿಗೆ ನಡೆಸಿದರು.
ಶಿಕ್ಷಕರಾದ ಕೃಷ್ಣಪ್ಪ ತಳಕಲ್, ಹನುಮಂತಪ್ಪ ಕಟಾಂಬ್ಲಿ, ಮಲ್ಲಪ್ಪ ಕುರಿ, ಆಶಾಬೀ ಹಡಗಲಿ, ಅಂದಪ್ಪ ಹಾರೋಗೇರಿ, ಟಾಟಾ ಕಲಿಕಾ ಟ್ರಸ್ಟ್‌ನ ಮೃತ್ಯುಂಜಯ ಬನ್ನೂರು, ಪ್ರಮುಖರಾದ ಮಂಜುನಾಥ ಕುರಿ, ಬೀರಪ್ಪ ಡೊಳ್ಳಿನ, ಸೋಮನಗೌಡ ಪಾಟೀಲ, ಅಂದಾನಯ್ಯ ಹಿರೇಮಠ, ಕರಿಯಪ್ಪ ಗಟ್ಟಿ ಇತರರಿದ್ದರು.